×
Ad

ಭಾರತಕ್ಕೆ ಮುಜುಗರ ತಂದ ಎಪ್ಸ್ಟೀನ್ ಪಾತಕಿಯ ಕಡತ

Update: 2026-02-02 08:20 IST

ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ದಾಖಲೆಗಳು ಭಾರತದಲ್ಲೂ ಸುದ್ದಿ ಮಾಡುತ್ತಿವೆ. ಅಮೆರಿಕ ನ್ಯಾಯಾಂಗ ಇಲಾಖೆಯು ಬಿಡುಗಡೆ ಮಾಡಿದ ಸುಮಾರು ಮೂರು ಮಿಲಿಯನ್ ಪುಟಗಳನ್ನು ಮೀರಿದೆ ಎನ್ನಲಾಗುತ್ತಿರುವ ಈ ದಾಖಲೆಗಳು 2,000ಕ್ಕೂ ಹೆಚ್ಚು ವೀಡಿಯೊಗಳು ಮತ್ತು ಸುಮಾರು 1,80,000 ಚಿತ್ರಗಳನ್ನು ಒಳಗೊಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಹಲವು ನಾಯಕರ ಹಲವು ಹಗರಣಗಳು ಈ ದಾಖಲೆಗಳ ಮೂಲಕ ಹೊರಗೆ ಬರುವ ಸಾಧ್ಯತೆಗಳಿವೆಯಾದುದರಿಂದ ಇದು ಮಹತ್ವವನ್ನು ಪಡೆದುಕೊಂಡಿದೆ. ಸ್ಲೋವಾಸ್ಕಿಯಾದ ಭದ್ರತಾ ಸಿಬ್ಬಂದಿಯ ಬಲಿಯನ್ನು ಈಗಾಗಲೇ ಪಡೆದಿರುವ ಕಡತ, ಇನ್ನು ಹಲವು ಬಲಿಗಳನ್ನು ಪಡೆಯುವ ಸಾಧ್ಯತೆಗಳು ಕಾಣುತ್ತಿವೆ. ಹಲವು ರಾಜಕೀಯ, ಸಾಂಸ್ಕೃತಿಕ ಗಣ್ಯರು ಹೊಂದಿರುವ ಅಂತರ್‌ರಾಷ್ಟ್ರೀಯ ರಾಜಕೀಯ ಸಂಪರ್ಕಗಳು, ಪಾತಕ ಜಗತ್ತಿನ ಜೊತೆಗೆ ಅವರಿಗಿರುವ ಸಂಬಂಧಗಳನ್ನು ಎಪ್‌ಸ್ಟೀನ್ ಕಡತ ಸೂಕ್ಷ್ಮವಾಗಿ ಹೇಳುತ್ತದೆ. ಸದ್ಯದ ಜಾಗತಿಕ ರಾಜಕೀಯ ಬೆಳವಣಿಗೆಗಳ ಮೇಲೆ ಈ ಸಂಪರ್ಕ, ಸಂಬಂಧಗಳು ಪರಿಣಾಮ ಬೀರಿರುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕಳವಳಕಾರಿ ರಾಜಕೀಯ ನಡೆಗಳು

