×
Ad

ಯುಜಿಸಿ ನಿಯಮಾವಳಿಗೆ ತಡೆ: ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಹುನ್ನಾರ!

Update: 2026-01-30 07:40 IST

Photo credit: PTI

ಎಡಗೈಯಲ್ಲಿ ಕೊಟ್ಟು, ಬಲಗೈಯಲ್ಲಿ ಕಿತ್ತುಕೊಳ್ಳುವುದು ಎಂದರೆ ಇದೇ ಇರಬೇಕು. ಸುಪ್ರೀಂಕೋರ್ಟ್‌ನ ಸೂಚನೆಯನ್ವಯ ಯುಜಿಸಿಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಯಲು ನೂತನ ನಿಯಮಾವಳಿಗಳನ್ನು ಜಾರಿಗೆ ತಂದಿತ್ತು. ಇದೀಗ ಆ ನಿಯಮಾವಳಿಗಳಿಗೆ ಅದೇ ಸುಪ್ರೀಂಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ. ನಿಯಮಾವಳಿಗಳು ಜನರನ್ನು ವಿಂಗಡಿಸುತ್ತವೆ, ತಾರತಮ್ಯದಿಂದ ಕೂಡಿದೆ ಹಾಗೂ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನಿಯಮಾವಳಿಗಳು ಜಾರಿಗೆ ಬಂದ ದಿನದಿಂದ ಇದರ ವಿರುದ್ಧ ಮೇಲ್‌ಜಾತಿಯ ಕೆಲವು ಗುಂಪುಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿಯೊಳಗಿರುವ ಕೆಲವು ಜನಪ್ರತಿನಿಧಿಗಳು ತಮ್ಮದೇ ಸರಕಾರದ ವಿರುದ್ಧ ಧ್ವನಿಯೆತ್ತ ತೊಡಗಿದ್ದರು. ಭವಿಷ್ಯದಲ್ಲಿ ಮೇಲ್‌ಜಾತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿಯ ಮೇಲೆ ನಡೆಯಬಹುದಾದ ದೌರ್ಜನ್ಯಗಳನ್ನು ಊಹಿಸಿ ಕೆಲವರು ಈ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸ ತೊಡಗಿದ್ದಾರೆ. ಆದರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯ, ದೌರ್ಜನ್ಯಗಳಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದಿದ್ದಾರೆ. ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಸಂಘಟನೆಗಳು ಇದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಈ ಸಂತ್ರಸ್ತ ಸಮುದಾಯಗಳ ನೋವಿಗೆ ಸುಪ್ರೀಂಕೋರ್ಟ್ ಕಿವಿಯಾಗುವ ಬದಲು, ಆರೋಪಿ ಸ್ಥಾನದಲ್ಲಿ ನಿಂತಿರುವ ಜನರ ಧ್ವನಿಯಾಗಲು ಹೊರಟಿದೆಯೇ ಎಂದು ಜನರು ಅನುಮಾನಿಸುವಂತಾಗಿದೆ.ನಿಯಮಾವಳಿಗಳಲ್ಲಿ ಇರುವ ಸಣ್ಣ ಪುಟ್ಟ ತಾಂತ್ರಿಕ ದೋಷಗಳ ಕಾರಣಕ್ಕಾಗಿ ಮತ್ತು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಈ ತಡೆಯಾಜ್ಞೆಯನ್ನು ನೀಡಿರುವುದಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದಾಗಿತ್ತು. ಆದರೆ ತಡೆಯಾಜ್ಞೆಯನ್ನು ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಆಡಿರುವ ಮಾತುಗಳು ಬೇರೆಯೇ ಅರ್ಥವನ್ನು, ಸಂದೇಶವನ್ನು ನೀಡುತ್ತದೆ.

