ಮತ್ತೆ ಸುದ್ದಿಯಲ್ಲಿರುವ ಕ್ಷಯ
ಸಾಂದರ್ಭಿಕ ಚಿತ್ರ | Photo Credit : freepik
ಇತ್ತೀಚೆಗೆ ಭಾರತ ನಕಲಿ ಔಷಧಿಗಳ ಕಾರಣಕ್ಕೆ ಸುದ್ದಿಯಾಗಿತ್ತು. ಈ ಔಷಧಿಗಳನ್ನು ಸೇವಿಸಿ ಮಕ್ಕಳು ಮೃತಪಟ್ಟಿದ್ದಲ್ಲದೆ, ನೂರಾರು ಮಕ್ಕಳು ಆಸ್ಪತ್ರೆಗೆ ದಾಖಲಾದರು. ಒಂದೆಡೆ ರೋಗಿಗಳು ಔಷಧಿಯ ಕೊರತೆಗಳಿಂದ ಸಾವನ್ನಪ್ಪುತ್ತಿದ್ದರೆ ಮತ್ತೊಂದೆಡೆ ನಕಲಿ ಔಷಧಿಗಳಿಂದ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಹೀಗೆ ನಕಲಿ ಔಷಧಿಗಳಿಗೆ ಬಲಿಯಾಗುವವರು ಬಡವರ್ಗಕ್ಕೆ ಸೇರಿದ ಜನರೇ ಆಗಿರುವುದು ಆಕಸ್ಮಿಕವಲ್ಲ. ನಕಲಿ ಔಷಧಿ ಕಂಪೆನಿಗಳು ಇಂತಹ ವರ್ಗವನ್ನು ಗುರಿಯಾಗಿಸಿಕೊಂಡೇ ಔಷಧಿಗಳನ್ನು ತಯಾರಿಸುತ್ತವೆ. ಇದೀಗ ದೇಶದಲ್ಲಿ ಹೆಚ್ಚಿರುವ ಕ್ಷಯ ರೋಗ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ವರದಿಯೊಂದನ್ನು ಬಿಡುಗಡೆ ಮಾಡಿದೆ. 2024ರಲ್ಲಿ ಭಾರತದಲ್ಲಿ ಅತ್ಯಧಿಕ ಕ್ಷಯ ರೋಗ ಪ್ರಕರಣಗಳು ವರದಿಯಾಗಿವೆೆ. ಇಂಡೋನೇಶ್ಯ, ಫಿಲಿಪ್ಪೀನ್ಸ್, ಚೀನಾ, ಪಾಕಿಸ್ತಾನಕ್ಕಿಂತ ಹೆಚ್ಚಿನ ಪ್ರಮಾಣದ ಕ್ಷಯ ರೋಗ ಪ್ರಕರಣಗಳು ಭಾರತದಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯ ರೋಗ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಕ್ಕೆ ಹೋಲಿಸಿದರೆ, ಶೇ. 25ರಷ್ಟು ಕ್ಷಯ ಪ್ರಕರಣಗಳು ಭಾರತದಲ್ಲೇ ಇವೆ. ಈ ಜಗತ್ತು 2030ರಲ್ಲಿ ಕ್ಷಯರೋಗ ಮುಕ್ತವಾಗಬೇಕು ಎಂದು ಗುರಿ ಹಾಕಿಕೊಂಡಿದೆ. ಭಾರತವು ಎರಡು ವರ್ಷಗಳ ಹಿಂದೆ 2025ರಲ್ಲಿ ಕ್ಷಯ ಮುಕ್ತವಾಗುವ ಬಗ್ಗೆ ಹೇಳಿಕೊಂಡಿತ್ತು. ಆದರೆ ಭಾರತದ ಕನಸು ಈಡೇರಿಲ್ಲ. ಕ್ಷಯ ರೋಗ ಇಳಿಕೆಯಲ್ಲಿ ಭಾರತ ಸಾಧನೆ ಮಾಡಿದೆ ಎಂದು ಹೇಳಿಕೊಳ್ಳುತ್ತದೆಯಾದರೂ, ಇಂದಿಗೂ ಭಾರತ ವಿಶ್ವದಲ್ಲಿ ಕ್ಷಯ ರೋಗಕ್ಕಾಗಿ ಅಗ್ರಸ್ಥಾನದಲ್ಲಿರುವುದು ಹೆಮ್ಮೆ ಪಡುವ ವಿಷಯ ಖಂಡಿತಾ ಅಲ್ಲ.
