×
Ad

ಚೋರ್ಲಾಘಾಟ್ ದರೋಡೆ ಪ್ರಕರಣ: ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಲಿ

Update: 2026-01-28 08:21 IST

ಸಾಂದರ್ಭಿಕ ಚಿತ್ರ PC: x.com/SaptashwaTV

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕರ್ನಾಟಕ, ಗೋವಾ, ಮಹಾರಾಷ್ಟ್ರವನ್ನು ಬೆಸೆದಿರುವ ಒಂದು ಬೃಹತ್ ದರೋಡೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. 2025 ಅಕ್ಟೋಬರ್ ತಿಂಗಳಲ್ಲಿ ಈ ದರೋಡೆ ನಡೆದಿದ್ದರೂ, ಬೆಳಕಿಗೆ ಬಂದಿರುವುದು ಇತ್ತೀಚೆಗೆ. ದರೋಡೆಗೆ ಸಂಬಂಧಿಸಿ ದುಷ್ಕರ್ಮಿಗಳು ಓರ್ವನನ್ನು ಅಪಹರಿಸಿ ದೌರ್ಜನ್ಯ ನೀಡಿರುವುದು ಅಂತಿಮವಾಗಿ ಘಟನೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದಕ್ಕೆ ಕಾರಣವಾಯಿತು. ಮೂರು ರಾಜ್ಯಗಳ ಗಡಿ ಭಾಗದಲ್ಲಿರುವ ಚೋರ್ಲಾ ಘಾಟ್‌ನಲ್ಲಿ ಒಂದು ಕಂಟೇನರ್‌ನಿಂದ ಸುಮಾರು 400 ಕೋಟಿ ರೂಪಾಯಿ ಕಳೆದ ಅಕ್ಟೋಬರ್‌ನಲ್ಲಿ ದರೋಡೆಯಾಗಿತ್ತು ಎನ್ನುವ ವದಂತಿ ಮಾಧ್ಯಮಗಳಲ್ಲಿ ರೆಕ್ಕೆ ಪುಕ್ಕ ಪಡೆದುಕೊಂಡಿದೆ. ಕಂಟೇನರ್‌ನಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳಿತ್ತು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ವಿಚಿತ್ರವೆಂದರೆ, ದರೋಡೆಯಾದರೂ ಇದರ ಕುರಿತಂತೆ ಯಾರೂ ದೂರು ನೀಡಿರಲಿಲ್ಲ. ಯಾಕೆಂದರೆ ಅಷ್ಟೂ ಕಪ್ಪುಹಣವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಮೋದಿಯವರ ‘ನೋಟು ನಿಷೇಧ’ದ ಕನಸಿನಿಂದ ಹುಟ್ಟಿದ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳಾಗಿದ್ದವು. ಈಗಾಗಲೇ ಈ ನೋಟುಗಳು ಅಮಾನ್ಯಗೊಂಡಿವೆ. ಇಷ್ಟಾದರೂ ಈ ನೋಟುಗಳನ್ನು ಕಂಟೇನರ್‌ನಲ್ಲಿ ಯಾರು, ಯಾರಿಗೆ ತಲುಪಿಸಲು ಕೊಂಡೊಯ್ಯುತ್ತಿದ್ದರು ಎನ್ನುವುದು ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರ ತನಿಖಾ ತಂಡವನ್ನು ರಚಿಸಿದೆ. ಈ ಬೃಹತ್ ಹಣದ ಹಿಂದೆ ರಾಜಕಾರಣಿಗಳು, ಉದ್ಯಮಿಗಳು ಮಾತ್ರವಲ್ಲ ಪೊಲೀಸ್ ಅಧಿಕಾರಿಗಳ ಹೆಸರುಗಳೂ ಕೇಳಿ ಬರುತ್ತಿವೆ. ನಿಜಕ್ಕೂ ಹಣ ದರೋಡೆಯಾಗಿರುವುದು ನಿಜವೇ ಎನ್ನುವುದನ್ನು ಮೊದಲು ತನಿಖಾ ತಂಡ ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಹೌದು ಎಂದಾದರೆ, ಇಷ್ಟೊಂದು ಹಣದ ಹಿಂದಿರುವ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳ ಕೂಟವನ್ನು ಬಯಲು ಮಾಡುವುದು ಅತ್ಯಗತ್ಯವಾಗಿದೆ. ಅಪಹರಣಕ್ಕೊಳಗಾಗಿರುವ ವ್ಯಕ್ತಿ ದೂರು ನೀಡದೇ ಇದ್ದರೆ ಈ ಪ್ರಕರಣ ಸಂಪೂರ್ಣ ಮುಚ್ಚಿ ಹೋಗಿ ಬಿಡುತ್ತಿತ್ತು. ಈ ಪ್ರಕರಣ ಪೊಲೀಸರ ಗಮನಕ್ಕೆ ಈವರೆಗೆ ಯಾಕೆ ಬರಲಿಲ್ಲ? ಎನ್ನುವುದು ಕೂಡ ತನಿಖೆಗೆ ಅರ್ಹವಾದ ವಿಷಯವೇ ಆಗಿದೆ.

