ಬೆಸೆದ ಕೈಗಳು !
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದಲ್ಲಿ ಇಂದು ಕ್ರಾಂತಿಯಾಗುತ್ತದೆ, ನಾಳೆ ಕ್ರಾಂತಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ನಾಯಕರು ಮತ್ತು ಅದರ ಮಾಧ್ಯಮ ಗೆಳೆಯರು ತೀವ್ರ ನಿರಾಶೆಯಲ್ಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಂದೇ ವೇದಿಕೆಯಲ್ಲಿ ಜಂಟಿ ಹೇಳಿಕೆ ನೀಡುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ‘‘ಪಕ್ಷದ ವರಿಷ್ಠರ ತೀರ್ಮಾನ, ಸೂಚನೆಯಂತೆ ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆದುಕೊಳ್ಳುತ್ತೇವೆ. ಇಬ್ಬರು ಒಟ್ಟಿಗೆ ಸಾಗುವುದೇ ನಮ್ಮ ನಡುವೆ ಆಗಿರುವ ಒಪ್ಪಂದ. ಸಚಿವರಾಗಲಿ, ಶಾಸಕರಾಗಲಿ ಸರಕಾರದ ವಿರುದ್ಧವಿಲ್ಲ’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರೆ, ‘‘ನಾಯಕತ್ವ ವಿಚಾರದಲ್ಲಿ ನನ್ನದು ಹಾಗೂ ಸಿಎಂ ಸಿದ್ದರಾಮಯ್ಯ ಅವರದು ಒಂದೇ ರಾಜಕೀಯ ನಿಲುವಾಗಿದ್ದು, ಪಕ್ಷದ ವರಿಷ್ಠರು ಹೇಳಿದಂತೆ ನಾವಿಬ್ಬರು ನಡೆಯುತ್ತೇವೆ’’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಮೊದಲು ಇಂತಹದೊಂದು ಜಂಟಿ ಹೇಳಿಕೆಯ ಅಗತ್ಯ ಸರಕಾರಕ್ಕಿತ್ತು. ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯಂತೂ ಸದ್ಯಕ್ಕಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿದೆ.
‘ನಾಯಕತ್ವ ಬದಲಾವಣೆ’ ರಾಜ್ಯದ ಅವಶ್ಯಕತೆಯಂತೂ ಖಂಡಿತ ಅಲ್ಲ. ಈವರೆಗಿನ ಆಡಳಿತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದರೆ ಆಗಬೇಕಾದ ಬದಲಾವಣೆಯನ್ನು ‘ಕ್ರಾಂತಿ’ ಎಂದು ಕರೆಯಬಹುದಾಗಿತ್ತು. ಸರಕಾರದೊಳಗೆ ಮಾತ್ರವಲ್ಲ, ಜನರ ಬದುಕಿನೊಳಗೂ ಬದಲಾವಣೆ ತಂದಾಗ ಅದು ಕ್ರಾಂತಿಯಾಗುತ್ತದೆ. ಈ ಹಿಂದೆ ಬಿಜೆಪಿ ಆಡಳಿತ ಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಪಕ್ಷದೊಳಗೆ ಮಾತ್ರವಲ್ಲ, ಜನರಲ್ಲೂ ವ್ಯಾಪಕ ಆಸಮಾಧಾನಗಳಿದ್ದವು. ಕೊರೋನವನ್ನು ನಿಭಾಯಿಸಲು ಯಡಿಯೂರಪ್ಪ ನೇತೃತ್ವದ ಆಡಳಿತ ಸಂಪೂರ್ಣ ವಿಫಲವಾಗಿತ್ತು. ಕೊರೋನದ ಹೆಸರಿನಲ್ಲೂ ಸರಕಾರ ಭಾರೀ ಭ್ರಷ್ಟಾಚಾರದಲ್ಲಿ ಸಿಲಕಿಕೊಂಡಿತ್ತು. ಯಡಿಯೂರಪ್ಪ ಅವರ ಪುತ್ರನೂ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವುದು, ಆಡಳಿತದಲ್ಲಿ ತೀವ್ರ ಹಸ್ತಕ್ಷೇಪ ನಡೆಸುತ್ತಿರುವುದು ಬಿಜೆಪಿಯೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಯಡಿಯೂರಪ್ಪ ಅವರ ಬದಲಾವಣೆ ಬಿಜೆಪಿಯೊಳಗಿರುವ ನಾಯಕರ ಪಾಲಿಗೆ ಮಾತ್ರವಲ್ಲ, ರಾಜ್ಯದ ಜನತೆಯ ಪಾಲಿಗೂ ಕ್ರಾಂತಿಯೇ ಆಗಿತ್ತು. ಆದರೆ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜನಪ್ರಿಯತೆಯನ್ನು ಸಂಪಾದಿಸಿದ್ದಾರೆ. ಗ್ರಾಮೀಣ ಪ್ರದೇಶದ ಜನರು, ಮುಖ್ಯವಾಗಿ ಮಹಿಳೆಯರು ಸಿದ್ದರಾಮಯ್ಯ ಅವರ ಅಭಿಮಾನಿಗಳಾಗಿ ಪರಿವರ್ತನೆಗೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಬದಲಿಸುವುದಕ್ಕೆ ಬೇಕಾದ ನೆಪಗಳಾಗಲಿ, ಕಾರಣಗಳಾಗಲಿ ಹೈಕಮಾಂಡ್ ಮುಂದಿಲ್ಲ. ಅವರ ಬದಲಾವಣೆಯೇ ಸರಕಾರದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಬಹುದು. ಈ ಬದಲಾವಣೆ ವಿರೋಧ ಪಕ್ಷಗಳಿಗೆ ಬಿಟ್ಟರೆ ಉಳಿದಂತೆ ಯಾರಿಗೂ ಪ್ರಯೋಜನವನ್ನು ನೀಡುವುದಿಲ್ಲ. ಸರಕಾರದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಬಿಹಾರ ಫಲಿತಾಂಶವಂತೂ ಕರ್ನಾಟಕದಲ್ಲಿ ಸಿದ್ದರಾಮಯ್ಯ ಕುರ್ಚಿಯನ್ನು ಇನ್ನಷ್ಟು ಗಟ್ಟಿಯಾಗಿಸಿದೆ. ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಮುಂದಿನ ಚುನಾವಣೆಯನ್ನು ಎದುರಿಸಲು ಹೊರಟರೆ ಅದರಿಂದ ಕಾಂಗ್ರೆಸ್‌ಗೆ ಬಹಳಷ್ಟು ನಷ್ಟವಿದೆ ಎನ್ನುವುದು ಹೈಕಮಾಂಡ್‌ಗೂ ಮನವರಿಕೆಯಾಗಿದೆ.
