×
Ad

ಮಣಿಪುರ: ಕೋಟೆ ಸೂರೆ ಹೋದ ಬಳಿಕ...

Update: 2025-02-12 08:15 IST

pc: x.com/NBirenSingh

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಹೊಸ ವರ್ಷದ ಆರಂಭಕ್ಕೆ ಅವರು ಮಣಿಪುರ ಹಿಂಸಾಚಾರವನ್ನು ತಡೆಯಲು ವಿಫಲವಾಗಿರುವುದನ್ನು ಒಪ್ಪಿಕೊಂಡಿದ್ದರು ಮಾತ್ರವಲ್ಲ, ಅದಕ್ಕಾಗಿ ಕ್ಷಮೆಯನ್ನೂ ಯಾಚಿಸಿದ್ದರು. ಆದರೆ ಹಿಂಸಾಚಾರದ ನೆತ್ತರಿನಿಂದ ಸಂಪೂರ್ಣ ಮುಳುಗಿ ಹೋಗಿರುವ ಬಿಜೆಪಿಯನ್ನು ಬರೇ ಕ್ಷಮೆಯಾಚನೆಯ ಕರವಸ್ತ್ರದಿಂದ ಶುಚಿಗೊಳಿಸಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಕೊನೆಗೂ ಮನವರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಯಾತ್ರೆಯಲ್ಲಿರುವ ಸಂದರ್ಭದಲ್ಲಿ, ಬಿರೇನ್ ಸಿಂಗ್ ಅವರು ರಾಜೀನಾಮೆಯನ್ನು ಮಣಿಪುರದ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಸಲ್ಲಿಸಿದ್ದಾರೆ. ಮಣಿಪುರ ವಿಧಾನಸಭಾ ಅಧಿವೇಶನ ಸೋಮವಾರದಿಂದ ಆರಂಭವಾಗಬೇಕಾಗಿತ್ತು. ಈ ಹೊತ್ತಿನಲ್ಲೇ ಸಿಂಗ್ ಅವರು ರಾಜೀನಾಮೆ ಸಲ್ಲಿಸಿರುವುದು ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದೆ. ಅಧಿವೇಶನ ಸುಗಮವಾಗಿ ನಡೆಸುವ ಭಾಗವಾಗಿ ರಾಜ್ಯಪಾಲರು ತಕ್ಷಣ ನೂತನ ಮುಖ್ಯಮಂತ್ರಿ ಆಯ್ಕೆಗೆ ವೇದಿಕೆಯನ್ನು ಸೃಷ್ಟಿಸಬೇಕಾಗಿತ್ತು ಅಥವಾ ಮಣಿಪುರದ ಸದ್ಯದ ಪರಿಸ್ಥಿತಿಯನ್ನು ಮನಗಂಡು ರಾಷ್ಟ್ರಪತಿ ಆಡಳಿತ ಜಾರಿಗೆ ಶಿಫಾರಸು ಮಾಡಬೇಕಾಗಿತ್ತು. ಆದರೆ ರಾಜ್ಯಪಾಲರು ಪ್ರಧಾನಿ ಮೋದಿಯವರ ಆಗಮನದ ಬಳಿಕವೇ ಮಣಿಪುರದ ಭವಿಷ್ಯವನ್ನು ತೀರ್ಮಾನಿಸಲು ನಿರ್ಧರಿಸಿದಂತಿದೆ.

