ರಾಷ್ಟ್ರ ರಾಜಧಾನಿಯಲ್ಲಿ ಮಳೆ ಅವಾಂತರ; ಇಬ್ಬರು ಮೃತ್ಯು, ವಿಮಾನ ಸಂಚಾರ ಅಸ್ತವ್ಯಸ್ತ
PC:x.com/manishrana
ಹೊಸದಿಲ್ಲಿ: ಕಾದ ಕೆಂಡದಂತಾಗಿದ್ದ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಸಂಜೆ ದಿಢೀರನೇ ವಾತಾವರಣ ಬದಲಾಗಿದ್ದು, ಆಲಿಕಲ್ಲು ಸಹಿತ ಭಾರಿ ಮಳೆ, ರಭಸದ ಗಾಳಿ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹಲವು ಕಡೆಗಳಲ್ಲಿ ಮರಗಳು ಬಿದ್ದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿವೆ. ಮೆಟ್ರೋ ರೈಲು, ವಿಮಾನ ಸಂಚಾರ ಸೇರಿದಂತೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ದೆಹಲಿ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುವ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ದೆಹಲಿ ಮೆಟ್ರೊ ರೈಲು ನಿಗಮದ ಹಳದಿ ಲೈನ್ ನಲ್ಲಿ ಪ್ರಯಾಣಿಕರು ಹಲವು ಗಂಟೆಗಳ ಕಾಲ ಅತಂತ್ರರಾಗಿ ಉಳಿಯಬೇಕಾಯಿತು.
ಅಕ್ಷರಧಾಮ ಮೇಲ್ಸೇತುವೆ, ಸಿಕಂದ್ರ ರಸ್ತೆ, ಐಟಿಓ ಸಮೀಪದ ತಿಲಕ್ ಬ್ರಿಡ್ಜ್ ಸೇರಿದಂತೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳು ಬವಣೆ ಪಡುವಂತಾಯಿತು.
ಮೋಡದ ದಟ್ಟಣೆ ಉತ್ತರ ದೆಹಲಿಯಿಂದ ದಕ್ಷಿಣ ದೆಹಲಿ ಮತ್ತು ಆಗ್ನೇಯ ಮಾರ್ಗವಾಗಿ ಮುಂದುವರಿದಿದ್ದರಿಂದ ಧೂಳು ಸಹಿತ ಬಿರುಗಾಳಿ ಬೀಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ತೀವ್ರ ತೇವಾಂಶ ಮತ್ತು ಪ್ರಖರ ಬಿಸಿಲಿನಿಂದಾಗಿ ಉಷ್ಣಸೂಚ್ಯಂಕ 50.2 ಡಿಗ್ರಿ ಸೆಲ್ಷಿಯಸ್ ತಲುಪಿದ್ದು, ಗರಿಷ್ಠ ತಾಪಮಾನ 40.7 ಡಿಗ್ರಿ ದಾಖಲಾಗಿದೆ. ಇದು ಸರಾಸರಿಗಿಂತ 0.5 ಡಿಗ್ರಿಯಷ್ಟು ಅಧಿಕ. ತೇವಾಂಶ ಶೇಕಡ 34ರಿಂದ 64ರವರೆಗೆ ವ್ಯತ್ಯಯವಾಗುತ್ತಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.
ಮಳೆ ಸಂಬಂಧಿ ಅನಾಹುತಗಳಲ್ಲಿ 22 ವರ್ಷದ ಯುವಕ ಹಾಗೂ ಅಂಗವಿಕಲ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇತರ 11 ಮಂದಿ ಗಾಯಗೊಂಡಿದ್ದಾರೆ. ದೆಹಲಿ- ನೋಯ್ಡಾ, ದೆಹಲಿ-ಗಾಜಿಯಾಬಾದ್ ಮತ್ತು ದೆಹಲಿ- ಗುರುಗ್ರಾಮ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಚಲಿಸುತ್ತಿರುವ ವಾಹನಗಳ ಮೇಲೆ ಮರ ಬೀಳುತ್ತಿರುವ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಬುಧವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ 13 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. 12 ವಿಮಾನಗಳನ್ನು ಜೈಪುರಕ್ಕೆ ಮತ್ತು ಒಂದು ಅಂತರರಾಷ್ಟ್ರೀಯ ವಿಮಾನವನ್ನು ಮುಂಬೈಗೆ ತಿರುಗಿಸಲಾಗಿದ್ದು, ವಿಮಾನ ಕಾರ್ಯಾಚರಣೆಯಲ್ಲಿ ಗಮನಾರ್ಹ ಅಡಚಣೆ ಉಂಟಾಗಿದೆ. ದೆಹಲಿಯಿಂದ ಹೊರಡುವ ವಿಮಾನಗಳ ಸಂಚಾರ ಕೂಡಾ ವ್ಯತ್ಯಯವಾಗಿದೆ.