ಹಾಗೆಂದು ಡಿ. ಕೆ. ಶಿವಕುಮಾರ್ ಅವರ ಬೇಡಿಕೆಯನ್ನು ಸಾರಾಸಗಟಾಗಿ ನಿರಾಕರಿಸುವಂತೆಯೂ ಇಲ್ಲ. ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಎರಡು ಶಕ್ತಿಗಳು ಎನ್ನುವುದನ್ನು ಕಾಂಗ್ರೆಸ್ ವರಿಷ್ಠರು ಎಂದೋ ಒಪ್ಪಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಗೆ ಮೊದಲೇ ‘ಇಬ್ಬರನ್ನು ಒಂದೇ ವೇದಿಕೆ’ಗೆ ತಂದಿರುವುದು ಕಾಂಗ್ರೆಸ್ ಹೈಕಮಾಂಡ್‌ನ ಬಹುದೊಡ್ಡ ಸಾಧನೆಯಾಗಿತ್ತು. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಬೃಹತ್ ಸಮಾವೇಶದಲ್ಲೇ ರಾಹುಲ್‌ಗಾಂಧಿಯವರು ಇದನ್ನು ಸ್ಪಷ್ಟಪಡಿಸಿದ್ದರು. ಯಾರೊಬ್ಬರನ್ನು ಬಿಟ್ಟುಕೊಡದೆ ಸಮನ್ವಯ ಕಾಪಾಡಿಕೊಂಡ ಪರಿಣಾಮವಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವನ್ನು ಸಾಧಿಸಲು ಕಾರಣವಾಯಿತು. ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸು ರಾಜ್ಯ ಕಾಂಗ್ರೆಸ್‌ನ ಆತ್ಮವಾದರೆ, ಡಿಕೆಶಿಯವರ ಹಿಂದಿರುವ ಹಣಬಲ, ಜಾತಿ ಬಲ, ಜನ ಬಲ ಕಾಂಗ್ರೆಸ್‌ನ ದೇಹ. ಒಂದನ್ನು ಬಿಟ್ಟು ಇನ್ನೊಂದಿಲ್ಲ ಎನ್ನುವ ಸ್ಥಿತಿಯಿದೆ. ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಕಗ್ಗಂಟಾಯಿತಾದರೂ ಅದನ್ನು ಇತ್ಯರ್ಥ ಮಾಡಿಕೊಳ್ಳಲು ದೀರ್ಘ ಸಮಯವನ್ನೇನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿರಲಿಲ್ಲ. ಬಿಜೆಪಿಯು ವಿರೋಧ ಪಕ್ಷ ನಾಯಕನ ಆಯ್ಕೆ ಗೆ ತೆಗೆದುಕೊಂಡ ಸಮಯವನ್ನು ನೋಡಿದರೆ ಈ ಬಿಕ್ಕಟ್ಟು ಏನೇನು ಅಲ್ಲ. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎಂಬ ಊಹಾಪೋಹಗಳನ್ನು ಮುಂದಿಟ್ಟುಕೊಂಡು ನವೆಂಬರ್ ಕ್ರಾಂತಿಗೆ ಮಾಧ್ಯಮಗಳು ವೇದಿಕೆ ಸೃಷ್ಟಿಸಿದ್ದವು. ಆದರೆ, ನಾಯಕತ್ವ ಬದಲಾವಣೆ ಕಾಂಗ್ರೆಸ್‌ನ ಒಳಗಿನ ಅಗತ್ಯವಾಗಿರಬಹುದೇ ಹೊರತು, ಸದ್ಯಕ್ಕೆ ರಾಜ್ಯದ ಅಗತ್ಯ ಖಂಡಿತ ಅಲ್ಲ. ಮುಖ್ಯಮಂತ್ರಿ ಬದಲಾವಣೆಗೆ ಪರ್ಯಾಯವಾಗಿ ಡಿ. ಕೆ. ಶಿವಕುಮಾರ್ ಇತರ ಬೇಡಿಕೆಗಳನ್ನು ವರಿಷ್ಠರ ಮುಂದಿಟ್ಟಿದ್ದಾರೆ ಎನ್ನುವ ಮಾತುಗಳಿವೆ. ಅದರಲ್ಲಿ ಭಾಗಶಃ ಈಡೇರಿಸುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಕಾಂಗ್ರೆಸ್‌ನೊಳಗಿರುವ ಬಿರುಕಿಗೆ ತೇಪೆ ಹಾಕಲು ಯಶಸ್ವಿಯಾಗಿದೆ.
