×
Ad

ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ರಸ್ತೆ ತಡೆ; ಲಾಠಿ ಬೀಸಿ ಅಭಿಮಾನಿಗಳನ್ನು ಚದುರಿಸಿದ ಪೊಲೀಸರು!

Update: 2025-06-04 08:07 IST

PC: screengrab/x.com/ANI

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹದಿನೆಂಟು ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಅಭಿಮಾನಿಗಳು ಮಧ್ಯರಾತ್ರಿ ಬೀದಿಗೆ ಇಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ ದೃಶ್ಯ ಎಲ್ಲೆಡೆ ಕಂಡುಬಂತು. ಆದರೆ ಕೆಲವೆಡೆ ಅಭಿಮಾನಿಗಳ ಸಂಭ್ರಮಕ್ಕೆ ಪೊಲೀಸರು ತಣ್ಣೀರೆರಚಿದರು. ಕಲ್ಬುರ್ಗಿಯ ಎಸ್ ವಿಪಿ ಚೌಕದಲ್ಲಿ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದ ಅಭಿಮಾನಿಗಳನ್ನು  ಪೊಲೀಸರು ಲಾಠಿ ಬೀಸಿ ಚದುರಿಸಿದ ಬಗೆಗಿನ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಡ್ರಮ್, ಆರ್‌ಸಿಬಿ ಧ್ವಜಗಳೊಂದಿಗೆ ಬೀದಿಗಿಳಿದ ನೂರಾರು ಮಂದಿ ಅಭಿಮಾನಿಗಳ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆ, ಬೀದಿ ಬೀದಿಗಳಲ್ಲಿ ಮಾರ್ದನಿಸಿದವು.ಈ ವೇಳೆಸಂಚಾರ ವ್ಯವಸ್ಥೆಗೆ ತಡೆ ಉಂಟಾಯಿತು. ಪೊಲೀಸರು ತಕ್ಷಣವೇ ಸಂಭ್ರಮಾಚರಣೆಗೆ ತಡೆಯೊಡ್ಡಿ, ಹೆಚ್ಚುತ್ತಿದ್ದ ಅಭಿಮಾನಿಗಳ ಸಂಖ್ಯೆಯನ್ನು ಚದುರಿಸಲು ಲಾಠಿ ಬೀಸಿದ್ದು, ವಿಡಿಯೊದಲ್ಲಿ ಕಂಡುಬರುತ್ತಿದೆ.

ಶಾಂತಿಯುತವಾಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಅಭಿಮಾನಿಗಳ ಮೇಲೆ ಲಾಠಿ ಬೀಸಿದ ಪೊಲೀಸ್ ಕ್ರಮಕ್ಕೆ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ ಘಟನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಯಾರಿಗೂ ಗಾಯಗಳಾಗಿಲ್ಲ.     ಸಂಭ್ರಮಾಚರಣೆಯೂ ಸಂಪೂರ್ಣ ಸ್ಥಗಿತಗೊಳ್ಳಲಿಲ್ಲ. ಪೊಲೀಸರು ಲಾಠಿ ಬೀಸಿ ಅಭಿಮಾನಿಗಳನ್ನು ಚದುರಿಸಿದರೂ, ಅಲ್ಲಲ್ಲಿ ಅತ್ಯುತ್ಸಾಹದಿಂದ ಅಭಿಮಾನಿಗಳು ನೃತ್ಯ ಮಾಡುತ್ತಿದ್ದುದು ಕಂಡುಬಂತು.

ಆರ್‌ಸಿಬಿ ಅಭಿಮಾನಿಗಳು ಈ ಕ್ಷಣಕ್ಕಾಗಿ ಹದಿನೆಂಟು ವರ್ಷಗಳ ಸುಧೀರ್ಘ ಕಾಲ ಕಾತರಿಸುತ್ತಿದ್ದರು. ತಂಡ ಕೊನೆಗೂ ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸಿದ್ದು, ಈ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರನ್ನು ಪೊಲೀಸರು ಅಟ್ಟಾಡಿಸಿದ ಕ್ರಮ ಹಲವರಿಗೆ ಪಥ್ಯವಾಗಿಲ್ಲ.

ಈ ಜಯದೊಂದಿಗೆ ಪ್ರಸಕ್ತ ಐಪಿಎಲ್ ಸೀಸನ್ ಗೆ ತೆರೆಬಿದ್ದಿದ್ದು, ಆರ್‌ಸಿಬಿಯ ಪ್ರಶಸ್ತಿ ಪರೇಡ್ ಮತ್ತು ಸಂಭ್ರಮಾಚರಣೆಗಳು ಬುಧವಾರವೂ ಮುಂದುವರಿಯಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News