ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿರುವ ಜಾತಿ ವೈರಸ್
PC: timesofindia
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತೀಯರೆನ್ನುವ ಕಾರಣಕ್ಕಾಗಿ ಆಸ್ಟ್ರೇಲಿಯ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಅನಿವಾಸಿಗಳ ಮೇಲೆ ಹಲ್ಲೆಗಳು ನಡೆಯುತ್ತಿರುತ್ತವೆ. ಜನಾಂಗೀಯ ವಾದಿಗಳ ಈ ಕೃತ್ಯಗಳನ್ನು ಭಾರತ ಸರಕಾರ ಹಲವು ಬಾರಿ ಖಂಡಿಸಿದೆೆ. ಇತ್ತೀಚಿನ ದಿನಗಳಲ್ಲಿ ಈ ಹಲ್ಲೆ, ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿವೆ. ಜನಾಂಗೀಯ ಹಲ್ಲೆಯ ನೇತೃತ್ವವನ್ನು ಅಲ್ಲಿನ ಸರಕಾಗಳೇ ವಹಿಸಿಕೊಂಡಿವೆಯೇ ಎಂದು ಅನುಮಾನಿಸುವಂತಿದೆ. ಜೊತೆಗೆ ಅಮೆರಿಕ ಜಾರಿಗೊಳಿಸುತ್ತಿರುವ ಹೊಸ ಹೊಸ ನೀತಿಗಳು ಜನಾಂಗೀಯ ದ್ವೇಷಕ್ಕೆ ಪೂರಕವಾಗಿವೆ. ಜನಾಂಗೀಯ ನಿಂದನೆ, ದ್ವೇಷಗಳಿಗೆ ಇತರ ದೇಶಗಳು ಭಾರತವನ್ನು ಗುರುವಾಗಿ ಸ್ವೀಕರಿಸಿದೆಯೇ ಎಂದು ಅನುಮಾನ ಪಡುವಂತೆ ಕೃತ್ಯಗಳಲ್ಲಿ ಹೆಚ್ಚಳ ಕಾಣುತ್ತಿದೆ. ಭಾರತದಲ್ಲಿ ಬೇರು ಬಿಟ್ಟಿರುವ ಜಾತಿ ಅಸಮಾನತೆಯನ್ನು ವಿದೇಶಗಳಿಗೂ ಹೊತ್ತೊಯ್ದಿರುವ ಅನಿವಾಸಿ ಭಾರತೀಯರಿಗೆ, ಅಲ್ಲಿನ ಪ್ರಜೆಗಳು ತೋರಿಸುತ್ತಿರುವ ತಾರತಮ್ಯದ ವಿರುದ್ಧ ಪ್ರತಿಭಟನೆ ನಡೆಸುವ ಹಕ್ಕು ಇದೆಯೇ ಎನ್ನುವ ಪ್ರಶ್ನೆಯೂ ಇದೀಗ ಮುನ್ನೆಲೆಗೆ ಬಂದಿದೆ.
ಜಾತಿ ವ್ಯವಸ್ಥೆಯನ್ನು ಭಾರತ ‘ಹೆಗ್ಗಳಿಕೆ’ಯಾಗಿ ಸ್ವೀಕರಿಸಿ ಅದನ್ನು ಆಚರಿಸುತ್ತಾ ಬರುತ್ತಿದೆ. ಜಾತಿ ವ್ಯವಸ್ಥೆಯನ್ನು ಆಚರಿಸುವ ಜನರ ವಿರುದ್ಧ ಪ್ರಕರಣ ದಾಖಲಿಸಬೇಕಾಗಿದ್ದ ಸರಕಾರ, ಜಾತಿ ವ್ಯವಸ್ಥೆಯ ವಿರುದ್ಧ ಹೇಳಿಕೆ ನೀಡುವ ವಿಚಾರವಾದಿಗಳ, ಸುಶಿಕ್ಷಿತರ ಮೇಲೆಯೇ ಪ್ರಕರಣ ದಾಖಲಿಸುತ್ತಿದೆ. ಜಾತಿ ಆಚರಣೆಯ ಮೂಲಕ ಕೆಳ ಜಾತಿಯ ಜನರನ್ನು ತಮ್ಮ ಗುಲಾಮರನ್ನಾಗಿಸಿ ಈ ದೇಶದ ಸಕಲ ಸೌಲಭ್ಯಗಳನ್ನು ತಮ್ಮದಾಗಿಸುತ್ತಾ ಶಿಕ್ಷಣ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬಲಾಢ್ಯರಾಗಿರುವ ಈ ದೇಶದ ಮೇಲ್‌ಜಾತಿಯ ಜನರು ಇದೀಗ ಇನ್ನಷ್ಟು ಅವಕಾಶಗಳನ್ನು ಬಾಚಿಕೊಳ್ಳಲು ದೇಶ ತೊರೆದು ಅಮೆರಿಕದಂತಹ ಶ್ರೀಮಂತ ದೇಶಗಳನ್ನು ಸೇರುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಭಾರತದ ಪೌರತ್ವ ತೊರೆದು ವಿದೇಶಗಳಲ್ಲಿ ನೆಲೆಸಿದ ಜನರಲ್ಲಿ ಮೇಲ್‌ಜಾತಿಯ ಜನರೇ ಅಧಿಕ ಎನ್ನುವುದು ಈಗಾಗಲೇ ಸರಕಾರಿ ಅಂಕಿಅಂಶಗಳಿಂದ ಬೆಳಕಿಗೆ ಬಂದಿದೆ. ಮುಖ್ಯವಾಗಿ ಅಮೆರಿಕ, ಲಂಡನ್, ಆಸ್ಟ್ರೇಲಿಯದಂತಹ ಮುಂದುವರಿದ ದೇಶಗಳನ್ನು ಇವರು ಆರಿಸುತ್ತಿದ್ದಾರೆ. ವಲಸೆ ಹೋದ ಈ ಜನರು ಕನಿಷ್ಠ ಆ ದೇಶದಲ್ಲಾದರೂ ತಮ್ಮ ಜಾತಿಯ ಮೇಲರಿಮೆಯಿಂದ ಹೊರ ಬಂದು, ಎಲ್ಲರನ್ನು ಸಮಾನವಾಗಿ ಸ್ವೀಕರಿಸುತ್ತಾರೆ ಎಂದು ನಿರೀಕ್ಷಿಸಿದರೆ ಅದೂ ಹುಸಿಯಾಗುತ್ತಿದೆ. ಬದಲಿಗೆ ಈ ದೇಶದಲ್ಲಿ ಹರಡಿರುವ ಜಾತಿ ವೈರಸ್‌ನ್ನು ಅವರು ತಾವು ವಲಸೆ ಹೋದ ಅಮೆರಿಕದಂತಹ ಶ್ರೀಮಂತ ದೇಶಗಳಿಗೂ ಹರಡುತ್ತಿದ್ದಾರೆ. ಭಾರತದಿಂದ ತಮ್ಮ ದೇಶಕ್ಕೆ ಹರಡುತ್ತಿರುವ ಈ ಜಾತಿ ವೈರಸ್ ಬಗ್ಗೆ ಅಲ್ಲಿನ ಪ್ರಜ್ಞಾವಂತರು ಆತಂಕಗೊಂಡಿದ್ದಾರೆ. ಈ ವೈರಸ್ ಯಾವುದೇ ಸಾಂಕ್ರಾಮಿಕ ವೈರಸ್‌ಗಿಂತ ಮಾರಕವಾದುದು ಎನ್ನುವುದು ಅವರಿಗೆ ಹಂತಹಂತವಾಗಿ ಮನವರಿಕೆಯಾಗತೊಡಗಿದೆ. ವರ್ಣಭೇದದ ವಿರುದ್ಧ ಬಹುದೊಡ್ಡ ಆಂದೋಲಗಳು ವಿದೇಶದಲ್ಲಾಗಿವೆ. ಕರಿಯರಿಗೆ ಅವರ ಹಕ್ಕುಗಳನ್ನು ನೀಡಲು ಅಲ್ಲಿ ಸರಕಾರಗಳು ಬಹಳಷ್ಟು ಶ್ರಮಿಸಿವೆ. ಇವೆಲ್ಲದರ ನಡುವೆಯೂ ಇನ್ನೂ ಅಲ್ಲಲ್ಲಿ ಜನಾಂಗೀಯ ಹಲ್ಲೆಗಳು ನಡೆಯುತ್ತಿರುವುದು ಕಂಡು ಬರುತ್ತವೆೆ. ಇವುಗಳ ನಡುವೆಯೇ ಅನಿವಾಸಿ ಭಾರತೀಯರಿಂದಾಗಿ ತಮ್ಮ ದೇಶದಲ್ಲಿ ಹರಡತೊಡಗಿರುವ ಜಾತಿ ಅಸ್ಪಶ್ಯತೆಯ ವೈರಸ್ ಬಗ್ಗೆ ಅವರು ಇನ್ನಷ್ಟು ಚಿಂತಿತರಾಗಿದ್ದಾರೆ.