‘‘ಜಾತಿ ಆಧಾರಿತ ತಾರತಮ್ಯವನ್ನು ರೂಪಿಸುವ ಕೆಲವು ನಿಯಮಗಳು ಅಸ್ಪಷ್ಟವಾಗಿವೆ ಮತ್ತು ದುರುಪಯೋಗ ಪಡಿಸಿಕೊಳ್ಳಬಹುದಾಗಿದೆ’’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಡುತ್ತಿದೆ. ಹಾಗೆ ನೋಡಿದರೆ ದುರುಪಯೋಗದ ಮಾತುಗಳು ಕೇವಲ ಯುಜಿಸಿ ನಿಯಮಾವಳಿಗೆ ಮಾತ್ರ ಅನ್ವಯಿಸುತ್ತದೆಯೆ? ಯುಎಪಿಎ ಕಾಯ್ದೆಗಳ ದುರುಪಯೋಗಕ್ಕಾಗಿ ಇಂದು ಭಾರತವು ವಿಶ್ವದಲ್ಲೇ ಕುಖ್ಯಾತವಾಗಿದೆ. ಪ್ರತಿ ನಿತ್ಯ ಗೋಹತ್ಯೆ ನಿಷೇಧ ಕಾಯ್ದೆಗಳು, ಮತಾಂತರ ಕಾಯ್ದೆಗಳು ದುರುಪಯೋಗವಾಗುತ್ತಿರುವುದು ಸುಪ್ರೀಂಕೋರ್ಟ್‌ಗೆ ಕಾಣುತ್ತಿಲ್ಲವೆ? ದೇಶದಲ್ಲಿ ಕೆಲವು ಕಾಯ್ದೆಗಳು ದುರುಪಯೋಗವಾಗುತ್ತಿರುವುದು ಎಷ್ಟು ನಿಜವೋ, ಇನ್ನು ಕೆಲವು ಕಾಯ್ದೆಗಳನ್ನು ದುರುಪಯೋಗ ಪಡಿಸುವುದಕ್ಕಾಗಿಯೇ ಜಾರಿಗೆ ತರಲಾಗಿದೆ ಎನ್ನುವುದು ಅಷ್ಟೇ ನಿಜ. ಸುಪ್ರೀಂಕೋರ್ಟ್ ಇವೆಲ್ಲದರ ಕುರಿತಂತೆ ಮೌನವಾಗಿದ್ದು, ಯುಜಿಸಿಯ ಈ ನಿಯಮಗಳ ಬಗ್ಗೆ ಮಾತ್ರ ಯಾಕೆ ತಲೆಕೆಡಿಸಿಕೊಳ್ಳುತ್ತಿದೆ? ಈ ದೇಶದಲ್ಲಿ ತಲೆತಲಾಂತರಗಳಿಂದ ಜಾತಿ ತಾರತಮ್ಯ, ಜಾತಿ ದೌರ್ಜನ್ಯಗಳು ಅಸ್ತಿತ್ವದಲ್ಲಿವೆ. ವಿಪರ್ಯಾಸವೆಂದರೆ ಈ ಜಾತಿ ದೌರ್ಜನ್ಯಗಳ ಬಗ್ಗೆ ಕಣ್ಣಿದ್ದೂ ಕುರುಡಾಗಿರುವ ಮೇಲ್‌ಜಾತಿಯ ಜನರು, ಜಾತಿದೌರ್ಜನ್ಯ ವಿರೋಧಿ ಕಾನೂನು ಎಲ್ಲೋ ಒಂದೆರಡು ಬಾರಿ ದುರುಪಯೋಗವಾದಾಕ್ಷಣ, ಆ ಕಾನೂನಿನ ಔಚಿತ್ಯವನ್ನೇ ಪ್ರಶ್ನಿಸತೊಡಗುತ್ತಾರೆ. ಇದೀಗ ಯುಜಿಸಿ ನಿಯಮಗಳನ್ನು ಪ್ರಶ್ನಿಸುತ್ತಿರುವವರೂ ಅದೇ ವರ್ಗದ ಜನರು. ಅವರ ರಾಗಕ್ಕೆ ಸುಪ್ರೀಂಕೋರ್ಟ್ ತಾಳ ಹಾಕಲು ಮುಂದಾಗಿರುವುದು ಕಳವಳಕಾರಿಯಾಗಿದೆ.