ಸಂದೀಪ್ ಎನ್ನುವ ವ್ಯಕ್ತಿ ದೂರು ನೀಡಿದ ಬೆನ್ನಿಗೇ ಈ ಹಣ ಯಾರದ್ದು ಎನ್ನುವ ಬಗ್ಗೆ ಕೆಸರೆರಚಾಟ ಆರಂಭವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿಯವರು ‘ಈ ಹಣ ಕಾಂಗ್ರೆಸ್‌ಗೆ ಸೇರಿದ್ದು’ ಎಂದು ಹೇಳಿ ಕೈ ತೊಳೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಈ ಹಣದ ಹಿಂದೆ ಬಿಜೆಪಿ ನಾಯಕರಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಮಹಾರಾಷ್ಟ್ರ ಚುನಾವಣೆಗೆ ಈ ಹಣ ಬಳಕೆಯಾಗಿದೆ ಎಂಬ ವದಂತಿಗಳೂ ಇವೆ. ಅಂದರೆ ಹಣಕ್ಕೆ ರಾಜಕೀಯ ಬೆಂಗಾವಲು ಇರುವುದು ಸ್ಪಷ್ಟವಾಗಿದೆ. ‘‘ಪ್ರಕರಣದಲ್ಲಿ ಗೊಂದಲಗಳಿವೆ. ಸಿಟ್ ವರದಿ ಬಂದ ಆನಂತರವೇ ಸತ್ಯ ಸ್ಪಷ್ಟವಾಗಲಿದೆ’’ ಎಂದು ಗೃಹ ಸಚಿವ ಪರಮೇಶ್ವರ್ ಅವರು ತಿಳಿಸಿದ್ದಾರೆ. ರಾಜಕಾರಣಿಗಳು ನಿಜಕ್ಕೂ ಶಾಮೀಲಾಗಿದ್ದಾರೆ ಎಂದಾದರೆ, ಅದರಲ್ಲೂ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಆ ಹಣ ಬಳಕೆಯಾಗಿದೆ ಎನ್ನುವ ವದಂತಿಯಲ್ಲಿ ಸತ್ಯವಿದೆ ಎಂದಾದರೆ ಈ ತನಿಖೆ ಗುರಿತಲುಪುವುದು ಕಷ್ಟ. ಸ್ವತಃ ಇಲ್ಲಿ ಸರಕಾರದ ಮೇಲೆಯೇ ಜನರಿಗೆ ಶಂಕೆಗಳಿವೆ. ಅದೇ ಸರಕಾರ ನೇಮಕ ಮಾಡಿರುವ ತನಿಖಾ ತಂಡ ಸತ್ಯವನ್ನು ಬಹಿರಂಗಪಡಿಸಬಹುದೆ? ಅದಕ್ಕೆ ಸರಕಾರ ಅವಕಾಶ ನೀಡುತ್ತದೆಯೆ? ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಸಾಗಾಟ ನಡೆದಿದೆ ಎಂದಾದರೆ, ಅದರಲ್ಲಿ ಸರಕಾರದೊಳಗಿರುವ ಜನರು ಭಾಗಿಯಾಗಿರಲೇಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಂಟೇನರ್‌ನಲ್ಲಿದ್ದ ಹಣ 2000 ರೂ. ಮುಖಬೆಲೆಯನ್ನು ಹೊಂದಿರುವುದು. 