×
Ad

ಭಯೋತ್ಪಾದನೆಗೆ ಧರ್ಮವಿದೆಯೇ?

Update: 2025-11-19 06:42 IST

PC: x.com/drshamamohd

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ಉತ್ತರ ಪ್ರದೇಶದ ಸಹರಾನ್ ಪುರದ ದಿಯೋಬಂದ್‌ನ ಪೊಲೀಸ್ ಇನ್‌ಸ್ಪೆಕ್ಟರ್ ನರೇಂದ್ರ ಕುಮಾರ್ ಶರ್ಮ ಎಂಬವರ ವಿರುದ್ಧ ಅಲ್ಲಿನ ಸರಕಾರ ಕರ್ತವ್ಯದಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ತೆಗೆದುಕೊಂಡಿತು. ಈತ ಮಾಡಿದ ಮಹಾಪರಾಧವೆಂದರೆ, ಸಾಮಾಜಿಕ ಶಾಂತಿ ಸೌಹಾರ್ದವನ್ನು ಕಾಪಾಡಲು ಕರೆ ನೀಡಿರುವುದು. ಪೊಲೀಸ್ ಅಧಿಕಾರಿಗಳು ಸಮಾಜದ ಶಾಂತಿ ಸೌಹಾರ್ದವನ್ನು ಕಾಪಾಡಿದರೆ, ರಾಜಕಾರಣಿಗಳ ಗತಿ ಏನಾಗಬೇಕು ಎನ್ನುವ ಭಯದಿಂದ ಈತನ ಮೇಲೆ ಈ ಕ್ರಮ ತೆಗೆದುಕೊಂಡಿರಬೇಕು ಎಂದು ಸಾರ್ವಜನಿಕರು ಇದೀಗ ಆಡಿಕೊಳ್ಳುತ್ತಿದ್ದಾರೆ.

ದಿಲ್ಲಿ ಸ್ಫೋಟದ ಆನಂತರ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ವದಂತಿಗಳನ್ನು ಹರಡಿ ಕೆಲವು ಕೋಮುಗಲಭೆಗಳಿಗೆ ಸಂಚು ರೂಪಿಸುತ್ತಿರುವುದು ಈ ಅಧಿಕಾರಿಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ದಿಯೋ ಬಂದ್ ಪೊಲೀಸ್ ಠಾಣೆಯಲ್ಲಿ ಈತನ ನೇತೃತ್ವದಲ್ಲಿ ಸಭೆಯೊಂದನ್ನು ಕರೆಯಲಾಗಿದ್ದು ಅದರಲ್ಲಿ ಮಾತನಾಡುತ್ತಾ ‘‘ಭಯೋತ್ಪಾದನೆಗೆ ಮತ್ತು ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಎಲ್ಲ ಧರ್ಮಗಳಲ್ಲೂ ಭಯೋತ್ಪಾದಕರು ಕಂಡು ಬರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ತಪ್ಪುದಾರಿಗೆಳೆಯುವ ಸಂದೇಶಗಳನ್ನು ಜನರು ನಂಬಬಾರದು’’ ಎಂದು ಜನರಿಗೆ ಕರೆ ನೀಡಿದ್ದಾರೆ. ಮುಂದುವರಿದು ‘‘ನಕ್ಸಲರು ಹಿಂದೂ ಸಮುದಾಯದಲ್ಲೂ ಇದ್ದಾರೆ. ನೌಕಾಪಡೆಯಲ್ಲಿ ಸಿಕ್ಕಿದ್ದ ಭಯೋತ್ಪಾದಕ ಬೆಂಬಲಿಗರು ಹಿಂದೂ ಸಮುದಾಯಕ್ಕೆ ಸೇರಿದವರಿದ್ದಾರೆ. ಸೈನ್ಯದಲ್ಲೂ ಹಲವರನ್ನು ಬಂಧಿಸಲಾಗಿದೆ. ಹಲವು ಹಿಂದೂ, ಸಿಖ್ ಭಯೋತ್ಪಾದಕರನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ. ಕೇವಲ ಮುಸ್ಲಿಮರು ಮಾತ್ರ ಭಯೋತ್ಪಾದಕರು ಎಂದು ಹೇಳುವುದು ತಪ್ಪು’’ ಎಂದು ತಿಳಿ ಹೇಳಿದ್ದಾರೆ. ಪೊಲೀಸ್ ಅಧಿಕಾರಿಯ ಈ ಮಾತುಗಳು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಫೋಟವನ್ನು ಮುಂದಿಟ್ಟು ಸಮಾಜವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಯತ್ನಿಸುತ್ತಿದ್ದ ಶಕ್ತಿಗಳ ಕಿವಿಗೆ ಪೊಲೀಸ್ ಅಧಿಕಾರಿಯ ಈ ಮಾತುಗಳು ಕಾದ ಸೀಸವನ್ನು ಸುರಿದಂತಾಗಿತ್ತು. ಪರಿಣಾಮವಾಗಿ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತುಕ್ರಮವನ್ನು ತೆಗೆದುಕೊಳ್ಳಲು ಆದೇಶವಾಯಿತು. ಇದೀಗ ಶರ್ಮ ಅವರು ಕೆಲಸದಿಂದ ತಾತ್ಕಾಲಿಕವಾಗಿ ವಿಶ್ರಮಿಸಿದ್ದಾರೆ.