ಭಾರತ ಕ್ಷಯ ರೋಗಕ್ಕಾಗಿ ಗುರುತಿಸಲ್ಪಟ್ಟಿರುವುದು ಇಂದು ನಿನ್ನೆಯಲ್ಲ. 2022ನೇ ವರ್ಷದ ಅಂತ್ಯಕ್ಕೆ ಭಾರತದಲ್ಲಿ 24.2 ಲಕ್ಷ ಕ್ಷಯ ರೋಗಿಗಳನ್ನು ಗುರುತಿಸಲಾಗಿದೆ. 2021ಕ್ಕೆ ಹೋಲಿಸಿದರೆ ಇದು ಶೇ. 13ರಷ್ಟು ಹೆಚ್ಚಳ ಎಂದು ಸರಕಾರದ ದಾಖಲೆಗಳೇ ಹೇಳುತ್ತವೆ. ಜಗತ್ತಿನ ಒಟ್ಟು ಕ್ಷಯ ರೋಗಿಗಳಲ್ಲಿ ನಾಲ್ಕನೇ ಒಂದು ಭಾಗ ಭಾರತದಲ್ಲೇ ಇದ್ದಾರೆೆ ಎಂದು ಅಂಕಿಅಂಶಗಳು ಹೇಳುತ್ತವೆ. ಜಗತ್ತು ಕ್ಷಯ ಮುಕ್ತವಾಗಲು ಇಂದು ಭಾರತವೇ ಬಹುದೊಡ್ಡ ಅಡ್ಡಿ ಅನ್ನಿಸಿಕೊಂಡಿದೆ. ಕೊರೋನ ಸಂದರ್ಭದಲ್ಲಿ ಭಾರತವು ಲಸಿಕೆ ತಯಾರಿಕೆಯ ಮೂಲಕ ವಿಶ್ವದಲ್ಲಿ ಸುದ್ದಿ ಮಾಡಿತು. ಆದರೆ ಈ ಅವಧಿಯಲ್ಲಿ ಕ್ಷಯ ರೋಗಕ್ಕೆ ಮೀಸಲಾಗಿರುವ ದುಡ್ಡನ್ನು ಸರಕಾರ ಕೊರೋನ ಲಸಿಕೆಗಳಿಗೆ ವರ್ಗಾಯಿಸಿರುವುದು ಕ್ಷಯ ರೋಗ ಪ್ರಕರಣಗಳನ್ನು ಹೆಚ್ಚಿಸಿತು ಎನ್ನುವ ಅಭಿಪ್ರಾಯವಿದೆ. ಕೊರೋನೋತ್ತರ ದಿನಗಳಲ್ಲಿ ಭಾರತದ ಕ್ಷಯ ರೋಗಿಗಳು ತೀವ್ರ ಔಷಧ ಅಭಾವವನ್ನು ಎದುರಿಸಿದರು. ರೋಗಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇವೆಲ್ಲವೂ ಭಾರತದಲ್ಲಿ ಕ್ಷಯರೋಗ ಪ್ರಕರಣಗಳನ್ನು ಹೆಚ್ಚಿಸುವಂತೆ ಮಾಡಿದವು.
