×
Ad

ಜೆಡಿಎಸ್ ವಿಸರ್ಜನಾ ಸಮಾವೇಶ?

Update: 2026-01-26 08:56 IST

ಜಾತ್ಯತೀತ ಜನತಾದಳ 25ನೇ ವರ್ಷದ ಅಂಗವಾಗಿ ಹಾಸನದಲ್ಲಿ ಶನಿವಾರ ನಡೆದ ‘ಜನತಾ ಸಮಾವೇಶ’ವು ಜೆಡಿಎಸ್‌ನ ಮರು ನಿರ್ಮಾಣಕ್ಕೆ ಪೀಠಿಕೆಯಾಗಬಹುದು ಎಂದು ಭಾವಿಸಿದ ‘ಹಾಸನದ ಜನತೆ’ಗೆ ನಿರಾಸೆಯಾಗಿದೆ. ಕಾಂಗ್ರೆಸ್-ಬಿಜೆಪಿ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಕರ್ನಾಟಕದ ಹಿತಾಸಕ್ತಿಯನ್ನು ಜೆಡಿಎಸ್ ಎತ್ತಿ ಹಿಡಿಯಬಹುದು ಎನ್ನುವ ನಿರೀಕ್ಷೆ ಎಂದೋ ಹುಸಿಯಾಗಿತ್ತು. ಜೆಡಿಎಸ್ ಹಲವು ಬಾರಿ ನೆಲಕಚ್ಚಿ ಮತ್ತೆ ಮೇಲೆದ್ದು ನಿಂತ ಉದಾಹರಣೆಗಳಿವೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ದಿನದಿಂದ ಎದುರಾಗುತ್ತಿರುವ ಹಿನ್ನಡೆಯ ಕಾರಣದಿಂದ ಈ ಸಮಾವೇಶ ಜೆಡಿಎಸ್‌ನ ಆತ್ಮವಿಮರ್ಶೆಗೆ ವೇದಿಕೆಯಾಗಬಹುದು ಮತ್ತು ಇನ್ನೊಮ್ಮೆ ಮತ್ತೆ ನಿಲ್ಲುವುದಕ್ಕೆ ಈ ಸಮಾವೇಶ ಒಂದು ನಿಮಿತ್ತವಾಗಬಹುದೋ ಎಂಬ ಸಣ್ಣ ಆಸೆಯೂ ನಂದಿ ಹೋಗಿದೆ. ಎಡಬಲದಲ್ಲಿ ಕುಮಾರಸ್ವಾಮಿ-ರೇವಣ್ಣ ಅವರನ್ನು ಕುಳ್ಳಿರಿಸಿಕೊಂಡು ಮೈಕ್ ಮುಂದೆ ವೀರಾವೇಶದಿಂದ ಅಬ್ಬರಿಸುವ ದೇವೇಗೌಡರ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ಅದು ಅವಸಾನದ ಅಂಚಿಗೆ ಬಂದು ನಿಂತಿರುವ ಜೆಡಿಎಸ್ ಪಕ್ಷದ ಏದುಸಿರಿನಂತಿತ್ತು. ದೇವೇಗೌಡರನ್ನು ಮುಂದಿಟ್ಟು ಕಾರ್ಯಕರ್ತರೆಡೆಗೆ ಬಾಣ ಬಿಡುವ ಕುಮಾರಸ್ವಾಮಿಯವರ ಪ್ರಯತ್ನ ಕೂಡ ವಿಫಲವಾಗಿದೆ ಮಾತ್ರವಲ್ಲ, ದೇವೇಗೌಡರ ಭಾಷಣದಿಂದಾಗಿ ಪಕ್ಷದ ಅಳಿದುಳಿತ ವರ್ಚಸ್ಸಿಗೂ ಧಕ್ಕೆಯಾಗಿದೆ.