21ನೇ ಶತಮಾನದಲ್ಲೂ ಅಮೆರಿಕದಲ್ಲಿ ಜಾತಿ ತಾರತಮ್ಯ, ದಲಿತರ ಮೇಲೆ ದೌರ್ಜನ್ಯ ಅಸ್ತಿತ್ವದಲ್ಲಿದೆ ಎನ್ನುವುದನ್ನು ದಲಿತ ಹೋರಾಟಗಾರ್ತಿ ತೇನ್‌ಮೊಳಿ ಸೌಂದರ್ ರಾಜನ್ ಅವರು ತಮ್ಮ ಸಮೀಕ್ಷೆಯಲ್ಲಿ ಈಗಾಗಲೇ ಬಹಿರಂಗಪಡಿಸಿದ್ದಾರೆ. ಪ್ರತೀ ನಾಲ್ವರು ದಲಿತರ ಪೈಕಿ ಓರ್ವ ದೈಹಿಕ ಅಥವಾ ಮೌಖಿಕ ಹಲ್ಲೆಗೆ ಗುರಿಯಾಗುವುದು, ಶಿಕ್ಷಣ ಕ್ಷೇತ್ರದಲ್ಲಿ ಪ್ರತೀ ಮೂವರು ದಲಿತರ ಪೈಕಿ ಓರ್ವ ಜಾತಿ ತಾರತಮ್ಯಕ್ಕೆ ಗುರಿಯಾಗುವುದು, ಪ್ರತೀ ಮೂವರು ದಲಿತರ ಪೈಕಿ ಇಬ್ಬರು ಉದ್ಯೋಗ ಸ್ಥಳಗಳಲ್ಲಿ ಜಾತಿ ಪಕ್ಷಪಾತಿ ಧೋರಣೆಗೆ ಗುರಿಯಾಗುವುದು, ದಲಿತರ ಜನಸಂಖ್ಯೆಯಲ್ಲಿ ಶೇ. 50ರಷ್ಟು ಮಂದಿ ಅಭದ್ರತೆಯಿಂದ ಜೀವಿಸುತ್ತಿರುವುದು ಇವರ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಅವರ ಸಮೀಕ್ಷೆಯ ಪ್ರಕಾರ ಶೇ. 60ರಷ್ಟು ಮಂದಿ ಜಾತ್ಯಾಧಾರಿತ ಬೈಗುಳ ಹಾಗೂ ಅವಹೇಳನಕಾರಿ ನಿಂದನೆಗಳನ್ನು ಅನುಭವಿಸಿರುವುದು ಮತ್ತು ಶೇ. 40ರಷ್ಟು ಮಂದಿ ದೇವಸ್ಥಾನಗಳಲ್ಲಿ ತಿರಸ್ಕಾರದ ಅನುಭವ ಎದುರಿಸಿರುವುದು ಬೆಳಕಿಗೆ ಬಂದಿದೆ. ಶೇ. 20ರಷ್ಟು ಮಂದಿ ವ್ಯಾಪಾರ ಸ್ಥಳಗಳಲ್ಲಿ ತಾರತಮ್ಯ ಅನುಭವಿಸಿದ್ದರೆ, ಶೇ. 