ಈ ಶಿಸ್ತುಕ್ರಮದ ಮೂಲಕ ಉತ್ತರ ಪ್ರದೇಶದ ಪೊಲೀಸ್ ಇಲಾಖೆಗೆ ಅಲ್ಲಿನ ಸರಕಾರ ಯಾವ ಸಂದೇಶವನ್ನು ನೀಡಿದೆ ಎನ್ನುವುದು ಸ್ಪಷ್ಟ. ಭಯೋತ್ಪಾದನೆ, ಉಗ್ರವಾದಿ ಕೃತ್ಯಗಳಿಗೆ ಸಂಬಂಧಿಸಿ ಒಂದು ನಿರ್ದಿಷ್ಟ ಸಮುದಾಯವನ್ನಷ್ಟೇ ಗುರಿ ಮಾಡಿ ತನಿಖೆ ನಡೆಸಬೇಕು ಎನ್ನುವ ಸೂಚನೆಯನ್ನು ಈ ಮೂಲಕ ಪೊಲೀಸರಿಗೆ ಸರಕಾರ ನೀಡಿದಂತಾಗಿದೆ. ಒಂದು ವೇಳೆ, ಭಯೋತ್ಪಾದನೆ ಕೃತ್ಯದಲ್ಲಿ ಯಾವುದೇ ಹಿಂದೂಗಳನ್ನು ಬಂಧಿಸಿದರೆ ಅವರಿಗೆ ನರೇಂದ್ರ ಕುಮಾರ್ ಶರ್ಮಗೆ ಒದಗಿದ ಗತಿಯೇ ಒದಗುತ್ತದೆ ಎನ್ನುವ ಎಚ್ಚರಿಕೆ ಇದರಲ್ಲಿದೆ. ಇದೇ ಸಂದರ್ಭದಲ್ಲಿ, ಜನರಲ್ಲಿ ಸೌಹಾರ್ದವನ್ನು ಬಿತ್ತುವ ಕೆಲಸವನ್ನು ಮಾಡಿದ ಪೊಲೀಸ್ ಅಧಿಕಾರಿಗಳ ಸ್ಥಿತಿ ಏನಾಗುತ್ತದೆ ಎನ್ನುವುದನ್ನೂ ಸ್ಪಷ್ಟಪಡಿಸಿದಂತಾಗಿದೆ. ದಿಲ್ಲಿಯಲ್ಲಿ ಸ್ಫೋಟ ನಡೆದ ಬೆನ್ನಿಗೇ ಕೆಲವು ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳು ಆರೋಪಿಗಳನ್ನು ಘೋಷಿಸಿ ಅವರ ವಿರುದ್ಧ ತೀರ್ಪು ನೀಡಿಯಾಗಿತ್ತು. ಪೊಲೀಸರ ತನಿಖೆ ಯಾವ ದಿಕ್ಕಿನಲ್ಲಿ ನಡೆಯಬೇಕು ಎನ್ನುವ ಪರೋಕ್ಷ ಒತ್ತಡ ಅದರಲ್ಲಿತ್ತು. ಈ ಹಿಂದಿನ ಹಲವು ಸ್ಫೋಟ ತನಿಖೆಗಳು ಇದೇ ರೀತಿಯಲ್ಲಿ ಪೂವಾಗ್ರಹ ಪೀಡಿತವಾಗಿತ್ತು. ಮಾಲೆಗಾಂವ್ ಸ್ಫೋಟ, ಅಜ್ಮೀರ್ ಸ್ಫೋಟಗಳಿಗೆ ಸಂಬಂಧಿಸಿ ಆರಂಭದಲ್ಲಿ ಆತುರಾತುರವಾಗಿ ತನಿಖೆ ನಡೆಸಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಕೆಲವು ತರುಣರನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದರು. ಆದರೆ, ಹೇಮಂತ್ ಕರ್ಕರೆ ನೇತೃತ್ವದ ಭಯೋತ್ಪಾದನಾ ನಿಗ್ರಹ ದಳವು ಈ ಸ್ಫೋಟಗಳಲ್ಲಿ ಕೇಸರಿ ಉಗ್ರರು ಶಾಮೀಲಾಗಿರುವುದನ್ನು ಬೆಳಕಿಗೆ ತಂದಿತು. ಆ ಬಳಿಕ ಸ್ಫೋಟಕ್ಕೆ ಸಂಬಂಧಿಸಿ ಪುರೋಹಿತ್, ಪ್ರಜ್ಞಾಠಾಕೂರ್, ಅಸೀಮಾನಂದ ಮೊದಲಾದ ಹೆಸರುಗಳು ಮುನ್ನೆಲೆಗೆ ಬಂದವು. ಇನ್‌ಸ್ಪೆಕ್ಟರ್ ನರೇಂದ್ರ ಕುಮಾರ್ ಶರ್ಮ ಈ ಹಿನ್ನೆಲೆಯಲ್ಲೇ ‘ಭಯೋತ್ಪಾದನೆಗೆ ಧರ್ಮವಿಲ್ಲ’ ಎಂದು ಹೇಳಿದ್ದರು. ಆದರೆ ಉತ್ತರ ಪ್ರದೇಶ ಸರಕಾರಕ್ಕೆ ಈ ಪೊಲೀಸ್ ಅಧಿಕಾರಿಯ ಮಾತುಗಳು ಪಥ್ಯವಾಗಲಿಲ್ಲ.