ಮುಖ್ಯವಾಗಿ ಬಿರೇನ್ ಸಿಂಗ್ ಮೇಲಿರುವುದು ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಲು ವಿಫಲವಾಗಿರುವ ಆರೋಪವಲ್ಲ. ಮಣಿಪುರವನ್ನು ಹಿಂಸಾಚಾರಕ್ಕೆ ತಳ್ಳಿದ್ದೇ ಬಿಜೆಪಿ ಸರಕಾರ ಎನ್ನುವುದು ಅವರ ಮೇಲಿರುವ ಗಂಭೀರ ಆರೋಪವಾಗಿದೆ. ಪ್ರಬಲ ಮೈತೈ ಸಮುದಾಯವನ್ನು ಕುಕಿ ಬುಡಕಟ್ಟು ಸಮುದಾಯದ ಮೇಲೆ ಎತ್ತಿ ಕಟ್ಟಿರುವುದೇ ಬಿಜೆಪಿ ಮತ್ತು ಸಂಘಪರಿವಾರ. ಮಹಿಳೆಯರ ಸಾಮೂಹಿಕ ಅತ್ಯಾಚಾರ, ಬೆತ್ತಲೆ ಮೆರವಣಿಗೆ, ನೂರಾರು ಮನೆಗಳು, ಚರ್ಚುಗಳ ಧ್ವಂಸವಾದ ಬಳಿಕವೂ ಈ ಬಗ್ಗೆ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಎಳ್ಳಷ್ಟು ಪಶ್ಚಾತ್ತಾಪವಿರಲಿಲ್ಲ. ಮಣಿಪುರದಲ್ಲಿ ನಡೆಯುತ್ತಿರುವ ಅಮಾನವೀಯ ಕೃತ್ಯಗಳ ಬಗ್ಗೆ ವಿಶ್ವವೇ ಮಾತನಾಡುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಕಾಟಾಚಾರಕ್ಕೂ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಬದಲಿಗೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಪರೋಕ್ಷವಾಗಿ ಬಿಜೆಪಿ ಸಮರ್ಥಿಸತೊಡಗಿತು. ಸಂತ್ರಸ್ತರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಮುಂದಾಯಿತು. ಮೈತೈ ಸಮುದಾಯಕ್ಕೆ ಸೇರಿದ ಬಿರೇನ್ ಸಿಂಗ್, ರಾಜಧರ್ಮವನ್ನು ಪಾಲಿಸಲು ಸಂಪೂರ್ಣ ವಿಫಲರಾಗಿದ್ದರು. ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿಯವರು ಅನುಸರಿಸಿದ ಮಾರ್ಗವನ್ನೇ ಅವರು ಮಣಿಪುರದಲ್ಲಿ ಅನುಸರಿಸಿದರು. ಮುಖ್ಯಮಂತ್ರಿಯನ್ನು ಬದಲಿಸಲು ಸ್ವತಃ ಬಿಜೆಪಿಯೊಳಗಿರುವ ನಾಯಕರೇ ಒತ್ತಾಯಿಸಿದರೂ, ಪ್ರಧಾನಿ ಮೋದಿಯವರು ಅಲುಗಾಡಲಿಲ್ಲ.