ಎಪ್‌ಸ್ಟೀನ್‌ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ಈ ದಾಖಲೆಗಳ ಪ್ರಕಾರ ಟ್ರಂಪ್ ಅಥವಾ ಅಮೆರಿಕ ಇಸ್ರೇಲ್‌ನ ಹಿಡಿತದಲ್ಲಿದೆ. ಟ್ರಂಪ್ ಕುಟುಂಬವು ಝಿಯೋನಿಸ್ಟ್ ಚಾಬಾದ್ ಜಾಲದೊಂದಿಗೆ ಸಂಪರ್ಕಗಳನ್ನು ಹೊಂದಿರುವ ಬಗ್ಗೆಯೂ ಈ ದಾಖಲೆಗಳು ಹೇಳುತ್ತಿವೆ. ಟ್ರಂಪ್ ತೆಗೆದುಕೊಂಡಿರುವ ಹಲವು ಆತ್ಮಹತ್ಯೆಗೆ ಸಮನಾದ ರಾಜಕೀಯ ನಿರ್ಧಾರಗಳ ಹಿಂದೆ ಅಂತರ್‌ರಾಷ್ಟ್ರೀಯ ಮಟ್ಟದ ‘ಬ್ಲ್ಯಾಕ್‌ಮೇಲ್’ಗಳು ಕೆಲಸ ಮಾಡಿರಬಹುದೇ ಎಂದು ಅನುಮಾನಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ಭಾರತದ ಹೆಸರೂ ಈ ಲೈಂಗಿಕ ಅಪರಾಧಿಯ ದಾಖಲೆಗಳಲ್ಲಿ ಸೇರ್ಪಡೆಗೊಂಡಿರುವುದು ವಿಪರ್ಯಾಸವಾಗಿದೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿ ಬಗ್ಗೆ ಉಲ್ಲೇಖಿಸಿದ್ದ ಇಮೇಲ್ ವಿವರಗಳು ಇದೀಗ ಅಮೆರಿಕ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಕಡತದಲ್ಲಿದೆ ಎನ್ನಲಾಗುತ್ತಿದೆ. ಆದರೆ ಈ ಉಲ್ಲೇಖವನ್ನು ‘ಅಪರಾಧಿಯೊಬ್ಬನ ನಕಲಿ ವದಂತಿಗಳು’ ಎಂದು ಕರೆದು ವಿದೇಶಾಂಗ ಸಚಿವಾಲಯ ಸಾರಾಸಗಟಾಗಿ ತಿರಸ್ಕರಿಸಿದೆ. ಅಮೆರಿಕದ ಅಧ್ಯಕ್ಷರಿಗಾಗಿ ಪ್ರಧಾನಿ ಮೋದಿಯವರು ಇಸ್ರೇಲ್‌ಗೆ ಭೇಟಿ ಕೊಟ್ಟಿದ್ದರು ಎಂದು ದಾಖಲೆಗಳು ಹೇಳುತ್ತವೆ. ‘‘ಎಪ್‌ಸ್ಟೀನ್ ಕಡತಗಳಲ್ಲಿ ಪ್ರಧಾನಿ ಮೋದಿ ಮತ್ತು ಅವರ ಇಸ್ರೇಲ್ ಭೇಟಿಯ ಉಲ್ಲೇಖವಿರುವ ಇಮೇಲ್ ಸಂದೇಶದ ವರದಿಗಳನ್ನು ನಾವು ನೋಡಿದ್ದೇವೆ. ಜುಲೈ 2017ರಲ್ಲಿ ಪ್ರಧಾನಿಯವರ ಇಸ್ರೇಲ್ ಅಧಿಕೃತ ಭೇಟಿಯ ಸಂಗತಿಯನ್ನು ಮೀರಿ, ಇಮೇಲ್‌ನಲ್ಲಿರುವ ಉಳಿದ ಪ್ರಸ್ತಾವಗಳು ಅಪರಾಧಿಯೊಬ್ಬರ ಸುಳ್ಳು ಕಥೆಗಳು. ಅದು ಅತ್ಯಂತ ತಿರಸ್ಕಾರದಿಂದ ವಜಾಗೊಳಿಸಬೇಕಾದ ವಿಷಯವಾಗಿದೆ’’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಅಪರಾಧಿಯ ಕಡತದಲ್ಲಿ ಪ್ರಧಾನಿ ಮೋದಿಯ ಹೆಸರು ಹೇಗೆ, ಯಾಕೆ ಪ್ರಸ್ತಾಪವಾಯಿತು? ಎನ್ನುವ ಪ್ರಶ್ನೆಗೆ ವಿದೇಶಾಂಗ ಸಚಿವಾಲಯದ ಬಳಿ ಉತ್ತರವಿಲ್ಲ. ಒಬ್ಬ ಅಪರಾಧಿಯ ಕಡತದಲ್ಲಿ ಪ್ರಧಾನಿಯ ಹೆಸರು ಸೇರಿಕೊಂಡಿರುವುದು ಈ ದೇಶಕ್ಕೆ ಘನತೆ ತರುವ ವಿಷಯವೇ? ಎಂದು ಜನರ ಪ್ರಶ್ನೆಗೆ ಸರಕಾರದ ಬಳಿ ಉತ್ತರವಿಲ್ಲ.