ಭಯೋತ್ಪಾದನೆಗೆ ಧರ್ಮವಿಲ್ಲ ಎಂದ ಕಾರಣಕ್ಕೆ ಕ್ರಮ ತೆಗೆದುಕೊಳ್ಳುವುದೇ ಆಗಿದ್ದರೆ, ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ದೋವಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. 2014ರಲ್ಲಿ ಧೋವಲ್ ಅವರು ಭಯೋತ್ಪಾದಕರ ಬಗ್ಗೆ ನೀಡಿದ ವಿವರಣೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರಂಭದಲ್ಲಿ ಇದು ತಿರುಚಲ್ಪಟ್ಟ ವೀಡಿಯೊ ಎಂದು ದೋವಲ್ ನಿರಾಕರಿಸಿದರೂ, ಇದೀಗ ಇದು ಅಸಲಿ ವೀಡಿಯೊ ಎನ್ನುವುದು ಬಯಲಾಗಿದೆ. ಈ ಮಾತುಗಳನ್ನಾಡಿದಾಗ ಇನ್ನೂ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಧಿಕಾರ ಸ್ವೀಕರಿಸಿರಲಿಲ್ಲ. 2014 ಮಾರ್ಚ್ 11ರಂದು ನಡೆದ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘‘1947ರಿಂದ ಪಾಕಿಸ್ತಾನದ ಐಎಸ್‌ಐ ಏಜೆಂಟರಾಗಿ ನೇಮಕ ಮಾಡಿದವರಲ್ಲಿ ಶೇ.80ರಷ್ಟೂ ಹಿಂದೂಗಳು’’ ಎಂದು ಹೇಳಿದ್ದರು. ಐಎಸ್‌ಐ ಏಜೆಂಟರಲ್ಲಿ ಶೇ.20ರಷ್ಟೂ ಮುಸ್ಲಿಮರಿರಲಿಲ್ಲ. ಭಯೋತ್ಪಾದನೆಯನ್ನು ಕೋಮು ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಬೇಕು ಎಂದು ಕರೆ ನೀಡಿದ್ದ ಅವರು, ಜಾಗತಿಕ ಭಯೋತ್ಪಾದನೆಯ ಅತಿ ಹೆಚ್ಚು ಸಂತ್ರಸ್ತರು, ಬಲಿ ಪಶುಗಳು ಮುಸ್ಲಿಮರೇ ಆಗಿದ್ದಾರೆ ಎಂದು ಹೇಳಿದ್ದರು. 2012ರಲ್ಲಿ ರಾಮಲೀಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ 50,000 ಮೌಲಾನಾಗಳು ಒಂದಾಗಿ ಭಯೋತ್ಪಾದನೆಯ ವಿರುದ್ಧ ಫತ್ವಾ ಹೊರಡಿಸಿದ್ದನ್ನೂ ಈ ವೀಡಿಯೊದಲ್ಲಿ ಸ್ಮರಿಸಿದ್ದರು. ಅವರು ಆಡಿದ್ದಾರೆನ್ನಲಾಗಿರುವ ವೈರಲ್ ಆಗಿರುವ ವೀಡಿಯೊ ಅಸಲಿಯೆನ್ನುವುದು ಇದೀಗ ಗೊತ್ತಾಗಿದೆ. ಹೀಗಿರುವಾಗ ಸರಕಾರ ಇವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆಯೇ ಎಂದು ಜನರು ಕೇಳುವಂತಾಗಿದೆ.