ಇದೀಗ ಬಿರೇನ್ ಸಿಂಗ್ ರಾಜೀನಾಮೆಯಿಂದ ಮಣಿಪುರದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಮಣಿಪುರದಲ್ಲಿ ನಡೆದ ಹಿಂಸಾಚಾರದ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿರುವುದೇ ಅಲ್ಲ. ತನ್ನ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕೆ ದಾರಿಯೇ ಇಲ್ಲ ಎನ್ನುವುದು ಮನವರಿಕೆಯಾದ ಬಳಿಕವಷ್ಟೇ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯನ್ನು ಮಣಿಪುರದಲ್ಲಿ ಉಳಿಸಬೇಕಾದರೆ ಅವರ ರಾಜೀನಾಮೆ ಅನಿವಾರ್ಯ ಎನ್ನುವುದು ವರಿಷ್ಠರಿಗೂ ಮನವರಿಕೆಯಾಗಿದೆ. ಮಣಿಪುರದ ಹಿಂಸಾಚಾರವನ್ನು ಕೇವಲ ಒಬ್ಬ ವ್ಯಕ್ತಿಯ ತಲೆಗೆ ಕಟ್ಟಿ ತನ್ನ ಮಾನವನ್ನು ಉಳಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಈಗಾಗಲೇ ಮುಖ್ಯಮಂತ್ರಿಯ ವಿರುದ್ಧ ಬಿಜೆಪಿಯೊಳಗಿನ ಬಹುತೇಕ ನಾಯಕರು ತಿರುಗಿ ಬಿದ್ದಿದ್ದಾರೆ. ಇತ್ತೀಚೆಗಷ್ಟೇ ಎನ್‌ಡಿಎ ಮಿತ್ರ ಪಕ್ಷದ ಏಳು ಶಾಸಕರು ತಮ್ಮ ಬೆಂಬಲವನ್ನು ಹಿಂದೆಗೆದುಕೊಂಡಿದ್ದರು. ಇಬ್ಬರು ಸಚಿವರು ಸಹಿತ ಕುಕಿ ಸಮುದಾಯದ ಸುಮಾರು 10 ಶಾಸಕರು ಮಣಿಪುರ ಹಿಂಸಾಚಾರಕ್ಕೆ ಬಿರೇನ್ ಸಿಂಗ್ ಅವರನ್ನೇ ನೇರವಾಗಿ ಹೊಣೆ ಮಾಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿಂದಲೇ ಬಿಜೆಪಿಯೊಳಗೆ ಮುಖ್ಯಮಂತ್ರಿ ವಿರುದ್ಧ ಬಂಡಾಯ ಆರಂಭವಾಗಿತ್ತು. ಬಿಜೆಪಿಯ ನಿಯೋಗವೊಂದು ಮುಖ್ಯಮಂತ್ರಿ ವಿರುದ್ಧ ಪ್ರಧಾನಿಗೆ ಮನವಿಯನ್ನು ನೀಡಿತ್ತು. ಸ್ಪೀಕರ್ ಸತ್ಯಬ್ರತ ಸಿಂಗ್ ಕಳೆದ ವಾರ ಬಿಜೆಪಿ ವರಿಷ್ಠ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದರು ಮಾತ್ರವಲ್ಲ, ಮುಖ್ಯಮಂತ್ರಿ ವಿರುದ್ಧ ಅವಿಶ್ವಾಸ ಮಂಡನೆಯಾಗುವ ಸಾಧ್ಯತೆಯನ್ನು ಸ್ಪಷ್ಟಪಡಿಸಿದ್ದರು. ಬಿಜೆಪಿಗೆ ಹಿನ್ನಡೆಯಾಗಬಹುದು ಎನ್ನುವುದು ಮನವರಿಕೆಯಾದ ಬಳಿಕವಷ್ಟೇ ಬಿರೇನ್ ಸಿಂಗ್ ಅವರಿಂದ ರಾಜೀನಾಮೆಯನ್ನು ಪಡೆಯುವ ನಿರ್ಧಾರವನ್ನು ವರಿಷ್ಠರು ಮಾಡಿದರು. ಒಂದು ರೀತಿಯಲ್ಲಿ, ಸಂಘಪರಿವಾರ ಬಿರೇನ್ ಸಿಂಗ್ ಮೂಲಕ ಮಣಿಪುರದ ವಿರುದ್ಧ ಏನೇನು ಮಾಡಬೇಕೋ ಅದನ್ನೆಲ್ಲ ಮಾಡಿ ಮುಗಿಸಿದೆ. ನಿಜಕ್ಕೂ ಈ ರಾಜೀನಾಮೆ ಪ್ರಜಾಸತ್ತೆಯ ಬಹುದೊಡ್ಡ ಅಣಕವಾಗಿದೆ.