40ರಷ್ಟು ಮಂದಿ ಜಾತಿಯ ಕಾರಣಕ್ಕೆ ಪ್ರೇಮ ಸಂಬಂಧಗಳಿಂದ ತಿರಸ್ಕೃತಗೊಂಡಿದ್ದಾರೆ. ವಿಪರ್ಯಾಸವೆಂದರೆ, ಭಾರತದಲ್ಲಿ ಕನಿಷ್ಠ ಈ ಜಾತಿ ಅಸಮಾನತೆ, ಅಸ್ಪಶ್ಯತೆ ಚರ್ಚೆಯಲ್ಲಾದರೂ ಇದೆ. ಅಮೆರಿಕದಂತಹ ದೇಶಗಳಲ್ಲಿ ಈ ಜಾತಿ ತಾರತಮ್ಯವನ್ನು ಒಳಗೊಳಗೇ ನುಂಗಿಕೊಂಡು ಭಾರತೀಯರು ಬದುಕುತ್ತಿದ್ದಾರೆ. ಯಾಕೆಂದರೆ, ಜಾತೀಯತೆಗೆ ತಡೆ ಹೇರುವ ಕಾನೂನು ಆ ದೇಶಗಳಲ್ಲಿ ಇಲ್ಲ. ಈ ಜಾತಿ ಅಸಮಾನತೆಯ ಸೂಕ್ಷ್ಮಗಳು ವಿದೇಶಿಯರಿಗೆ ಅಷ್ಟು ಸುಲಭವಾಗಿ ಅರ್ಥವಾಗುವುದು ಸಾಧ್ಯವೂ ಇಲ್ಲದಂತಹ ಸ್ಥಿತಿಯಿದೆ.
ತೇನ್‌ಮೊಳಿಯವರ ಇಕ್ವಾಲಿಟಿ ಲ್ಯಾಬ್ಸ್ ಸಮೀಕ್ಷೆಯ ಪರಿಣಾಮವಾಗಿಯೇ 2023ರಲ್ಲಿ ಸಿಯಾಟಲ್ ನಗರದಲ್ಲಿ ಜಾತಿ ತಾರತಮ್ಯ ನಿಷೇಧಿಸುವ ಕಾನೂನು ಮೊದಲ ಬಾರಿಗೆ ಜಾರಿಯಾಯಿತು. ಕ್ಯಾಲಿಫೋರ್ನಿಯಾದಲ್ಲಿ ಅಸ್ತಿತ್ವದಲ್ಲಿರುವ ತಾರತಮ್ಯ ಕಾಯ್ದೆಗಳಿಗೆ ಜಾತಿಯನ್ನು ಸೇರ್ಪಡೆ ಮಾಡಲು ಕಾರಣವಾದ ಅಲ್ಲಿನ ಕಾಂಗ್ರೆಸ್ ಸೆನೆಟರ್ ಆಯಿಶಾ ವಹಾಬ್ ಮಂಡಿಸಿದ ವಸೂದೆಗೂ ಈ ಸಮೀಕ್ಷೆ ಪ್ರೇರಣೆಯಾಗಿದೆ. ಇದರಿಂದಾಗಿ ಜಾತಿಯ ಕಾರಣಕ್ಕಾಗಿ ವಸತಿ, ಉದ್ಯೋಗ ಅಥವಾ ಶೈಕ್ಷಣಿಕ ಅವಕಾಶಗಳನ್ನು ನಿರಾಕರಿಸುವುದು ಕಾನೂನು ಬಾಹಿರ ಎಂದು ಘೋಷಿತವಾಯಿತು. ಎರಡೂ ಸದನಗಳಿಂದ ಮಸೂದೆ ಅಂಗೀಕಾರವಾಯಿತಾದರೂ ಮೇಲ್‌ಜಾತಿಯ ಹಿತಾಸಕ್ತಿಗಳ ಒತ್ತಡಕ್ಕೆ ಒಳಗಾಗಿ ಗವರ್ನರ್ ತಮ್ಮ ಪರಮಾಧಿಕಾರ ಬಳಸಿ ಮಸೂದೆಯನ್ನು ತಿರಸ್ಕರಿಸಿದರು. ಆದರೆ ಕಾನೂನಿನ್ವಯ ಜಾತಿ ತಾರತಮ್ಯ ಈಗಾಗಲೇ ಕಾನೂನು ಬಾಹಿರ ಎನ್ನುವುದನ್ನು ಅವರು ಸದನಕ್ಕೆ ದೃಢ ಪಡಿಸಿದರು.