ಅಜಿತ್ ದೋವಲ್ ಮಾತುಗಳಲ್ಲಿ ಯಾವುದೇ ಉತ್ಪ್ರೇಕ್ಷೆಯಿರಲಿಲ್ಲ. ಇತ್ತೀಚೆಗೆ ಪಾಕಿಸ್ತಾನ ಪರ ಗೂಢಚಾರ ಮಾಡಿ ಹಲವು ಆರೆಸ್ಸೆಸ್ ಕಾರ್ಯಕರ್ತರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಪಾಕಿಸ್ತಾನ ಪರ ಗೂಢಚಾರಿಕೆ ಮಾಡಿದ ಆರೋಪ ಹೊತ್ತಿರುವ ಧ್ರುವ ಸಕ್ಸೇನಾ, ಚಮನ್‌ಲಾಲ್, ಅಚ್ಯುತಾನಂದ ಮಿಶ್ರಾ, ವಿಕಾಸ್ ಪಾಂಡೆ ಮೊದಲಾದವರು ಯಾವ ಧರ್ಮಕ್ಕೆ ಸೇರಿದವರು? ರಾಷ್ಟ್ರಪಿತ ಮಹಾತ್ಮಾಗಾಂಧಿಯನ್ನು ಕೊಂದವನ ಧರ್ಮಯಾವುದು? ಈ ದೇಶದ ಇಬ್ಬರು ಪ್ರಧಾನಮಂತ್ರಿಗಳನ್ನು ಕೊಂದವರ ಧರ್ಮ ಯಾವುದು? ಅಜ್ಮೀರ್ ಸ್ಫೋಟ, ಸಂಜೋತಾ ರೈಲು ಸ್ಫೋಟ, ಮಕ್ಕಾ ಮಸೀದಿ ಸ್ಫೋಟದಂತಹ ಕೃತ್ಯಗಳಲ್ಲಿ ಭಾಗವಹಿಸಿದವರ ಧರ್ಮ ಯಾವುದು? ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ನಡೆಸಿದ ಭಯೋತ್ಪಾದನೆ ಕೃತ್ಯಗಳಷ್ಟೇ ಖಂಡಿಸಲು ಯೋಗ್ಯ. ಉಳಿದ ಕೃತ್ಯಗಳು ಮಾನ್ಯ ಎನ್ನುವ ದ್ವಂದ್ವವೇ ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣ. ಯಾವಾಗ ಭಯೋತ್ಪದನೆ, ಉಗ್ರವಾದವನ್ನು ಧರ್ಮದ ಕನ್ನಡಕವನ್ನು ಕಳಚಿಟ್ಟು ನೋಡಲು ನಮ್ಮ ಸರಕಾರ ಕಲಿಯುತ್ತದೆಯೋ ಆಗ, ಈ ದೇಶದಲ್ಲಿ ಭಯೋತ್ಪಾದನ ಕೃತ್ಯಗಳು ಇಳಿಮುಖವಾಗತೊಡಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News