×
Ad

ಎಚ್‌ಡಿಕೆ ವಿರುದ್ಧದ ಸರಕಾರಿ ಜಮೀನು ಒತ್ತುವರಿ ಆರೋಪ; ರಾಜ್ಯ ಸರಕಾರದ ಮೇಲ್ಮನವಿ ಇತ್ಯರ್ಥ

Update: 2025-12-04 19:35 IST

ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತವರ ಸಂಬಂಧಿಗಳಿಂದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಸರಕಾರಿ ಭೂಮಿ ಒತ್ತುವರಿ ಆರೋಪ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಹೊರಡಿಸಲಾಗಿದ್ದ ಆದೇಶದಲ್ಲಿ ಮಾರ್ಪಾಡು ಮಾಡಿರುವುದು ಹಾಗೂ ರಾಮನಗರ ತಹಶೀಲ್ದಾರ್ ಜಾರಿ ಮಾಡಿದ್ದ ಸಮನ್ಸ್ ಹಿಂಪಡೆದಿರುವುದನ್ನು ಪರಿಗಣಿಸಿದ ಹೈಕೋರ್ಟ್, ರಾಜ್ಯ ಸರಕಾರದ ಮೇಲ್ಮನವಿಯನ್ನು ಇತ್ಯರ್ಥಪಡಿಸಿದೆ.

ಕೇತಗಾನಹಳ್ಳಿಯಲ್ಲಿನ ಜಮೀನಿನ ಹಕ್ಕುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ಎಚ್.ಡಿ. ಕುಮಾರಸ್ವಾಮಿ, ಅವರ ಸಂಬಂಧಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಮತ್ತವರ ಪತ್ನಿ ಪ್ರಮೀಳಾ ಇನ್ನಿತರರಿಗೆ ರಾಮನಗರ ತಹಶೀಲ್ದಾರ್ ಜಾರಿ ಮಾಡಿದ್ದ ಸಮನ್ಸ್‌ಗೆ ಏಕಸದಸ್ಯ ನ್ಯಾಯಪೀಠ ಮಧ್ಯಂತರ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿರುವ ಮೇಲ್ಮನವಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಭೂಕಂದಾಯ ಕಾಯ್ದೆ ಸೆಕ್ಷನ್‌ 28ರ ಅಡಿ ಈ ಹಿಂದೆ ಕುಮಾರಸ್ವಾಮಿ ಮತ್ತಿತರರಿಗೆ ರಾಮನಗರ ತಹಶೀಲ್ದಾರ್‌ ನೀಡಿದ್ದ ಸಮನ್ಸ್‌ ಹಿಂಪಡೆಯಲಾಗಿದ್ದು, ರಾಜ್ಯ ಸರಕಾರ ಅವರಿಗೆ ಹೊಸ ಸಮನ್ಸ್‌ ಜಾರಿಗೊಳಿಸಲಿದೆ. ಎಸ್‌ಐಟಿ ರಚನೆ ಮಾಡಿ 2025ರ ಜನವರಿ 28ರಂದು ಹೊರಡಿಸಿದ್ದ ಆದೇಶದಲ್ಲೂ ಮಾರ್ಪಾಡು ಮಾಡಲಾಗಿದೆ. ಆದ್ದರಿಂದ, ಮೇಲ್ಮನವಿಗಳನ್ನು ಇತ್ಯರ್ಥಪಡಿಬಸಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ರಾಜ್ಯ ಸರಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಈ ಹಿಂದೆ ಜಾರಿಮಾಡಲಾಗಿದ್ದ ಸಮನ್ಸ್‌ ಉಳಿಯುವುದಿಲ್ಲ. ಇದರ ಬಗೆಗಿನ ನ್ಯಾಯಾಂಗ ಪ್ರಕ್ರಿಯೆ ಅಗತ್ಯವಿಲ್ಲ. ಇನ್ನು ಇದಕ್ಕೆ ಸೀಮಿತವಾಗಿ ಮಾಡಿರುವ ಮಧ್ಯಂತರ ಆದೇಶವೂ ಉಳಿಯುವುದಿಲ್ಲ. ಜನವರಿ 28ರ ಎಸ್‌ಐಟಿ ರಚನೆ ಆದೇಶವೂ ಮಾರ್ಪಾಡವಾಗಿರುವುದರಿಂದ ಏಕಸದಸ್ಯ ನ್ಯಾಯಪೀಠದ ಮುಂದಿರುವ ವಾದಗಳನ್ನು ಈ ನ್ಯಾಯಾಲಯ ಪರಿಶೀಲಿಸಲು ಬಯಸುವುದಿಲ್ಲ ಎಂದು ಹೇಳಿತು.

ಪಕ್ಷಕಾರರು ತಮ್ಮ ಯಾವುದೇ ವಾದವನ್ನು ಮೂಲ ಅರ್ಜಿ ವಿಚಾರಣೆ ನಡೆಸುತ್ತಿರುವ ಏಕಸದಸ್ಯ ನ್ಯಾಯಪೀಠದ ಮುಂದೆ ಎತ್ತಬಹುದಾಗಿದೆ. ಪ್ರತಿವಾದಿಗಳು ಅಗತ್ಯ ಬಿದ್ದರೆ ಅರ್ಜಿ ಸಲ್ಲಿಸಬಹುದಾಗಿದ್ದು, ಕಾನೂನಿನ ಅನ್ವಯ ಮೆರಿಟ್‌ ಮೇಲೆ ಅವುಗಳನ್ನು ನಿರ್ಧರಿಸಲಾಗುವುದು ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದ ಪೀಠ, ಮೇಲ್ಮನವಿ ವಿಲೇವಾರಿ ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News