×
Ad

ಜೀವ ನದಿಗಳ ಜೀವಕ್ಕೆ ಕುತ್ತು

Update: 2025-10-22 07:44 IST

ಕಾವೇರಿ ನದಿ PC: X.com/mint

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸುವ ನೀರಿನ ಪರೀಕ್ಷೆಯಲ್ಲಿ ರಾಜ್ಯದ ಬಹುತೇಕ ನದಿಗಳು ಅನುತ್ತೀರ್ಣಗೊಂಡಿವೆ. ರಾಜ್ಯದ ಸುಮಾರು 12 ನದಿಗಳ ಪೈಕಿ ಯಾವ ನದಿಯಗಳ ನೀರೂ ನೇರವಾಗಿ ಕುಡಿಯುವುದಕ್ಕೆ ಯೋಗ್ಯವಲ್ಲ ಎಂದು ಮಂಡಳಿಯ ವರದಿ ಹೇಳುತ್ತಿದೆ. ನೇರವಾಗಿ ಕುಡಿಯುವುದಕ್ಕೆ ಯೋಗ್ಯವಾಗಿರುವ ನದಿಯ ನೀರನ್ನು ಎ ದರ್ಜೆಗೆ ಸೇರಿಸಲಾಗುತ್ತದೆ. ರಾಜ್ಯದ ಯಾವೊಂದು ನದಿಯೂ ಎ ದರ್ಜೆಯೊಳಗಿಲ್ಲ. ಇದೇ ಸಂದರ್ಭದಲ್ಲಿ ಬಿ ದರ್ಜೆಯಲ್ಲಿ ನೇತ್ರಾವತಿ ನದಿ ಮಾತ್ರ ಗುರುತಿಸಲ್ಪಡುತ್ತಿದೆ. ನೇತ್ರಾವತಿ ನದಿ ನೀರನ್ನು ಸ್ನಾನ, ಗೃಹ ಬಳಕೆಗೆ ನೇರವಾಗಿ ಬಳಸಬಹುದಾದರೂ ಕುಡಿಯುವುದಕ್ಕೆ ಶುದ್ದೀಕರಿಸಿಯೇ ಬಳಸಬೇಕಾಗುತ್ತದೆ. ಕರ್ನಾಟಕದ ರೈತರ ಪಾಲಿನ ಜೀವ ನದಿ ಎಂದು ಕರೆಯಲ್ಪಡುವ ಕಾವೇರಿ ನದಿಯು ಸಿ ದರ್ಜೆಗೆ ಸೇರಿಸಲ್ಪಟ್ಟಿದೆ. ತುಂಗಾ, ಭದ್ರಾ, ಲಕ್ಷ್ಮಣತೀರ್ಥ, ಕೃಷ್ಣಾ, ಶಿಂಷಾ ನದಿಗಳನ್ನು ಸಿ ದರ್ಜೆಗೆ ಸೇರಿಸಲಾಗಿದೆ. ಇದೇ ಸಂದರ್ಭದಲ್ಲಿ ಭೀಮಾ, ಅರ್ಕಾವತಿ ನದಿಗಳನ್ನು ಡಿ ದರ್ಜೆಗೆ ಸೇರಿಸಲಾಗಿದೆ. ಸಿ ದರ್ಜೆಯ ನದಿಗಳ ನೀರನ್ನು ಸಂಸ್ಕರಿಸಿ ಬಳಸುವುದು ಕಡ್ಡಾಯವಾಗಿದೆ. ಇದೇ ಸಂದರ್ಭದಲ್ಲಿ ಡಿ ದರ್ಜೆಯ ನದಿಗಳ ನೀರನ್ನು ಸಂಸ್ಕರಿಸಿ ಬಳಸುವುದೂ ಸಾಧ್ಯವಿಲ್ಲ. ಬಹುತೇಕ ನದಿಗಳು ಆಮ್ಲಜನಕ ಕೊರತೆ, ಬಯೋ ಕೆಮಿಕಲ್ ಆಕ್ಸಿಜನ್, ಮಲಗಳಲ್ಲಿರುವ ಬ್ಯಾಕ್ಟಿರಿಯಾ, ಫೆಕಲ್ ಕೋಲಿಫಾರ್ಮ್ ಗಳನ್ನು ಹೊಂದಿವೆ ಎಂದು ಸೆಪ್ಟೆಂಬ‌ರ್ ತಿಂಗಳಲ್ಲಿ ಹೊರ ಬಿದ್ದ ವರದಿ ಹೇಳುತ್ತಿದೆ. ಅಂತರ್ಜಲದ ಕೊರತೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ನಮ್ಮ ನದಿಗಳಲ್ಲಿರುವ ನೀರನ್ನೇ ನಾವು ಹೇಗೆ ಕುಡಿಯುವುದಕ್ಕೆ ಅನರ್ಹವಾಗಿಸುತ್ತಿದ್ದೇವೆ ಎನ್ನುವ ಕಳವಳಕಾರಿ ಸಂಗತಿಯನ್ನು ಈ ವರದಿ ಬಹಿರಂಗ ಪಡಿಸಿದೆ. ಒಂದು ರೀತಿಯಲ್ಲಿ ಪರೀಕ್ಷೆಯಲ್ಲಿ ಸೋತಿರುವುದು ನದಿಗಳಲ್ಲ, ಮನುಷ್ಯರು ಎನ್ನುವುದು ಕಟು ಸತ್ಯವಾಗಿದೆ.

ಇದು ಬರೇ ರಾಜ್ಯದ ಸಮಸ್ಯೆಯಾಗಿ ಉಳಿದಿಲ್ಲ. ಕಳೆದ ಕುಂಭಮೇಳದ ಸಂದರ್ಭದಲ್ಲಿ ಗಂಗಾನದಿಯ ನೀರು ಕುಡಿಯುವುದಕ್ಕೆ ಮಾತ್ರವಲ್ಲ, ಸ್ನಾನ ಮಾಡುವುದಕ್ಕೂ ಅನರ್ಹವಾಗಿದೆ ಎನ್ನುವ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಉತ್ತರ ಪ್ರದೇಶ ಸರಕಾರ ಅದನ್ನು ಮುಚ್ಚಿಡಲು ಹರ ಸಾಹಸ ಮಾಡಿತಾದರೂ, ಗಂಗಾನದಿ ಮಾತ್ರವಲ್ಲ ಉತ್ತರ ಭಾರತದ ಬಹುತೇಕ ನದಿಗಳ ಸ್ಥಿತಿ ಚಿಂತಾಜನಕವಾಗಿದೆ ಎನ್ನುವುದು ಜಗತ್ತಿಗೇ ಗೊತ್ತಿರುವ ಸತ್ಯವಾಗಿದೆ. ಭಾರತದ ಶೇ. 70ರಷ್ಟು ನದಿ ನೀರು ಕುಡಿಯುವುದಕ್ಕೆ ಅನರ್ಹವಾಗಿದೆ ಎಂದು ವರದಿ ಹೇಳುತ್ತದೆ. ಹಸಿವಿನ ಸೂಚ್ಯಂಕದಲ್ಲಿ ಭಾರತದ ಕಳಪೆ ಸಾಧನೆ ಸಾಕಷ್ಟು ಸುದ್ದಿಯಾಯಿತು. ಭಾರತ ಸರಕಾರವು ಈ ಸೂಚ್ಯಂಕದ ವರದಿಯನ್ನೇ ಅಲ್ಲಗಳೆದು ಮುಖಉಳಿಸಿಕೊಳ್ಳುವ ಪ್ರಯತ್ನ ನಡೆಸಿತು. ಇದೇ ಸಂದರ್ಭದಲ್ಲಿ ಜಲ ಗುಣಮಟ್ಟದಲ್ಲಿ ಭಾರತದ ಕಳಪೆ ಸಾಧನೆಯ ಬಗ್ಗೆ ಸರಕಾರ ಈವರೆಗೆ ತುಟಿ ಬಿಚ್ಚಿಲ್ಲ. ಜಲ ಗುಣ ಮಟ್ಟ ಸೂಚ್ಯಂಕದಲ್ಲಿ ಭಾರತವು 122 ದೇಶಗಳಲ್ಲಿ 120ನೇ ಸ್ಥಾನವನ್ನು ಹೊಂದಿದೆ ಎನ್ನುವುದು ಭಾರತದ ಪಾಲಿಗೆ ಬಹುದೊಡ್ಡ ಕಳಂಕವೇ ಸರಿ.