ಹಲವು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕೇಂದ್ರ ಸರಕಾರವನ್ನು ಎದುರು ಹಾಕಿಕೊಂಡು ಕಾಂಗ್ರೆಸನ್ನು ಕಾಪಾಡಿದ್ದಾರೆ ಎನ್ನುವುದು ಡಿಕೆಶಿ ಹೆಗ್ಗಳಿಕೆಗಳಲ್ಲಿ ಒಂದು. ಕುದುರೆ ವ್ಯಾಪಾರ ಸಂದರ್ಭದಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಆಶ್ರಯ ನೀಡುವ ಮೂಲಕ, ಕೇಂದ್ರದ ತನಿಖಾ ಸಂಸ್ಥೆಗಳನ್ನು ತಾವಾಗಿಯೇ ತಮ್ಮ ನಿವಾಸಕ್ಕೆ ಆಹ್ವಾನಿಸಿಕೊಂಡರು. ಜೆಡಿಎಸ್ ಮೂಲಕ ಬಿಜೆಪಿ ಒಕ್ಕಲಿಗರನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಅಳಿದುಳಿದ ಒಕ್ಕಲಿಗರನ್ನು ತಮ್ಮವರನ್ನಾಗಿರಿಸಿಕೊಳ್ಳಲು ಡಿಕೆಶಿ ಭರವಸೆಯಾಗಿದ್ದಾರೆ. ಉಪ ಚುನಾವಣೆಯ ಗೆಲುವಿನಲ್ಲೂ ಡಿಕೆಶಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅಧಿಕಾರ ಹಂಚಿಕೆಯ ಬಗ್ಗೆ ಅವರು ಎಂದೂ ಮಾಧ್ಯಮಗಳಿಗೆ ಬಹಿರಂಗವಾಗಿ ಹೇಳಿಕೆಯನ್ನು ನೀಡಿಲ್ಲ. ಹೈಕಮಾಂಡ್ ಜೊತೆಗೆ ಈ ಕುರಿತಂತೆ ಅವರು ಹಲವು ಬಾರಿ ಚರ್ಚಿಸಿರಬಹುದಾದರೂ, ಮಾಧ್ಯಮಗಳಲ್ಲಿ ಹೈಕಮಾಂಡ್ ಬಗ್ಗೆಯಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವಾಗಲಿ ಒಂದು ಸಾಲು ಹೇಳಿಕೆಯನ್ನು ಈವರೆಗೆ ನೀಡಿಲ್ಲ. ಅಧಿಕಾರವಿಲ್ಲದೆಯೇ ಮಾಧ್ಯಮಗಳಲ್ಲಿ ಪರಸ್ಪರ ಕಚ್ಚಾಡುತ್ತಿರುವ ಬಿಜೆಪಿ ನಾಯಕರಿಗೆ ಡಿ.ಕೆ.ಶಿವಕುಮಾರ್ ಅವರ ಈ ನಡತೆ ಮಾದರಿಯಾಗಬೇಕಾಗಿದೆ. ಡಿಕೆಶಿ ಪತ್ರಕರ್ತರ ಮುಂದೆ ಯಾವತ್ತೂ ತನ್ನ ಅಸಮಾಧಾನವನ್ನು ತೋಡಿಕೊಳ್ಳದೇ ಇರುವುದು ಮಾಧ್ಯಮಗಳ ಕೈಗಳನ್ನೂ ಕಟ್ಟಿ ಹಾಕಿದಂತಾಗಿದೆ. ಇದೀಗ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಅವರು ಜೊತೆಯಾಗಿ ಉಪಾಹಾರ ಮಾಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇದೀಗ ಬಿಜೆಪಿಯ ಸರದಿ. ಯಡಿಯೂರಪ್ಪ, ಈಶ್ವರಪ್ಪ, ಯತ್ನಾಳ್, ಅಶೋಕ್, ಸಂತೋಷ್ ಒಂದೇ ಟೇಬಲ್ ಎದುರು ಕೂತು ಉಪಾಹಾರ ಮಾಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ‘ಜೊತೆಯಾಗಿ ಸಾಗುವ ಒಪ್ಪಂದಕ್ಕೆ ತಲೆಬಾಗಿದ್ದೇವೆ’ ಎಂದು ಹೇಳಿಕೆ ನೀಡುವ ಎದೆಗಾರಿಕೆಯಿದೆಯೆ? ಎಂದು ಜನರು ಕೇಳುವಂತಾಗಿದೆ.