ಬಿರೇನ್ ಸಿಂಗ್ ರಾಜೀನಾಮೆಯಿಂದಾಗಿ ಮಣಿಪುರದ ಬಜೆಟ್ ಅಧಿವೇಶನ ನನೆಗುದಿಗೆ ಬಿದ್ದಿದೆ. ತಕ್ಷಣ ನಾಯಕನ ಆಯ್ಕೆಗೆ ರಾಜ್ಯಪಾಲರು ಕ್ರಮ ತೆಗೆದುಕೊಂಡು, ಅಧಿವೇಶನ ಮುಂದುವರಿಯುವಂತೆ ನೋಡಿಕೊಳ್ಳಬೇಕಾಗಿತ್ತು. ಮಣಿಪುರದ ಇಂದಿನ ಸ್ಥಿತಿಯನ್ನು ಗಮನಿಸಿದರೆ, ಹೊಸ ನಾಯಕನ ಆಯ್ಕೆಗಿಂತ ರಾಷ್ಟ್ರಪತಿ ಆಡಳಿತವೇ ಸೂಕ್ತವೆನಿಸುತ್ತದೆ. ಬಿರೇನ್ ಸಿಂಗ್ ಆಡಳಿತದಲ್ಲಿ ಮಣಿಪುರ ಮೈತುಂಬಾ ಗಾಯಗಳೊಂದಿಗೆ ಛಿದ್ರಗೊಂಡು ಬಿದ್ದಿದೆ. ಸರಕಾರವೂ ಭಿನ್ನಮತಗಳ ಕಾರಣದಿಂದ ಸಂಪೂರ್ಣ ದುರ್ಬಲವಾಗಿದೆ. ಇಂತಹ ಹೊತ್ತಿನಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡುವುದೇ ಅತ್ಯುತ್ತಮ ನಿರ್ಧಾರವಾಗಿದೆ. ಆದರೆ ರಾಜ್ಯಪಾಲರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಪ್ರಧಾನಿ ಮೋದಿಯ ಆಗಮನಕ್ಕೆ ಕಾದು ಕೂತಿರುವುದು ವಿಪರ್ಯಾಸವಾಗಿದೆ. ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚಿನ ಅಂತರ ಇರಬಾರದು ಎಂದು ಸಂವಿಧಾನ ಹೇಳುತ್ತದೆಯಾದರೂ, ರಾಜ್ಯಪಾಲರು ಅದನ್ನು ನಿರ್ಲಕ್ಷಿಸಿ, ತಾವೇ ಕರೆದಿದ್ದ ಅಧಿವೇಶವನ್ನು ಹಿಂದೆಗೆದುಕೊಂಡಿದ್ದಾರೆ. ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡದ ಕಾರಣದಿಂದಾಗಿ ಶೂನ್ಯ ಅಧಿವೇಶನವೆಂದು ಅನಿವಾರ್ಯವಾಗಿ ಘೋಷಿಸಬೇಕಾಯಿತು. ರಾಜ್ಯಪಾಲರಿಂದಾಗಿಯೇ ಮಣಿಪುರದದಲ್ಲಿ ಅರಾಜಕತೆ ನಿರ್ಮಾಣವಾಗಿದೆ.

ಈಗಲಾದರೂ ಮಣಿಪುರದ ರಾಜಕೀಯದಲ್ಲಿ ರಾಷ್ಟ್ರಪತಿ ಮಧ್ಯ ಪ್ರವೇಶಿಸುವುದು ಅತ್ಯಗತ್ಯವಾಗಿದೆ. ರಾಜ್ಯದಲ್ಲಿ ಅಧಿಕೃತವಾಗಿ ಸರಕಾರವೇ ಇಲ್ಲ ಎನ್ನುವುದು ಹಿಂಸಾಚಾರ ನಡೆಸುವ ದುಷ್ಕರ್ಮಿಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತಾಗಬಹುದು. ಮಹಿಳೆಯರ ಮೇಲೆ, ಬುಡಕಟ್ಟು ಜನರ ಮೇಲೆ ಮತ್ತೆ ಆಕ್ರಮಣಕ್ಕೆ ಕಾರಣವಾಗಬಹುದು. ಆದಿವಾಸಿ ಸಮುದಾಯಕ್ಕೆ ಸೇರಿದ ರಾಷ್ಟ್ರಪತಿಯವರಿಗೆ ಈಗಲಾದರೂ ಮಣಿಪುರದ ಬುಡಕಟ್ಟು ಮಹಿಳೆಯರ ಕಣ್ಣೀರು ತಟ್ಟಬೇಕಿದೆ. ತಕ್ಷಣ ರಾಷ್ಟ್ರಪತಿ ಆಡಳಿತವನ್ನು ಹೇರಿ, ಸೇನೆಯನ್ನು ಆಯಕಟ್ಟು ಸ್ಥಾನದಲ್ಲಿ ನಿಲ್ಲಿಸಿ ಹಿಂಸಾಚಾರಗಳಿಗೆ ಕಡಿವಾಣ ಹಾಕಿ ಅಳಿದುಳಿದ ಮಣಿಪುರಕ್ಕೆ ರಕ್ಷಣೆ ನೀಡುವುದು ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News