‘‘ದೇಶವು ಹಿಂದಕ್ಕೆ ಚಲಿಸುತ್ತಿದೆಯೆ? ಜಾತಿ ರಹಿತ ಸಮಾಜವನ್ನು ಸಾಧಿಸುವ ನಿಟ್ಟಿನಲ್ಲಿ ಏನು ಸಾಧಿಸಿದ್ದೇವೆಯೋ ಈಗ ನಾವು ಅದರಿಂದ ಹಿಂದೆ ಹೋಗಬೇಕೆ?’’ ಎಂದೂ ಸುಪ್ರೀಂಕೋರ್ಟ್ ಕೇಳಿದೆ. ಈ ಪ್ರಶ್ನೆಯನ್ನು ನಿಯಮಾವಳಿಯನ್ನು ವಿರೋಧಿಸುತ್ತಿರುವವರೊಂದಿಗೆ ಕೇಳಿದೆಯೋ ಅಥವಾ ಸರಕಾರವನ್ನು ಕೇಳಿದೆಯೋ ಎನ್ನುವ ಗೊಂದಲವಿದೆ. ಜಾತಿ ರಹಿತ ಸಮಾಜವನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಸಂಪೂರ್ಣ ವಿಫಲವಾಗಿದೆ ಎನ್ನುವುದರಲ್ಲಿ ಸುಪ್ರೀಂಕೋರ್ಟ್‌ಗೆ ಅನುಮಾನವಿದೆಯೆ? ನ್ಯಾಯದೇವತೆಯ ಪ್ರತಿಮೆಯ ಕಣ್ಣಿನ ಪಟ್ಟಿ ಬಿಚ್ಚಿದ ಬಳಿಕವೂ ಈ ದೇಶದಲ್ಲಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳು, ಜಾತಿ ಅಸಮಾನತೆಗಳು ಯಾಕೆ ನ್ಯಾಯಾಲಯಕ್ಕೆ ಕಾಣುತ್ತಿಲ್ಲ? ಯುಜಿಸಿಯ ಈ ನಿಯಮಗಳಿಂದಾಗಿ ಉನ್ನತ ಶಿಕ್ಷಣ ವ್ಯವಸ್ಥೆಯೊಳಗೆ ಜಾತಿ ತಾರತಮ್ಯ ಸೃಷ್ಟಿಯಾಗಿದೆ ಎಂದು ಸುಪ್ರೀಂಕೋರ್ಟ್ ಭಾವಿಸುತ್ತದೆಯೆ ? ಯುಜಿಸಿಯು ಕಠಿಣ ಕಾನೂನನ್ನು ಜಾರಿಗೆ ತರಲು ಹೊರಟಿರುವುದೇ ಜಾತಿ ರಹಿತ ಸಮಾಜವನ್ನು ಸಾಧಿಸುವುದಕ್ಕಾಗಿ ಎನ್ನುವುದು ಸುಪ್ರೀಂಕೋರ್ಟ್‌ಗೆ ಯಾಕೆ ಅರ್ಥವಾಗಿಲ್ಲ? ಅಥವಾ ಜಾತಿ ತಾರತಮ್ಯದ ವಿಷಯದಲ್ಲಿ ಸುಪ್ರೀಂಕೋರ್ಟ್ ನಿದ್ರೆಯಲ್ಲಿರುವಂತೆ ನಟಿಸುತ್ತಿದೆಯೆ? ಈ ದೇಶದ ಉನ್ನತ ಶಿಕ್ಷಣದಲ್ಲಿ ಎಲ್ಲ ಜಾತಿ, ಸಮುದಾಯ ಒಳಗೊಳ್ಳುವಂತಾಗಬೇಕಾದರೆ ಅಲ್ಲಿ ಜಾತಿ ತಾರತಮ್ಯ ಅಳಿಯಬೇಕು. ಅದಕ್ಕಾಗಿ ಕಠಿಣ ಕಾನೂನಿನ ಮಾತ್ರ ಅದನ್ನು ಸಾಧಿಸಬಹುದಾಗಿದೆ. ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯಗಳ ಕುರಿತಂತೆ ಹಲವು ಸಂಘಟನೆಗಳು ವರದಿಗಳನ್ನು ನೀಡಿವೆ. ಈ ತಾರತಮ್ಯಕ್ಕೆ ಬಲಿಯಾದವರ ಕುರಿತಂತೆ ಸರಕಾರದ ಬಳಿ ಅಧಿಕೃತ ಅಂಕಿಅಂಶಗಳೂ ಇವೆ. ಈ ಹಿನ್ನೆಲೆಯಲ್ಲಿ ಯುಜಿಸಿಗೆ ಇಂತಹದೊಂದು ನಿಯಮಗಳನ್ನು ಜಾರಿಗೆ ತರುವ ಅನಿವಾರ್ಯ ಸೃಷ್ಟಿಯಾಯಿತು. ಇದು ಸುಪ್ರೀಂಕೋರ್ಟ್‌ಗೆ ತಿಳಿಯದಿರುವುದೇನೂ ಅಲ್ಲ. ಇತ್ತ ಬಿಜೆಪಿಯೂ ಅಡ್ಡಗೋಡೆಯಲ್ಲಿ ದೀಪವಿಡುವ ಪ್ರಯತ್ನ ನಡೆಸುತ್ತಿದೆ. ಹಿಂದುಳಿದವರ್ಗಗಳನ್ನು ಒಲಿಸಿಕೊಳ್ಳಲು ನಿಯಮಗಳನ್ನು ಜಾರಿಗೆ ತರುವ ನಟನೆಯನ್ನಷ್ಟೇ ಮಾಡಿ, ಒಳಗಿನಿಂದಲೇ ಅದರ ವಿರುದ್ಧ ಸಂಚುಗಳನ್ನು ನಡೆಸುತ್ತಿದೆ. ಯುಜಿಸಿಯ ನಿಯಮಗಳ ವಿರುದ್ಧ ಆರೆಸ್ಸೆಸ್ ಸಂಘಟನೆಯೂ ಅಸಮಾಧಾನವನ್ನು ಹೊಂದಿದ್ದು ಸರಕಾರದ ಮೇಲೆ ಒತ್ತಡಗಳನ್ನು ಹಾಕತೊಡಗಿದೆ. ಹೇಗೆ ಯಾವ ಹೋರಾಟಗಳೂ ಇಲ್ಲದೆ ಈ ದೇಶದಲ್ಲಿ ಸಾಮಾನ್ಯ ವರ್ಗಕ್ಕೆ ಶೇ. 10 ಮೀಸಲಾತಿಯನ್ನು ನೀಡಲಾಯಿತೋ, ಅದೇ ರೀತಿಯಲ್ಲಿ ಒಂದು ಸಣ್ಣ ಗುಂಪಿನ ಆಕ್ಷೇಪಗಳನ್ನೇ ಈ ದೇಶದ ಆಕ್ಷೇಪವೆಂಬಂತೆ ಬಿಂಬಿಸಿ ಯುಜಿಸಿ ನಿಯಮಗಳನ್ನು ದುರ್ಬಲಗೊಳಿಸಲು ಕೇಂದ್ರ ಸರಕಾರವೇ ಒಳಗಿಂದೊಳಗೆ ಪ್ರಯತ್ನಿಸುತ್ತಿದೆ. ಆ ಪ್ರಯತ್ನದ ಭಾಗವಾಗಿ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಕ್ಕಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News