2023ರಲ್ಲಿ ಈ ನೋಟು ಅಮಾನ್ಯಗೊಂಡಿದೆ. ಸುಮಾರು ಮೂರು ವರ್ಷಗಳ ಬಳಿಕ ಇಷ್ಟು ಪ್ರಮಾಣದಲ್ಲಿ ನೋಟುಗಳನ್ನು ಬ್ಯಾಂಕ್‌ನ ಮೂಲಕ ಬದಲಾಯಿಸಿಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ. ಆರ್‌ಬಿಐಯೊಳಗಿರುವ ಅಧಿಕಾರಿಗಳು ಇದರಲ್ಲಿ ಶಾಮೀಲಾಗಬೇಕಾಗುತ್ತದೆ. ಕೇಂದ್ರ ಸರಕಾರದೊಳಗಿರುವ ಪ್ರಮುಖರ ಸಹಾಯವೂ ಬೇಕಾಗುತ್ತದೆ. ನಿಜಕ್ಕೂ ಅಷ್ಟೊಂದು ಕಪ್ಪು ಹಣವನ್ನು ಕಾಂಗ್ರೆಸ್ ಮುಖಂಡರು ಚುನಾವಣೆಯಲ್ಲಿ ಬಳಸಲು ಮುಂದಾದರೆ ಕೇಂದ್ರ ಸರಕಾರ ಅದನ್ನು ನೋಡಿ ಸುಮ್ಮನಿರುತ್ತದೆಯೆ? ಪ್ರಕರಣದಲ್ಲಿ ಗುಜರಾತ್ ಉದ್ಯಮಿಗಳ ಹೆಸರೂ ಕೇಳಿ ಬರುತ್ತಿವೆ. ಗುಜರಾತ್, ಗೋವಾ, ಮಹಾರಾಷ್ಟ್ರಗಳಲ್ಲಿ ಬಿಜೆಪಿ ಸರಕಾರವಿರುವುದರಿಂದ ಕಪ್ಪು ಹಣದ ಹಿಂದೆ ಬಿಜೆಪಿ ನಾಯಕರಿದ್ದಾರೆಯೇ ಎಂದು ಅನುಮಾನಿಸುವುದು ಸಹಜ. ಬಿಜೆಪಿಯ ಕೈವಾಡವಿಲ್ಲ ಎಂದಾದರೆ ಸ್ವತಂತ್ರ ತನಿಖಾ ಸಂಸ್ಥೆಯೊಂದು ತನಿಖೆ ನಡೆಸಲು ಕೇಂದ್ರ ಸರಕಾರ ಅವಕಾಶ ಮಾಡಿಕೊಡಬೇಕು. ಹಾಗಾದಲ್ಲಿ ಈ ಕಪ್ಪು ಹಣದ ಹಿಂದಿರುವ ಅಸಲಿ ಮುಖಗಳು ಬಹಿರಂಗವಾಗಬಹುದು. ಅಷ್ಟೇ ಅಲ್ಲ, ಈ ತನಿಖೆಯು ದೇಶದೊಳಗಿರುವ ಕಪ್ಪು ಹಣದ ಆಳಕ್ಕಿಳಿಯಲು ಸಹಾಯ ಮಾಡಬಹುದು.

ಕಪ್ಪು ಹಣವನ್ನು ಹೊರಗೆ ತರುವ ಪ್ರಯತ್ನವಾಗಿ ಪ್ರಧಾನಿ ಮೋದಿಯವರು ನೋಟು ನಿಷೇಧವನ್ನು ಘೋಷಿಸಿದಾಗ, ಹೊಸದಾಗಿ ಚಲಾವಣೆಗೆ ತಂದ ‘ಎರಡು ಸಾವಿರ ಮುಖಬೆಲೆಯ ರೂಪಾಯಿ’ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಸಿ ಹಾಕಿತ್ತು. ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟಿನಿಂದ ಕಪ್ಪು ಹಣ ದಾಸ್ತಾನು ಮಾಡಲು ಇನ್ನಷ್ಟು ಅನುಕೂಲವನ್ನು ಮಾಡಿಕೊಟ್ಟಂತಾಗಲಿಲ್ಲವೆ? ಎಂದು ತಜ್ಞರು ಕೇಳಿದರು. ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಹಲವು ವದಂತಿಗಳನ್ನು ಹರಿಯ ಬಿಟ್ಟಿತು. ಅದರಲ್ಲಿ ಮುಖ್ಯವಾದುದು, ‘ನೋಟಿನೊಳಗಡೆ ಚಿಪ್ಪಿದೆ’ ಎನ್ನುವುದೂ ಸೇರಿದೆ. ಈ ನೋಟು ಜಾರಿಗೆ ಬಂದ ಕೆಲವೇ ತಿಂಗಳಲ್ಲಿ ಇಂತಹದೇ ನಕಲಿ ನೋಟುಗಳು ವ್ಯಾಪಕವಾಗಿ ಚಲಾವಣೆಯಲ್ಲಿ ಬರತೊಡಗಿದವು. ನೋಟು ನಿಷೇಧದಿಂದಾಗಿ ಶೇ. 