ಕ್ಷಯರೋಗವನ್ನು ಬರೇ ಒಂದು ರೋಗವಾಗಿಯಷ್ಟೇ ನೋಡುವಂತಿಲ್ಲ. ಅದು ಭಾರತದ ಒಟ್ಟು ಸಾಮಾಜಿಕ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ. ಕ್ಷಯರೋಗವು ಈ ದೇಶದ ಪೌಷ್ಟಿಕತೆಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ದೇಶವು ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿರುವುದು ಮತ್ತು ಕ್ಷಯರೋಗದಲ್ಲಿ ಅಗ್ರ ಸ್ಥಾನವನ್ನು ಹೊಂದಿರುವುದಕ್ಕೆ ಪರಸ್ಪರ ಸಂಬಂಧವಿದೆ. ಪೌಷ್ಟಿಕ ಆಹಾರದ ಕೊರತೆಯನ್ನು ಎದುರಿಸುವ, ಹಸಿವಿನಿಂದ ಕಂಗಾಲಾಗಿರುವ ಜನರ ಮೇಲೆ ಕ್ಷಯ ರೋಗಾಣು ಸುಲಭದಲ್ಲಿ ಎರಗುತ್ತವೆ. ಕ್ಷಯ ರೋಗಿಗಳನ್ನು ತಕ್ಷಣ ಗುರುತಿಸಿ ಅವರಿಗೆ ಔಷಧಿಗಳನ್ನು ನೀಡುವ ಹಾಗೂ ಪೌಷ್ಟಿಕ ಆಹಾರವನ್ನು ಒದಗಿಸುವ ಕೆಲಸ ಜೊತೆ ಜೊತೆಗೆ ನಡೆಯಬೇಕು. ಇಲ್ಲವಾದರೆ ರೋಗ ಶೀಘ್ರದಲ್ಲಿ ಗುಣವಾಗುವುದಿಲ್ಲ. ಒಬ್ಬನಲ್ಲಿ ಕ್ಷಯ ರೋಗ ಪತ್ತೆಯಾದರೆ ಅದು ಕೇವಲ ಒಂದೆರಡು ತಿಂಗಳಲ್ಲಿ ಗುಣವಾಗುವುದಿಲ್ಲ. ಕನಿಷ್ಠ ಆರೇಳು ತಿಂಗಳು ನಿರಂತರವಾಗಿ ಔಷಧಿಗಳನ್ನು ಪಡೆದುಕೊಳ್ಳಬೇಕು. ಒಂದೆರಡು ತಿಂಗಳು ಔಷಧಿಗಳನ್ನು ಪಡೆದು ಏಕಾಏಕಿ ನಿಲ್ಲಿಸಿದರೆ ಇನ್ನಷ್ಟು ಭೀಕರವಾಗಿ ಅದು ರೋಗಿಯ ಮೇಲೆ ಎರಗಬಹುದು. ಈ ಸುದೀರ್ಘ ಔಷಧಿ ಸೇವನೆ ಮತ್ತು ಪೌಷ್ಟಿಕ ಆಹಾರ ಸೇವನೆಗೆ ಯಾವುದೇ ಅಡ್ಡಿ ಎದುರಾಗಬಾರದು. ಆದರೆ ಭಾರತದಲ್ಲಿ ಕ್ಷಯಕ್ಕೆ ಅಗತ್ಯವಾಗಿರುವ ಲಿನೆರೊಲಿಡ್, ಕ್ಲೋಫಾಜಿಮೈನ್, ಸೈಕ್ಲೋಸೆರೈನ್ ಮೊದಲಾದ ಔಷಧಿಗಳ ಕೊರತೆಯಿದೆ ಎನ್ನುವ ಆರೋಪ ಬಹುಕಾಲದಿಂದ ಕೇಳಿ ಬರುತ್ತಿದೆ.