ವರದಿಗಳ ಪ್ರಕಾರ ಈ ದೇಶದ 605 ನದಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ನದಿಗಳು ಕಲುಷಿತಗೊಂಡಿವೆ. ದಿಲ್ಲಿ, ಬೆಂಗಳೂರು ಸೇರಿದಂತೆ 21 ನಗರಗಳಲ್ಲಿ 2030ರ ವೇಳೆಗೆ ಅಂತರ್ಜಲ ಸಂಪೂರ್ಣ ಬತ್ತುವ ಸಾಧ್ಯತೆಗಳಿವೆ. ಇಂದು ಭಾರತದ ನದಿಗಳು ತ್ಯಾಜ್ಯಗಳನ್ನು ಬಿಡುವ ಚರಂಡಿಗಳಾಗಿ ಪರಿವರ್ತನೆಗೊಂಡಿವೆ. ಇಲ್ಲಿ ಪ್ರತಿ ದಿನ 40 ದಶಲಕ್ಷ ಲೀಟರ್ ತ್ಯಾಜ್ಯ ನೀರು ಜಲಮೂಲಗಳನ್ನು ಸೇರುತ್ತಿವೆ. ಇದರಲ್ಲಿ ಶೇ. 90ರಷ್ಟು ಒಳಚರಂಡಿಯ ನೀರನ್ನು ಸಂಸ್ಕರಣೆ ಮಾಡದೇ ಬಿಡುಗಡೆ ಮಾಡಲಾಗುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಪ್ರತಿ ದಿನ 2 ದಶಲಕ್ಷ ಟನ್ ಒಳಚರಂಡಿ ಮತ್ತು ಕಾರ್ಖಾನೆಗಳ ತ್ಯಾಜ್ಯವನ್ನು ಬಿಡುಗಡೆ ಮಾಡಲಾಗುತ್ತದೆ. ಪ್ರತಿವರ್ಷ ಕೈಗಾರಿಕೆಗಳು 300ರಿಂದ 400 ದಶಲಕ್ಷ ಟನ್‌ ತ್ಯಾಜ್ಯವನ್ನು ನೀರಿನ ಮೂಲಗಳಿಗೆ ಸುರಿಯುತ್ತಿವೆ. 2024ರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ನೀರಿನ ಕಲುಷಿತ ಅಂಶಗಳಿಂದ ಆರೋಗ್ಯವನ್ನು ಕೆಡಿಸಿಕೊಂಡಿದ್ದಾರೆ. 2023ರ ಡಿಸೆಂಬರ್ ಮಾಸಾಂತ್ಯದವರೆಗೆ 25 ರಾಜ್ಯಗಳ 230 ಜಿಲ್ಲೆಗಳು ಆರ್ಸೆನಿಕ್ ಮಾಲಿನ್ಯಕ್ಕೆ ಮತ್ತು 27 ರಾಜ್ಯಗಳ 469 ಜಿಲ್ಲೆಗಳು ಫ್ಲೋರೈಟ್ ಮಾಲಿನ್ಯಕ್ಕೆ ತುತ್ತಾಗಿವೆ. ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್‌ಮೆಂಟ್ ವರದಿಯ ಪ್ರಕಾರ, ಈ ದೇಶದಲ್ಲಿ ಪ್ರತಿ ವರ್ಷ ಸುಮಾರು 3.70 ಕೋಟಿ ಜನರು ನೀರಿನಿಂದ ಹರಡುವ ಕಾಯಿಲೆಗಳಿಂದ ನರಳುತ್ತಿದ್ದಾರೆ. ಕೇವಲಭೇದಿ ಕಾಯಿಲೆಯಿಂದಲೇ 15 ಲಕ್ಷಕ್ಕೂ ಅಧಿಕ ಮ ಕ್ಕಳು ಸಾಯುತ್ತಿದ್ದಾರೆ. ನೀರಿನ ಮಾಲಿನ್ಯದ ಕಾರಣದಿಂದಲೇ ಹರ್ಯಾಣದಲ್ಲಿ 'ಕ್ಯಾನ್ಸರ್ ಗ್ರಾಮ'ವೊಂದು ಸೃಷ್ಟಿಯಾಗಿದೆ. ಇಲ್ಲಿ, ಪ್ರತಿ ಕುಟುಂಬ ಕನಿಷ್ಠ ಒಬ್ಬ ಸದಸ್ಯನನ್ನು ಕ್ಯಾನ್ಸ‌ರ್ ರೋಗದಿಂದ ಕಳೆದುಕೊಂಡಿದೆ.

