ದೇಶದ ಯುವಜನರು ಮಾತನಾಡುತ್ತಿದ್ದಾರೆ...

Update: 2026-07-23 06:58 IST

Photo Credit : PTI

ಭಾರತ ಇನ್ನೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾಗುತ್ತಿದೆಯೆ? ಜು. 20ರಂದು ಈ ದೇಶದ ಯುವಜನತೆಯ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯ, ಅದಕ್ಕೆ ಸರಕಾರ ನೀಡಿದ ಕುಮ್ಮಕ್ಕನ್ನು ನೋಡಿದವರೆಲ್ಲರೂ ಇಲ್ಲಿ ಪ್ರಜಾಸತ್ತಾತ್ಮಕ ಸರಕಾರ ಅಸ್ತಿತ್ವದಲ್ಲಿದೆಯೆ? ಎಂದು ಅನುಮಾನಪಡುವಂತಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾರ್ಥಿಗಳು, ಯುವಜನರ ಮೇಲೆ ಬ್ರಿಟಿಷರು ಎಸಗಿದ ದೌರ್ಜನ್ಯವನ್ನು ನೆನಪಿಸುವ ರೀತಿಯಲ್ಲಿತ್ತು ವಿದ್ಯಾರ್ಥಿಗಳ ಮೇಲೆ ನಮ್ಮದೇ ಸರಕಾರ ನಡೆಸಿದ ದಮನ. ಪೊಲೀಸರು ನಡೆಸಿದ ಲಾಠಿಚಾರ್ಜ್, ಸಿಡಿಸಿದ ಅಶ್ರುವಾಯು, ಜಲಫಿರಂಗಿ ಆಕಸ್ಮಿಕವೇನೂ ಆಗಿರಲಿಲ್ಲ. ಹಿಂದಿನ ದಿನ ಸೋನಂ ವಾಂಗ್ಚುಕ್ ಅವರನ್ನು ಸರಕಾರ ಬಲವಂತವಾಗಿ ತೆರವು ಮಾಡಿಸಿದಾಗಲೇ, ವಿದ್ಯಾರ್ಥಿಗಳ ಮೇಲೆ ಇಂತಹದೊಂದು ದೌರ್ಜನ್ಯ ನಡೆಯುವ ಸಾಧ್ಯತೆಗಳ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಸಂಘಪರಿವಾರದ ಪುಂಡರು ದಂಗೆ ಎಬ್ಬಿಸಿ ಅದನ್ನು ವಿದ್ಯಾರ್ಥಿಗಳ ತಲೆಗೆ ಕಟ್ಟುವ ಸಂಚೂ ನಡೆದಿತ್ತು. ಆದರೆ ಎಲ್ಲ ಸಂಚುಗಳನ್ನು ವಿಫಲಗೊಳಿಸಿ ವಿದ್ಯಾರ್ಥಿಗಳು ಅತ್ಯಂತ ತಾಳ್ಮೆಯಿಂದ, ಅಹಿಂಸಾತ್ಮಕವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಬಾಯಲ್ಲಿ ಘೋಷಣೆ, ಕೈಯಲ್ಲಿ ಪೋಸ್ಟರ್ ಹಿಡಿದುಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ದಾಳಿ ನಡೆಸುವುದಕ್ಕೆ ಯಾವುದೇ ಕಾರಣಗಳಿರಲಿಲ್ಲ. 170ಕ್ಕೂ ಅಧಿಕ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ದೇಶದ ಶಿಕ್ಷಣ ವ್ಯವಸ್ಥೆಯನ್ನು ಭ್ರಷ್ಟರ ಕೈಯಿಂದ ರಕ್ಷಿಸುವುದಕ್ಕಾಗಿ ಧ್ವನಿಯೆತ್ತಿದ ಒಂದೇ ಕಾರಣಕ್ಕಾಗಿ ಹಲವು ವಿದ್ಯಾರ್ಥಿಗಳು, ಯುವಕರ ಮೇಲೆ ಎಫ್‌ಐಆರ್‌ಗಳಾಗಿವೆ. ವಿದ್ಯಾರ್ಥಿಗಳ ಮೇಲ ಎ ದಾಳಿ ನಡೆಸಿದವರಲ್ಲಿ ಪೊಲೀಸರು ಯಾರು? ಗೂಂಡಾಗಳು ಯಾರು ? ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಪೊಲೀಸ್ ಸಮವಸ್ತ್ರಗಳನ್ನು ಧರಿಸದೆ, ಮುಖ ಮುಚ್ಚಿಕೊಂಡ ವ್ಯಕ್ತಿಗಳೂ ವಿದ್ಯಾರ್ಥಿಗಳ ಮೇಲೆ ಲಾಠಿಯಿಂದ ಹಲ್ಲೆ ನಡೆಸುತ್ತಿರುವ ಹೃದಯವಿದ್ರಾವಕ ದೃಶ್ಯಗಳಿಗೆ ದೇಶ ಸಾಕ್ಷಿಯಾಯಿತು. ವಿಪರ್ಯಾಸವೆಂದರೆ, ಇಷ್ಟೆಲ್ಲ ನಡೆದ ಬಳಿಕ ಪ್ರಧಾನಿ ಮೋದಿಯವರು ಬಾಯಿ ತೆರೆದಿದ್ದಾರೆ. ‘‘ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದು