×
Ad

ನಾನಿಲ್ಲದಿದ್ದರೆ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದರು: ಅಮೆರಿಕ ಅಧ್ಯಕ್ಷರ ವಿರುದ್ಧ ಎಲಾನ್ ಮಸ್ಕ್ ವಾಗ್ದಾಳಿ

Update: 2025-06-06 07:30 IST

PC: x.com/CNBC

ವಾಷಿಂಗ್ಟನ್ ಡಿಸಿ: ನಾನಿಲ್ಲದಿದ್ದರೆ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದರು ಎಂದು ಅಮೆರಿಕ ಅಧ್ಯಕ್ಷರ ವಿರುದ್ಧ ಎಲಾನ್ ಮಸ್ಕ್ ವಾಗ್ದಾಳಿ ನಡೆಸಿದ್ದಾರೆ.  

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ವಾಗ್ದಂಡನೆ ವಿಧಿಸಬೇಕು ಹಾಗೂ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರು ಟ್ರಂಪ್ ಅವರಿಂದ ಅಧ್ಯಕ್ಷ ಹೊಣೆ ವಹಿಸಿಕೊಳ್ಳಬೇಕು ಎಂದು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಬಹಿರಂಗ ಹೇಳಿಕೆ ನೀಡಿದ್ದಾರೆ.

ನಾಟಕೀಯ ಬೆಳವಣಿಗೆಯಲ್ಲಿ ಟ್ರಂಪ್ ಹಾಗೂ ಮಸ್ಕ್ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದು, ಇಬ್ಬರ ನಡುವಿನ ವೈಮನಸ್ಯ ಜಗಜ್ಜಾಹೀರಾಗಿದೆ. ಆಪ್ತ ಸ್ನೇಹಿತರಾಗಿದ್ದ ಇಬ್ಬರು ಕೋಟ್ಯಧಿಪತಿಗಳು ಇದೀಗ ಪರಸ್ಪರ ವೈರಿಗಳಾಗಿ ಮಾರ್ಪಟ್ಟಿದ್ದು, ಬಹಿರಂಗವಾಗಿ ಒಬ್ಬರನ್ನೊಬ್ಬರು ಗುರಿ ಮಾಡಿ ಹೇಳಿಕೆ ನೀಡುತ್ತಿದ್ದಾರೆ.

ಎಲಾನ್ ಮಸ್ಕ್ ಅವರು ಸ್ಫೋಟಕ ಹೇಳಿಕೆ ನೀಡಿ, ಎಪ್ಸ್ಟೀನ್ ಕಡತಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿದ್ದು, ಈ ಕಾರಣದಿಂದ ಈ ತನಿಖೆಯ ಅಂಶಗಳನ್ನು ಬಹಿರಂಗಪಡಿಸಿಲ್ಲ ಎಂದು ಪ್ರತಿಪಾದಿಸಿದ್ದಾರೆ. ತಮ್ಮ ಎಕ್ಸ್ ಪ್ಲಾಟ್‌ಫಾರಂನಲ್ಲಿ ಮಸ್ಕ್ ಈ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

"ನಿಜವಾಗಿಯೂ ದೊಡ್ಡ ಬಾಂಬ್ ಸಿಡಿಸುವ ಸಮಯ ಬಂದಿದೆ. ಟ್ರಂಪ್ ಹೆಸರು ಎಪ್ಸ್ಟೀನ್ ಕಡತಗಳಲ್ಲಿದೆ. ತನಿಖೆಯ ವರದಿಯನ್ನು ಬಹಿರಂಗಪಡಿಸದಿರಲು ನಿಜವಾದ ಕಾರಣ ಅದು. ಡಿಜೆಟಿ, ಶುಭದಿನ..!" ಎಂದು ಮಸ್ಕ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ದೊಡ್ಡ ಸುಂದರ ಮಸೂದೆಯನ್ನು ವಿರೋಧಿಸಿದ ಕಾರಣಕ್ಕೆ ಎಲಾನ್ ಬಗ್ಗೆ ತೀವ್ರ ಅಸಮಾಧಾನವಿದೆ ಎಂದು ಟ್ರಂಪ್ ಹೇಳಿಕೆ ನೀಡಿದ ಒಂದು ಗಂಟೆಯಲ್ಲೇ ಮಸ್ಕ್ ಈ ಪೋಸ್ಟ್ ಮಾಡಿದ್ದಾರೆ.

"ಈ ಪೋಸ್ಟ್ ಅನ್ನು ಭವಿಷ್ಯಕ್ಕಾಗಿ ಗುರುತಿಸಿ ಇಟ್ಟುಕೊಳ್ಳಿ. ಸತ್ಯ ಬಹಿರಂಗವಾಗಲಿದೆ" ಎಂದು ಮಸ್ಕ್ ಬಣ್ಣಿಸಿದ್ದಾರೆ. ಟ್ರಂಪ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಬೇಕು ಎಂಬ ಜಾಲತಾಣ ಪೋಸ್ಟ್ ಗೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ.

ಕಳೆದ ಒಂಬತ್ತು ತಿಂಗಳಿಂದ ಆಪ್ತ ಸ್ನೇಹಿತರಾಗಿದ್ದ ಟ್ರಂಪ್ ಹಾಗೂ ಮಸ್ಕ್ ನಡುವಿನ ಸಂಬಂಧ ಕಳೆದ ಒಂದು ವಾರದಿಂದ ಹಳಸಿತ್ತು; ಅದರಲ್ಲೂ ಕಳೆದ 24 ಗಂಟೆಗಳಲ್ಲಿ ಇದು ಸ್ಫೋಟಕ ರೂಪ ಪಡೆದಿದೆ. ಮಸೂದೆಯನ್ನು ಮಸ್ಕ್ ವಿರೋಧಿಸಿದ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಸ್ಕ್, "ನಾನು ಇಲ್ಲದಿದ್ದರೆ ಟ್ರಂಪ್ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿದ್ದರು. ಡೆಮಾಕ್ರಟಿಕ್ ಪಕ್ಷದವರು ಸದನವನ್ನು ನಿಯಂತ್ರಿಸಿದರೆ ರಿಪಬ್ಲಿಕನ್ನರು ಸೆನೆಟ್ ನಲ್ಲಿ 51-49 ಬಹುಮತ ಸಾಧಿಸುತ್ತಿದ್ದರು..ಅಂಥ ಕೃತಘ್ನತೆ" ಎಂದು ಪೋಸ್ಟ್ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News