ವಿದೇಶಗಳಲ್ಲೂ ಈ ವೈರಸ್ ಯಾಕೆ ಹರಡುತ್ತಿದೆ ಎನ್ನುವುದನ್ನು ಊಹಿಸುವುದಕ್ಕೆ ಕಷ್ಟವಿಲ್ಲ. ಭಾರತದಲ್ಲಿ ಅತ್ಯುನ್ನತ ಶಿಕ್ಷಣ, ತಂತ್ರಜ್ಞಾನದಲ್ಲಿ ಮೇಲ್‌ಜಾತಿಯ ಜನರೇ ಪ್ರಾಬಲ್ಯವನ್ನು ಹೊಂದಿದ್ದಾರೆ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮೇಲ್‌ಜಾತಿ ಪ್ರಾಬಲ್ಯ ಹೊಂದಿರುವುದರಿಂದ, ವಿದೇಶಗಳಲ್ಲೂ ಅವರು ಹೆಚ್ಚಿನ ಅವಕಾಶವನ್ನು ಬಾಚುತ್ತಿದ್ದಾರೆ. ತಂತ್ರಜ್ಞಾನ ಕ್ಷೇತ್ರವನ್ನು ಮೇಲ್‌ಜಾತಿಯ ಅಗ್ರಹಾರ ಎಂದು ಟೀಕಿಸುವುದು ಇದೇ ಕಾರಣಕ್ಕೆ. ತಂತ್ರಜ್ಞಾನ ಕ್ಷೇತ್ರದ ನಿಯಂತ್ರಣ ಮೇಲ್‌ಜಾತಿಯ ಜನರ ಕೈಯಲ್ಲಿರುವುದರಿಂದ ಇದರೊಳಗೆ ದಲಿತರು, ದುರ್ಬಲ ಜಾತಿಯ ಜನರು ಪ್ರವೇಶಿಸುವುದೆಂದರೆ ಚಕ್ರವ್ಯೆಹದೊಳಗೆ ಅಭಿಮನ್ಯು ಪ್ರವೇಶಿಸಿದಂತೆ. ಒಂದು ವೇಳೆ ಪ್ರವೇಶಿಸಿದರೂ ಜೀವಂತ ಹೊರ ಬರುವುದು ಕಷ್ಟ. ಈ ಹಿನ್ನೆಲೆಯಲ್ಲಿ, ಭಾರತ ಸರಕಾರ ಅನಿವಾಸಿ ಭಾರತೀಯರ ವಿರುದ್ಧ ನಡೆಯುವ ಜನಾಂಗೀಯ ದೌರ್ಜನ್ಯದ ವಿರುದ್ಧ ಕಳವಳ ವ್ಯಕ್ತಪಡಿಸಿದಂತೆಯೇ ಅಲ್ಲಿ ಹೆಚ್ಚುತ್ತಿರುವ ಜಾತಿ ತಾರತಮ್ಯದ ಬಗ್ಗೆಯೂ ಕಳವಳ ವ್ಯಕ್ತಪಡಿಸಬೇಕು. ಜಾತಿ ಅಸಮಾನತೆಯ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸಲು ಅಮೆರಿಕದಂತಹ ದೇಶಗಳ ಮೇಲೆ ಭಾರತವು ಒತ್ತಡವನ್ನು ಹಾಕಬೇಕು. ಭಾರತದಿಂದ ರಫ್ತಾಗುವ ಸರಕುಗಳಿಗೆ ಅಮೆರಿಕ ಹೇರುತ್ತಿರುವ ಸುಂಕ ಚರ್ಚೆಯಲ್ಲಿದೆ. ಈ ಜಾತೀಯತೆಯ ವೈರಸ್‌ಗೆ ಅಮೆರಿಕ ಸಾಧ್ಯವಾದರೆ ಶೇ. 200ರಷ್ಟು ಸುಂಕ ಹೇರಿ ಅದನ್ನು ತಡೆಯಬೇಕು.