ರಾಷ್ಟ್ರೀಯ ಜವಾಬ್ದಾರಿಯಾಗಿದ್ದು, ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೆ ಸಾಧ್ಯವಾದಷ್ಟು ಕಠಿಣ ಶಿಕ್ಷೆಯನ್ನು ವಿಧಿಸಬೇಕು’’ ಎಂಬ ಎರಡು ಸಾಲಿನ ಹೇಳಿಕೆಯನ್ನು ನೀಡಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಭವಿಷ್ಯದ ಭಾರತ ಯುವಶಕ್ತಿಯ ಕೈಯಲ್ಲಿದೆ ಎಂದು ಪ್ರಧಾನಿ ಆಗಾಗ ಭಾಷಣದಲ್ಲಿ ಉಲ್ಲೇಖಿಸುತ್ತಿರುತ್ತಾರೆ. ಇಂದು ಹಿರಿಯರು, ವೃದ್ಧರು ಎನಿಸಿಕೊಂಡವರೆಲ್ಲ ಸರ್ವಾಧಿಕಾರಿ, ಭ್ರಷ್ಟ ಸರಕಾರದ ಮುಂದೆ ಚೌಕಾಶಿಗೆ ಕೂತಿರುವ ಸಂದರ್ಭದಲ್ಲಿ, ಯುವಜನರು ಭ್ರಷ್ಟಾಚಾರ ರಹಿತ ಶಿಕ್ಷಣ ವ್ಯವಸ್ಥೆಯನ್ನು ಆಗ್ರಹಿಸಿ ಬೀದಿಗಿಳಿದಿದ್ದಾರೆ. ಅವರ ಬೇಡಿಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ನೀಟ್ ಪರೀಕ್ಷೆ ಯಲ್ಲಿ ನಡೆದಿರುವ ಅಕ್ರಮಗಳನ್ನು ಅವರು ಪ್ರಶ್ನಿಸಿದ್ದಾರೆ. ಸರಕಾರ ಅದರ ಹೊಣೆ ಹೊತ್ತುಕೊಳ್ಳಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಸರಕಾರ ಪ್ರತಿಭಟನೆಗಿಳಿದಿರುವ ಯುವಜನರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿ ಅವರನ್ನು ಬಾಯಿ ಮುಚ್ಚಿಸಲು ಮುಂದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿರುವ ಒಂದೆರಡು ಸಣ್ಣ ಇಲಿಗಳನ್ನು ಬಂಧಿಸಿ ‘‘ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದೇವೆ. ಹೀಗಿರುವಾಗ ಪ್ರತಿಭಟನೆ ಯಾಕೆ?’’ ಎಂದು ಸರಕಾರ ಕೇಳುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಪರಿಣಾಮವಾಗಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿರುವ ದೊಡ್ಡ ಕುಳಗಳನ್ನು ಸರಕಾರ ರಕ್ಷಿಸುವ ಪ್ರಯತ್ನ ನಡೆಸುತ್ತಿದೆ. ನಿಜಕ್ಕೂ ಶಿಕ್ಷಣ ವ್ಯವಸ್ಥೆಯ ಬಗ್ಗೆ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಬಗ್ಗೆ ಒಂದಿಷ್ಟು ಕಾಳಜಿಯಿದ್ದಿದ್ದರೆ ಕೇಂದ್ರ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದರು. ಸ್ವತಂತ್ರ ತನಿಖಾ ಸಂಸ್ಥೆ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಿತ್ತು. ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಜೊತೆಗೆ ಮಾತುಕತೆಯ ಪ್ರಯತ್ನವನ್ನಾದರೂ ಕೇಂದ್ರ ಸರಕಾರ ನಡೆಸುತ್ತಿತ್ತು. ಆದರೆ, ಪ್ರಶ್ನಿಸಿದ ವಿದ್ಯಾರ್ಥಿಗಳನ್ನೇ ಲಾಠಿ, ಬೂಟುಗಳಿಂದ ದಮನಿಸಿ, ಭ್ರಷ್ಟ ಅಧಿಕಾರಿಗಳನ್ನು, ಸಚಿವರನ್ನು ರಕ್ಷಿಸುವ ಪ್ರಯತ್ನವನ್ನು ಸರಕಾರ ಮಾಡಿದೆ.

ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಬೇಕಾಗಿತ್ತು. ಆದರೆ ಸರಕಾರದ ಸರ್ವಾಧಿಕಾರಿ ಮನಸ್ಥಿತಿಗೆ ಸುಪ್ರೀಂಕೋರ್ಟ್ ಪರೋಕ್ಷವಾಗಿ ಸಮ್ಮತಿ ಸೂಚಿಸಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದ ತುರ್ತು ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ. ಪೊಲೀಸರು ನಡೆಸಿದ ದೌರ್ಜನ್ಯಗಳಿಗೆ ಸಂಬಂಧಿಸಿ ವೀಡಿಯೊಗಳನ್ನು ನ್ಯಾಯಮೂರ್ತಿಯ ಮುಂದಿಟ್ಟರೆ, ‘‘ಅದನ್ನು ನೋಡಲು ನನಗೆ ಸಮಯವಿಲ್ಲ. ನ್ಯಾಯಾಲಯದ ಸಮಯವನ್ನು ಹಾಳುಮಾಡಬೇಡಿ’’ ಎಂದು ‘ಕಳ್ಳ ಬೆಕ್ಕಿನಂತೆ’ ಕಣ್ಣು ಮುಚ್ಚಿ

ಕೊಂಡರು. ಈ ದೇಶದ ಪತ್ರಕರ್ತರು ಮತ್ತು ನಿರುದ್ಯೋಗಿ ಯುವಜನರನ್ನು ಜಿರಳೆಗಳು ಎಂದು ಇದೇ ನ್ಯಾಯಾಧೀಶರು ಈ ಹಿಂದೊಮ್ಮೆ ನಿಂದಿಸಿದ್ದರು. ಪರೀಕ್ಷಾ ಅಕ್ರಮಗಳ ಬಗ್ಗೆ ಮಾತನಾಡಬೇಕಾಗಿದ್ದ ನ್ಯಾಯಮೂರ್ತಿ, ಆ ಅಕ್ರಮಗಳ ವಿರುದ್ಧ ಧ್ವನಿಯೆತ್ತುತ್ತಿರುವವರನ್ನೇ ‘ಜಿರಳೆ’ಗಳು ಎಂದು ಕರೆದಿರುವುದು ಯುವಜನರನ್ನು ಕೆರಳಿಸಿತ್ತು. ‘ಕಾಕ್ರೋಚ್ ಜನತಾ ಪಾರ್ಟಿ’ ಹುಟ್ಟುವುದಕ್ಕೆ ಕಾರಣವೇ ನಮ್ಮ ಸರ್ವೋಚ್ಚ ‘ಅನ್ಯಾಯ ವ್ಯವಸ್ಥೆ’. ಇಡೀ ಪ್ರತಿಭಟನೆ ಸರಕಾರದ ವಿರುದ್ಧ ಮಾತ್ರವಲ್ಲ, ಸರಕಾರದ ಅಕ್ರಮಗಳಿಗೆ ಪರೋಕ್ಷ ಸಮ್ಮತಿ ನೀಡುತ್ತಿರುವ ನ್ಯಾಯವ್ಯವಸ್ಥೆಯ ವಿರುದ್ಧವೂ ಕೂಡ ಎನ್ನುವುದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಮನವರಿಕೆಯಾಗಿರಬೇಕು. ಆದುದರಿಂದಲೇ, ಪೊಲೀಸ್ ದೌರ್ಜನ್ಯಗಳ ವೀಡಿಯೊಗಳನ್ನು ನೋಡಲು ಅವರು ಹಿಂಜರಿದರು. ಆ ವೀಡಿಯೊಗಳು ಪರೋಕ್ಷವಾಗಿ ಸರ್ವೋಚ್ಚ ನ್ಯಾಯ ವ್ಯವಸ್ಥೆಯನ್ನೇ ಅಣಕಿಸುವಂತೆ ಅವರಿಗೆ ಭಾಸವಾಗಿರಬೇಕು.