ಸಮಾವೇಶದಲ್ಲಿ ರಾಜ್ಯ ಜೆಡಿಎಸ್‌ಗೆ ಹೊಸ ನಾಯಕತ್ವದ ಘೋಷಣೆಯ ಬಗ್ಗೆ ನಿರೀಕ್ಷೆಗಳಿದ್ದವು. ಕುಮಾರಸ್ವಾಮಿಯವರು ಹೊಸದಿಲ್ಲಿಗೆ ಸೀಮಿತರಾಗಿದ್ದಾರೆ. ರೇವಣ್ಣ ಮೈತುಂಬಾ ಕಳಂಕವನ್ನು ಅಂಟಿಸಿಕೊಂಡು ಮನೆಯಲ್ಲಿ ಕುಳಿತಿದ್ದಾರೆ. ದೇವೇಗೌಡರ ಓರ್ವ ಮೊಮ್ಮಗ ಜೈಲಲ್ಲಿದ್ದಾನೆ. ಇನ್ನೋರ್ವ ಮೊಮ್ಮಗ ಅಪ್ರಬುದ್ಧತನದ ಮೂಲಕವೇ ಮೂಲೆಸೇರಿದ್ದಾನೆ. ಹೊಸ ನಾಯಕನೊಬ್ಬನ ತುರ್ತು ಅಗತ್ಯ ಜೆಡಿಎಸ್‌ಗಿತ್ತು. ಆದರೆ ಸಮಾವೇಶದಲ್ಲಿ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳುವ ಸೂಚನೆಯನ್ನು ಕುಮಾರಸ್ವಾಮಿಯವರು ನೀಡಿದ್ದಾರೆ. 2028ಕ್ಕೆ ಕುಮಾರಸ್ವಾಮಿಯವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವುದು ಗುರಿ ಎಂದು ಅವರ ಪುತ್ರ ನಿಖಿಲ್ ಸಮಾವೇಶದಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಈ ಸರಣಿ ಸೋಲಿನ ಸರದಾರನ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಜೆಡಿಎಸ್ ಕುರಿತಂತೆ ಭರವಸೆಯನ್ನು ಮೂಡಿಸುವ ಯಾವ ಮಾತುಗಳು ಸಭೆಯಲ್ಲಿ ವ್ಯಕ್ತವಾಗಲ್ಲಿಲ್ಲ. ಅದೇ ತಂದೆ ಮತ್ತು ಮಕ್ಕಳ ಮುಖ ನೋಡಿ ಕಾರ್ಯಕರ್ತರು ನಿರಾಸೆಯಿಂದ ಮರಳಿದ್ದಾರೆ. ಈಗಾಗಲೇ ಜೆಡಿಎಸ್‌ನೊಳಗೆ ಜಾತ್ಯತೀತತೆಯ ಮೌಲ್ಯಕ್ಕೆ ಬದ್ಧರಾಗಿರುವ ಕಾರ್ಯಕರ್ತರು ಬೇರೆ ದಾರಿಯೇ ಇಲ್ಲದೆ ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದರೆ, ಇನ್ನೊಂದು ಗುಂಪು ಬಿಜೆಪಿಯ ಕಡೆಗೆ ಮುಖ ಮಾಡಿ ನಿಂತಿದೆ. ಒಂದು ರೀತಿಯಲ್ಲಿ ಜೆಡಿಎಸ್ ಅನಧಿಕೃತವಾಗಿ ಬಿಜೆಪಿಯೊಂದಿಗೆ ವಿಲೀನವಾಗಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

ಸಮಾವೇಶದಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡ ರೇವಣ್ಣ ಮತ್ತು ಅವರ ಪುತ್ರರನ್ನು ದೇವೇಗೌಡರು ಯಾವ ಲಜ್ಜೆಯೂ ಇಲ್ಲದೆ ಸಮರ್ಥಿಸಿಕೊಂಡರು. ಈ ಹಿಂದೆ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರನ್ನು ದೇವೇಗೌಡರ ನಿವಾಸದಲ್ಲೇ ಬಂಧಿಸಲಾಗಿತ್ತು. ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ಹಗರಣದಲ್ಲಿ ಬಂಧನಕ್ಕೊಳಗಾಗುವ ಭಯದಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾಗ ‘ತಕ್ಷಣ ಪೊಲೀಸರಿಗೆ ಶರಣಾಗು’ ಎಂದು ದೇವೇಗೌಡರೇ ಪತ್ರ ಬರೆದು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ರೇವಣ್ಣ ಮತ್ತು ಅವರ ಪುತ್ರನ ಅಶ್ಲೀಲ ಸಿಡಿಗಳು ಬಹಿರಂಗವಾದಾಗ, ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರು ‘‘ನನಗೂ ರೇವಣ್ಣ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ಅನಗತ್ಯವಾಗಿ ದೇವೇಗೌಡರ ಹೆಸರನ್ನು ಇದರಲ್ಲಿ ಎಳೆಯಬೇಡಿ’’ ಎಂದು ಅಬ್ಬರಿಸಿದ್ದರು. ಇಂದು ರಾಜ್ಯದಲ್ಲಿ ಜೆಡಿಎಸ್‌ಗೆ ಮುಂದಡಿಯಿಡುವುದಕ್ಕೆ ಅತಿದೊಡ್ಡ ತಡೆಯೇ ರೇವಣ್ಣ ಮತ್ತು ಅವರ ಪುತ್ರ ಎಸಗಿದ ‘ಲೈಂಗಿಕ ಹಗರಣ’ವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಅನ್ನು ಹೊಸದಾಗಿ ಕಟ್ಟುವ ಉದ್ದೇಶವಿದ್ದಿದ್ದರೆ ದೇವೇಗೌಡರು ಮತ್ತು ಕುಮಾರಸ್ವಾಮಿ ಸ್ಪಷ್ಟವಾಗಿ ರೇವಣ್ಣ ಮತ್ತು ಪ್ರಜ್ವಲ್ ಗೌಡರಿಂದ ಅಂತರ ಕಾಪಾಡಿಕೊಳ್ಳಬೇಕಾಗಿತ್ತು. ಯಾವ ಕಾರಣಕ್ಕೂ ರೇವಣ್ಣ ಅವರಿಗೆ ವೇದಿಕೆಯಲ್ಲಿ ಅವಕಾಶವನ್ನು ನೀಡಬಾರದಿತ್ತು. ‘ತಪ್ಪು ಮಾಡಿದ್ದರೆ ಅವರಿಗೆ ಕಠಿಣ ಶಿಕ್ಷೆಯಾಗಲಿ’ ಎಂದು ದೇವೇಗೌಡರು ವೇದಿಕೆಯಲ್ಲೇ ಘೋಷಿಸಬೇಕಾಗಿತ್ತು. ಅಂತಹ ನಿಷ್ಠುರತೆಯನ್ನು ದೇವೇಗೌಡಪ್ರದರ್ಶಿಸಿದ್ದರೆ ಜೆಡಿಎಸ್ ಕಳೆದುಕೊಂಡ ಗೌರವವನ್ನು ಮತ್ತೆ ಪಡೆದುಕೊಳ್ಳುತ್ತಿತ್ತು. ಆದರೆ ದೇವೇಗೌಡರು ತನ್ನ ಪುತ್ರ ರೇವಣ್ಣರನ್ನು ಬಗಲಲ್ಲಿ ಕುಳ್ಳಿರಿಸಿಕೊಂಡು ಸಮರ್ಥಿಸಿಕೊಂಡರು. ಲೈಂಗಿಕ ಹಗರಣದಲ್ಲಿ ಅವರನ್ನು ಬಂಧಿಸಿದ ಪೊಲೀಸರನ್ನೇ ಟೀಕಿಸುವ ಮಟ್ಟಕ್ಕೆ ಇಳಿದರು. ರೇವಣ್ಣ ಅವರನ್ನು ಯಾವುದೋ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿರುವುದಲ್ಲ. ಅದಾಗಲೇ ಸಾರ್ವಜನಿಕವಾಗಿ ಬಹಿರಂಗವಾದ ಅಶ್ಲೀಲ ಸಿಡಿ ಪ್ರಕರಣಕ್ಕೆ ಮತ್ತು ಮಹಿಳೆಯ ಅಪಹರಣಕ್ಕೆ ಸಂಬಂಧಿಸಿ ಅವರನ್ನು ಪೊಲೀಸರು ದೇವೇಗೌಡರ ನಿವಾಸದಿಂದ ವಶಕ್ಕೆ ತೆಗೆದುಕೊಂಡಿದ್ದರು. ನಿಜಕ್ಕೂ ಪೊಲೀಸರು ದುರುದ್ದೇಶಪೂರ್ವಕವಾಗಿ ಆ ಬಂಧನವನ್ನು ಮಾಡಿದ್ದರೆ ಅದರ ವಿರುದ್ಧ ಆಗಲೇ ಮಾತನಾಡುವ ಅವಕಾಶ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗಿತ್ತು. ದೇವೇಗೌಡರು ಅಂದು ಯಾವ ಹೇಳಿಕೆಯನ್ನೂ ನೀಡದೆ, ‘ಅನಾರೋಗ್ಯದ ಹೆಸರಿನಲ್ಲಿ’ ಮೌನವಾಗಿದ್ದರು. ಇದೀಗ ‘ರೇವಣ್ಣ’ನಿಗೆ ಅನ್ಯಾಯವಾಗಿದೆ ಎಂಬ ರೀತಿಯಲ್ಲಿ ಜನತಾ ಸಮಾವೇಶದಲ್ಲಿ ಅಬ್ಬರಿಸಿದ್ದಾರೆ. ಹಾಗಾದರೆ ರೇವಣ್ಣ ಮತ್ತು ಪ್ರಜ್ವಲ್ ಅವರಿಂದ ಅನ್ಯಾಯಕ್ಕೊಳಗಾಗಿರುವ ಮಹಿಳೆಯರ ಕುರಿತಂತೆ ದೇವೇಗೌಡರು ಏನು ಹೇಳುತ್ತಾರೆ? ಜನತಾ ಸಮಾವೇಶದಲ್ಲಿ ರೇವಣ್ಣ ಮತ್ತು ಪ್ರಜ್ವಲ್ ಅವರ ಬಂಧನವನ್ನು ನಾಡಿಗಾದ, ಜೆಡಿಎಸ್‌ನ ಕಾರ್ಯಕರ್ತರಿಗಾದ ಅನ್ಯಾಯ ಎಂಬಂತೆ ದೇವೇಗೌಡರು ಮಾತನಾಡಿದರು. ನಿಜಕ್ಕೂ ರೇವಣ್ಣ ಮತ್ತು ಪ್ರಜ್ವಲ್ ಅವರ ಲೈಂಗಿಕ ಹಗರಣದಿಂದ ಜೆಡಿಎಸ್‌ಗೆ ಭಾರೀ ಅನ್ಯಾಯವಾಗಿದೆ. ನಾಡಿಗೆ ಅದರಿಂದ ಅವಮಾನವಾಗಿದೆ. ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷದ ಮರ್ಯಾದೆಯನ್ನು ಈ ನಾಯಕರು ತಮ್ಮ ತೆವಲಿಗಾಗಿ ಕಳೆದರು. ಜನತಾ ಸಮಾವೇಶದಲ್ಲಿ ತನ್ನ ಪುತ್ರರಿಂದ ಪಕ್ಷಕ್ಕಾದ ಧಕ್ಕೆಗಾಗಿ ದೇವೇಗೌಡರು ಮೊದಲು ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಬೇಕಾಗಿತ್ತು. ಆದರೆ ಅದಕ್ಕೆ ಬದಲಾಗಿ ಮಕ್ಕಳನ್ನು ಸಮರ್ಥಿಸಿಕೊಳ್ಳುವ ಮೂಲಕ ಕಾರ್ಯಕರ್ತರನ್ನು ಅವಮಾನಿಸಿದರು. ಉಳಿದಂತೆ ಕುಮಾರಸ್ವಾಮಿಯವರು ಮತ್ತೆ ರಾಜ್ಯ ರಾಜಕೀಯಕ್ಕೆ ಮರಳುವ ಇಂಗಿತವನ್ನು ಸಮಾವೇಶದಲ್ಲಿ ವ್ಯಕ್ತಪಡಿಸಿದ್ದಾರೆ. ಅವರು ರಾಜ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಮರಳುವ ಹೊತ್ತಿಗೆ ಇಲ್ಲಿ ಜೆಡಿಎಸ್ ಉಳಿದಿರುವುದಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿದಂತೆ, ಕುಮಾರಸ್ವಾಮಿಯವರು ಜೆಡಿಎಸ್ ತೊರೆದು ಅಧಿಕೃತವಾಗಿ ಬಿಜೆಪಿಯಿಂದ ಮುಖ್ಯಮಂತ್ರಿಯಾಗಲು ಸಾಧ್ಯವೇ ಎಂದು ಪ್ರಯತ್ನಿಸಬಹುದಾಗಿದೆ. ಆದರೆ ಅದಕ್ಕೆ ಬಿಜೆಪಿಯೊಳಗಿರುವ ನಾಯಕರು ಅವಕಾಶ ಮಾಡಿಕೊಡುವುದು ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News