ಎಪ್‌ಸ್ಟೀನ್ ಕಡತದಲ್ಲಿ ಭಾರತದ ಹಲವು ರಾಜಕಾರಣಿಗಳ ಹೆಸರುಗಳು ಸೇರ್ಪಡೆಗೊಂಡಿವೆ ಎಂಬ ಶಂಕೆ ಈ ಹಿಂದೆಯೇ ವ್ಯಕ್ತವಾಗಿತ್ತು. ಹಾಗೆ ವ್ಯಕ್ತಪಡಿಸಿದವರಲ್ಲಿ ಬಿಜೆಪಿಯ ಮುಖಂಡರಲ್ಲಿ ಒಬ್ಬರಾಗಿರುವ ಸುಬ್ರಮಣಿಯನ್ ಸ್ವಾಮಿ ಕೂಡ ಸೇರಿದ್ದಾರೆ. ಸ್ವತಃ ಬಿಜೆಪಿಯೊಳಗಿರುವ ನಾಯಕರೇ ಈ ಬಗ್ಗೆ ಅನುಮಾನ ಪಡಿಸುತ್ತಿರುವಾಗ, ಎಪ್‌ಸ್ಟೀನ್‌ನ ದಾಖಲೆಗಳು ವಿಶ್ವಾಸಕ್ಕೆ ಅರ್ಹವಲ್ಲ ಎಂದು ಹೇಳುವ ಮೂಲಕ ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟುಕೊಳ್ಳುವುದು ಎಷ್ಟು ಸರಿ? ಈ ಕಾರಣದಿಂದಲೇ, ಎಪ್‌ಸ್ಟೀನ್ ಕಡತಗಳಲ್ಲಿ ಭಾರತೀಯ ಸಚಿವರ ಹೆಸರುಗಳಿವೆಯೇ? ಎನ್ನುವ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟೀಕರಣ ನೀಡಬೇಕು ಎನ್ನುವ ಸುಬ್ರಮಣಿಯನ್ ಅವರ ಬೇಡಿಕೆ ಮಹತ್ವವನ್ನು ಪಡೆಯುತ್ತದೆ. ಕಡತಗಳು ಪ್ರಸ್ತಾಪಿಸಿರುವ ವಿಷಯ ಸುಳ್ಳೇ ಆಗಿದ್ದರೂ ಆ ಕಡತದಲ್ಲಿ ಯಾವೆಲ್ಲ ಭಾರತೀಯರ ಹೆಸರುಗಳಿವೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ಖಂಡಿತವಾಗಿಯೂ ಈ ದೇಶದ ಜನತೆಗೆ ಇದೆ. ಕೆಲವರ ಹೆಸರುಗಳನ್ನು ಅಮೆರಿಕವು ಉದ್ದೇಶಪೂರ್ವಕವಾಗಿ ಬಹಿರಂಗ ಪಡಿಸದೇ ಇರುವ ಸಾಧ್ಯತೆಗಳಿವೆ. ಬೇರೆ ಬೇರೆ ಹಗರಣಗಳಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿಗಳನ್ನು ಬಳಸಿಕೊಂಡು ತನ್ನ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುವಲ್ಲಿ ಅಮೆರಿಕವು ಈ ಹಿಂದೆಯು ಪ್ರಯತ್ನಿಸಿದೆ. ಆದುದರಿಂದ, ಈಗಾಗಲೇ ಹೆಸರು ಬಹಿರಂಗವಾಗಿರುವ ರಾಜಕಾರಣಿಗಳಿಗಿಂತ, ಇನ್ನೂ ಕಡತದಲ್ಲಿದ್ದೂ ಬಹಿರಂಗವಾಗದ ರಾಜಕಾರಣಿಗಳು ಭಾರತದ ಪಾಲಿಗೆ ಅನಾಹುತಗಳನ್ನು ತಂದಿಡಬಲ್ಲರು.