ಭಾರತದಲ್ಲಿ ಅಧಿಕೃತವಾಗಿ ಗುರುತಿಸಲ್ಪಡದ ಕ್ಷಯರೋಗಿಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ಇವರು ಇತರರಿಗೂ ರೋಗವನ್ನು ಹರಡುತ್ತಾ ಹೋಗುವುದು ರೋಗವನ್ನು ತಡೆಯಲು ಬಹುದೊಡ್ಡ ಅಡ್ಡಿಯಾಗಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ, ಔಷಧಿಗಳನ್ನು ಸಕಾಲದಲ್ಲಿ ಪೂರೈಕೆ ಮಾಡದೇ ಇರುವುದು ಇವೆಲ್ಲವೂ ಕ್ಷಯರೋಗವನ್ನು ಎದುರಿಸಲು ಇರುವ ಸವಾಲುಗಳಾಗಿವೆ. ಕ್ಷಯ ರೋಗವು ಬಡವರ ಪಾಲಿನ ರೋಗವೆಂದು ಗುರುತಿಸಲ್ಪಟ್ಟಿದೆ. ಸರಕಾರ ಇವುಗಳನ್ನು ಮುಚ್ಚಿಡಲು ಪ್ರಯತ್ನಿಸಿದಷ್ಟೂ ಅದು ಹೆಚ್ಚುತ್ತಾ ಹೋಗುತ್ತದೆ. ದೇಶದಲ್ಲಿ ಹೆಚ್ಚುತ್ತಿರುವ ಬಡತನ, ಅಪೌಷ್ಟಿಕತೆಯನ್ನು ಒಪ್ಪಿಕೊಳ್ಳಲು ನಮ್ಮ ಸರಕಾರ ಈಗಲೂ ಸಿದ್ಧವಿಲ್ಲ. ಆದುದರಿಂದಲೇ ಅವುಗಳ ಜೊತೆಗೆ ತಳಕು ಹಾಕಿಕೊಂಡಿರುವ ಕ್ಷಯದಂತಹ ರೋಗಗಳನ್ನು ತಡೆಯಲು ಸರಕಾರ ವಿಫಲವಾಗುತ್ತಿದೆ. ಮಲಿನಗೊಂಡಿರುವ ನದಿಗಳ ನೀರನ್ನು ಬಳಸುವುದು, ವಾತಾವರಣ ದಿನದಿಂದ ದಿನಕ್ಕೆ ಕೆಡುತ್ತಿರುವುದು, ಕೊಳೆಗೇರಿಗಳಲ್ಲಿ ಹೆಚ್ಚಳ ಇವೆಲ್ಲವೂ ಕ್ಷಯ ರೋಗಕ್ಕೆ ಪೂರಕವಾಗಿವೆೆ. ಇವೆಲ್ಲದರ ವಿರುದ್ಧ ಸರಕಾರ ಪ್ರಾಮಾಣಿಕವಾಗಿ ಕ್ರಮ ಕೈಗೊಂಡಾಗ ಕ್ಷಯರೋಗವನ್ನು ತಡೆಯುವ ಯೋಗ್ಯತೆಯನ್ನು ಸರಕಾರ ತನ್ನದಾಗಿಸಿಕೊಳ್ಳುತ್ತದೆ.
ಆರೋಗ್ಯವಂತ ಯುವಕರೇ ದೇಶದ ಭವಿಷ್ಯ. ಕ್ಷಯ ರೋಗ ಈ ದೇಶದ ಯುವಕರ ಮೇಲೆ ನೇರ ದಾಳಿಗಳನ್ನು ಮಾಡುತ್ತದೆ. ಅದು ಮಹಿಳೆಯರನ್ನು, ಮಕ್ಕಳನ್ನು ನಿಧಾನಕ್ಕೆ ಬಲಿ ತೆಗೆದುಕೊಳ್ಳುತ್ತದೆ. ಸರಕಾರ ಈ ನಿಟ್ಟಿನಲ್ಲಿ ಕುಸಿದು ನಿಂತಿರುವ ಆರೋಗ್ಯ ವಲಯವನ್ನು ಮೇಲೆತ್ತಲು ಹೆಚ್ಚು ಪ್ರಯತ್ನ ಪಡಬೇಕಾಗಿದೆ. ಕ್ಷಯ ರೋಗಕ್ಕಾಗಿ ಹೆಚ್ಚಿನ ಹಣವನ್ನು ಮೀಸಲಿಟ್ಟು, ಇದರ ವಿರುದ್ಧ ಹೋರಾಡಲು ಸ್ವಯಂಸೇವಕರ ಪಡೆಯನ್ನು ಕಟ್ಟುವ ಅಗತ್ಯವಿದೆ. ಹಾಗೆಯೇ ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ನೆರವಾಗಲು ಸಮಾಜವನ್ನು ಜಾಗೃತಿಗೊಳಿಸುವ ಕೆಲಸವೂ ನಡೆಯಬೇಕು.