ಗಂಗಾ ನದಿಯನ್ನು ಶುಚಿಗೊಳಿಸಲು ಭಾರತ ಸರಕಾರ ಈವರೆಗೆ 1.63 ಬಿಲಿಯನ್ ಡಾಲರ್ ವೆಚ್ಚ ಮಾಡಿದ್ದರೆ, ಯಮುನಾ ನದಿಯನ್ನು ಶುಚಿಗೊಳಿಸಲು 1993ರಿಂದ ಈವರೆಗೆ ಒಂದು ಬಿಲಿಯನ್ ಡಾಲರ್ ಗಳನ್ನು ವೆಚ್ಚಮಾಡಲಾಗಿದೆ. ಇಷ್ಟು ಹಣವನ್ನು ಸುರಿದ ಬಳಿಕವೂ ಗಂಗಾ ಮತ್ತು ಯಮುನಾ ನದಿಯ ನೀರು ಕುಡಿಯುವುದಕ್ಕೆ ಯೋಗ್ಯವಾಗಿ ಉಳಿದಿಲ್ಲ. ಉದ್ಯಮ ಮತ್ತು ಭಕ್ತಿ ಎರಡರ ಮಧ್ಯೆ ಭಾರತದಲ್ಲಿ ನದಿಗಳನ್ನು ಮಲಿನಗೊಳಿಸುವುದರಲ್ಲಿ ಸ್ಪರ್ಧೆ ನಡೆಯುತ್ತಿದೆ. ಭಾರತವು ನೀರನ್ನು 'ಗಂಗೆ' ಎಂದು ಕರೆಯುತ್ತದೆ. ನದಿಗಳನ್ನು ದೇವತೆಗಳೆಂದು ಪೂಜಿಸುವ ದೇಶ ನಮ್ಮದು. ವಿಪರ್ಯಾಸವೆಂದರೆ, ಭಕ್ತಿಯ ಹೆಸರಿನಲ್ಲೇ ನಮ್ಮ ದೇಶದ ನದಿಗಳು ಅತಿ ಹೆಚ್ಚು ಕಲುಷಿತಗೊಳ್ಳುತ್ತಿವೆ. ಕಾರ್ಖಾನೆಗಳ ತ್ಯಾಜ್ಯಗಳು ಮಾತ್ರವಲ್ಲ, ನದಿಯಲ್ಲಿ ಮಿಂದು ಪವಿತ್ರರಾಗಲೆಂದು ಬರುವ ಭಕ್ತರ ತ್ಯಾಜ್ಯಗಳೂ ನದಿಗಳನ್ನು ಕಲುಷಿತಗೊಳಿಸುವಲ್ಲಿ ದೊಡ್ಡ ಪಾತ್ರವಹಿಸಿವೆ. ಗಂಗಾ ನದಿಯಲ್ಲಿ ಅರೆಬೆಂದ ಶವಗಳನ್ನು ಎಸೆದು, ಮೃತದೇಹಕ್ಕೆ ಮೋಕ್ಷನೀಡುವ ಮೂರ್ಖರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇಂದಿಗೂ ಪಿಂಡ ಬಿಡುವ ಹೆಸರಿನಲ್ಲಿ, ಬಾಗಿನ ಕೊಡುವ ಹೆಸರಿನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡುವ ಹೆಸರಿನಲ್ಲಿ ನದಿಗಳನ್ನು ನಾವು ಕೈಯಾರೆ ನಾಶ ಮಾಡುತ್ತಿದ್ದೇವೆ. ದ್ದೇವೆ. ನದಿಗಳನ್ನು ಪೂಜಿಸಿದ್ದು ಸಾಕು, ಇನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ನಾವು ನದಿಗಳನ್ನು ನದಿಗಳೆಂದೇ ಕಂಡು ಅದನ್ನು ಉಳಿಸುವ ಮೂಲಕ ನಾವೂ ಉಳಿಯುವ ದಾರಿಯೊಂದನ್ನು ಕಂಡುಕೊಳ್ಳಬೇಕಾಗಿದೆ. ಇಲ್ಲವಾದರೆ ಭವಿಷ್ಯದಲ್ಲೇ ಭಾರೀ ನೀರಿನ ಬಿಕ್ಕದ್ದೊಂದನ್ನು ನಾವೇ ಕೈಯಾರೆ ಆಹ್ವಾನಿಸಿಕೊಳ್ಳಲಿದ್ದೇವೆ. ನೀರಿಗಾಗಿಯೇ ದೇಶದಲ್ಲಿ ಅಂತರ್ಯುದ್ಧವೊಂದು ಸ್ಫೋಟಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News