ಇತ್ತೀಚೆಗೆ ಈ ದೇಶದಲ್ಲಿ ರಕ್ಷಣಾ ಇಲಾಖೆಗಳಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಪಾಕಿಸ್ತಾನಕ್ಕೆ ಮಹತ್ವದ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪಗಳಲ್ಲಿ ಬಂಧಿಸಲಾಗುತ್ತಿದೆ. ಅವರೆಲ್ಲರೂ ಹಣಕ್ಕಾಗಿಯೇ ಈ ಕೃತ್ಯವನ್ನು ಮಾಡಿಲ್ಲ. ಬಹುತೇಕರು ಹನಿಟ್ರ್ಯಾಪ್‌ಗೆ ಬಲಿಯಾಗಿ, ಅನಿವಾರ್ಯವಾಗಿ ದೇಶದ ರಹಸ್ಯಗಳನ್ನು ಶತ್ರು ದೇಶಗಳಿಗೆ ಮಾರಾಟ ಮಾಡಿದ್ದರು. ಇಂತಹ ಹನಿಟ್ರ್ಯಾಪ್‌ಗಳಿಗೆ ರಾಜಕೀಯ ವ್ಯಕ್ತಿಗಳು ಹಲವು ಸಂದರ್ಭಗಳಲ್ಲಿ ಬಲಿಯಾಗಿದ್ದಾರೆ. ಕರ್ನಾಟಕವೂ ರಾಜಕಾರಣಿಗಳ ಅಶ್ಲೀಲ ಸೀಡಿಗಳಿಗಾಗಿ ಒಂದು ಕಾಲದಲ್ಲಿ ಸುದ್ದಿ ಮಾಡಿತ್ತು. ಇಂತಹ ಸಿಡಿಗಳನ್ನು ಬಳಸಿಕೊಂಡು ಈ ರಾಜಕಾರಣಿಗಳಿಂದ ದುಷ್ಕರ್ಮಿಗಳು ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಂಡಿರುವ ಬಗ್ಗೆಯೂ ವದಂತಿಗಳಿವೆ. ಈ ಸಿಡಿಗಳನ್ನು ಮುಂದಿಟ್ಟು ಬ್ಲಾಕ್‌ಮೇಲ್ ಮಾಡಿ ಸರಕಾರವನ್ನು ಉರುಳಿಸಿರುವ ಬಗ್ಗೆಯೂ ಆರೋಪಗಳಿವೆ. ಇದು ಒಂದು ರಾಜ್ಯದ ಸ್ಥಿತಿಯಾಯಿತು. ಕೇಂದ್ರದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಯು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಜಾಲದೊಳಗೆ ಸಿಲುಕಿಕೊಂಡರೆ, ಆತನನ್ನು ನಮ್ಮದೇ ದೇಶದ ವಿರುದ್ಧ ಶತ್ರುಗಳು ಆಯುಧವಾಗಿ ಬಳಸಬಹುದು. ಭಾರತದ ರಾಜಕೀಯ, ಆರ್ಥಿಕ ನೀತಿಗಳ ಮೇಲೆ ಅದು ಪರಿಣಾಮಗಳನ್ನು ಬೀರಬಹುದು. ಆದುದರಿಂದಲೇ,

ಎಪ್‌ಸ್ಟೀನ್‌ನಂತಹ ಪಾತಕಿಗಳ ಕಡತಗಳಲ್ಲಿ ಈ ದೇಶದ ಉನ್ನತ ವ್ಯಕ್ತಿಗಳ ಹೆಸರುಗಳು ಕಾಣಿಸಿಕೊಳ್ಳುವುದು ಕಳವಳಕಾರಿ ವಿಷಯವಾಗಿದೆ. ದೇಶ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಕಡತದಲ್ಲಿರುವ ವಿಷಯಗಳನ್ನು ನಂಬಬೇಕೋ ಬೇಡವೋ ಎನ್ನುವುದು ಆನಂತರದ ವಿಷಯ. ಮೊದಲು ಕಡತದಲ್ಲಿ ಭಾರತದ ಯಾವೆಲ್ಲ ಸಚಿವರು ಅಥವಾ ರಾಜಕಾರಣಿಗಳ ಹೆಸರುಗಳು ಉಲ್ಲೇಖವಾಗಿವೆ ಎನ್ನುವುದು ಬಹಿರಂಗವಾಗಬೇಕು. ಹಾಗೆ ಹೆಸರುಗಳು ಉಲ್ಲೇಖವಾಗಿರುವ ರಾಜಕಾರಣಿಗಳನ್ನು ಮಹತ್ವದ ಸ್ಥಾನಗಳಿಂದ ದೂರವಿಡುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News