ಪೊಲೀಸ್ ದೌರ್ಜನ್ಯಗಳನ್ನು ಸಮರ್ಥಿಸಿಕೊಳ್ಳಲು ಸರಕಾರ ಹರಸಾಹಸ ಮಾಡುತ್ತಿದೆ. ಆಶಾದಾಯಕ ಅಂಶವೆಂದರೆ, ಈ ದೌರ್ಜನ್ಯ ಯುವಜನತೆಯ ಶಕ್ತಿಯನ್ನು ಕುಗ್ಗಿಸಿಲ್ಲ. ಬದಲಿಗೆ, ಸರಕಾರದ ನಿಜ ಮುಖವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದೆ. ಪ್ರತಿಭಟನೆಯ ಬಗ್ಗೆ, ಅದರ ನೇತೃತ್ವದ ಬಗ್ಗೆ ಅಲ್ಪಸ್ವಲ್ಪ ಅನುಮಾನ ಇಟ್ಟುಕೊಂಡವರೂ ಇದೀಗ ಪ್ರತಿಭಟನೆಗೆ ಕೈ ಜೋಡಿಸುತ್ತಿದ್ದಾರೆ. ಸಿನೆಮಾನಟರು, ಉದ್ಯಮಿಗಳು, ವಿವಿಧ ಸಂಘಟನೆಗಳ ನಾಯಕರು ವಿದ್ಯಾರ್ಥಿಗಳ ಪರವಾಗಿ ಮಾತನಾಡುತ್ತಿದ್ದಾರೆ. ಈವರೆಗೆ ಸಿಜೆಪಿಯನ್ನು ಬೆಂಬಲಿಸಲು ಹಿಂದೆ ಮುಂದೆ ನೋಡುತ್ತಿದ್ದ ರಾಜಕೀಯ ಪಕ್ಷಗಳ ನಾಯಕರೂ ಮುಕ್ತವಾಗಿ ಬೆಂಬಲವನ್ನು ಘೋಷಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಸಿಜೆಪಿ ನಾಯಕರು ಹೇಳುತ್ತಿದ್ದಾರೆ. ಜು. 20ರಂದು ನಡೆದಿರುವುದು ಟ್ರೇಲರ್ ಮಾತ್ರ. ಸರಕಾರ ಸ್ಪಂದಿಸದೇ ಇದ್ದರೆ ದಿಲ್ಲಿಯ ಕಡೆಗೆ ಲಕ್ಷಾಂತರ ಯುವಜನರು ಹರಿದು ಬರಲಿದ್ದಾರೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಭ್ರಷ್ಟ ರಾಜಕಾರಣಿಗಳಿಂದ ಕೆಟ್ಟು ಹೋಗಿರುವ ಶಿಕ್ಷಣ ವ್ಯವಸ್ಥೆಯ ವಿರುದ್ಧ ನಿಧಾನಕ್ಕೆ ಇಡೀ ದೇಶ ಮಾತನಾಡ ತೊಡಗಿದೆ. ಇದು ಜು. 20ರ ಸಂಸತ್ ಚಲೋ ಕಾರ್ಯಕ್ರಮದ ಬಹುದೊಡ್ಡ ಗೆಲುವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News