99ರಷ್ಟು ನಿಷೇಧಿತ ನೋಟುಗಳು ಆರ್‌ಬಿಐಗೆ ಮರಳಿದವು. ಅಂದರೆ ದೇಶದಲ್ಲಿ ಕಪ್ಪು ಹಣ ಇರಲೇ ಇಲ್ಲ ಎಂದು ಇದರ ಅರ್ಥವೆ? ನೋಟು ನಿಷೇಧವನ್ನು ಒಂದು ಬೃಹತ್ ಹಗರಣ ಎಂದು ಕರೆಯುವುದು ಇದೇ ಕಾರಣಕ್ಕೆ. ಬೇರೆ ಬೇರೆ ಒಳದಾರಿಗಳ ಮೂಲಕ ಬೃಹತ್ ಪ್ರಮಾಣದಲ್ಲಿ ಕಪ್ಪು ಹಣ ಈ ಸಂದರ್ಭದಲ್ಲಿ ಬಿಳಿಯಾಗಿ ಪರಿವರ್ತನೆಯಾಯಿತು. ಇದು ಕೇಂದ್ರ ಸರಕಾರದೊಳಗಿರುವ ಪ್ರಮುಖರ ಸಹಕಾರವಿಲ್ಲದೆ ಸಾಧ್ಯವೇ ಇಲ್ಲ. ಬಿಜೆಪಿಯು ಅತಿ ಶ್ರೀಮಂತ ರಾಜಕೀಯ ಪಕ್ಷವಾಗಿ ಹೊರಹೊಮ್ಮುವುದಕ್ಕೆ ನೋಟು ನಿಷೇಧವೂ ಕಾರಣ ಎನ್ನುವ ಅಭಿಪ್ರಾಯಗಳಿವೆ. ಆ ಸಂದರ್ಭದಲ್ಲಿ 3,118 ಕೋಟಿ ರೂಪಾಯಿಗಳನ್ನು ಬಿಜೆಪಿಯೊಂದಿಗೆ ಸಂಬಂಧ ಇಟ್ಟುಕೊಂಡಿರುವ 11 ಸಹಕಾರಿ ಬ್ಯಾಂಕುಗಳು ಸ್ವೀಕರಿಸಿದ್ದವು. ಆ ಬ್ಯಾಂಕುಗಳಿಗೆ ಗೃಹ ಸಚಿವ ಅಮಿತ್ ಶಾ ಅವರು ಅಧ್ಯಕ್ಷರು ಇಲ್ಲವೇ ನಿರ್ದೇಶಕರಾಗಿದ್ದುದು ಕಾಕತಾಳೀಯವೇನೂ ಆಗಿರಲಿಲ್ಲ. 500 ಮತ್ತು 1000 ನೋಟು ನಿಷೇಧಿಸಿ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟು ಹೊರತಂದುದು ಸರಕಾರದ ಇನ್ನೊಂದು ವೈಫಲ್ಯವಾಗಿತ್ತು. ಇದೀಗ ಈ ನೋಟು ಅಮಾನ್ಯಗೊಂಡು ಮೂರು ವರ್ಷವಾಗಿದೆ. ಇಷ್ಟು ಸಮಯದ ಬಳಿಕ ಈ ಮುಖಬೆಲೆಯ 400 ಕೋಟಿಗೂ ಅಧಿಕ ಹಣವನ್ನು ಸಾಗಿಸಲಾಗುತ್ತದೆ ಎಂದಾದರೆ, ನರೇಂದ್ರ ಮೋದಿಯವರ ‘ನೋಟು ನಿಷೇಧ’ದ ಪರಿಣಾಮವಾದರೂ ಏನು ಎಂದು ಕೇಳುವಂತಾಗಿದೆ. ಇದು ಬರೇ ದರೋಡೆಯಲ್ಲ, ಹಗರಣ. ಈ ಹಗರಣಕ್ಕೆ ರಾಜಕೀಯ ಆಯಾಮವಿರುವುದರಿಂದ, ಹಣ ದರೋಡೆಗೆ ಸಂಬಂಧಿಸಿ ಸ್ವತಂತ್ರ ತನಿಖಾ ಸಂಸ್ಥೆಯೊಂದನ್ನು ಮಾಡುವ ಅಗತ್ಯವಿದೆ. ಸಿಟ್ ತಂಡ ಹಣವನ್ನು ಹುಡುಕಿದಂತೆ ನಾಟಕವಾಡಿ ಸಮಯವನ್ನು ವ್ಯರ್ಥ ಮಾಡಬಹುದೇ ಹೊರತು, ರಾಜಕಾರಣಿಗಳ, ಬೃಹತ್ ಉದ್ಯಮಿಗಳನ್ನು ಎದುರು ಹಾಕಿಕೊಂಡು ತನಿಖೆಯನ್ನು ಮುನ್ನಡೆಸುವ ಶಕ್ತಿ ಅದಕ್ಕಿಲ್ಲ ಅಥವಾ ಇಡೀ ಪ್ರಕರಣವನ್ನೇ ಮುಚ್ಚಿ ಹಾಕುವ ಭಾಗವಾಗಿ ಸಿಟ್ ತಂಡ ಕೆಲಸ ಮಾಡುವ ಸಾಧ್ಯತೆಯೇ ಜಾಸ್ತಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News