×
Ad

ಅಮೆರಿಕ ಸುಂಕಾಸ್ತ್ರ: ದುರ್ಬಲ ವಿದೇಶಾಂಗ ನೀತಿಗೆ ತೆತ್ತ ಬೆಲೆ

Update: 2025-08-08 09:10 IST

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದ ಮೇಲೆ ಗರಿಷ್ಠ ನಿಯಂತ್ರಣವನ್ನು ಹೊಂದುವ ಏಕೈಕ ಉದ್ದೇಶದಿಂದ ಅಮೆರಿಕ ಮತ್ತೆ ತನ್ನ ಸುಂಕಾಸ್ತ್ರವನ್ನು ಭಾರತದ ಮೇಲೆ ಪ್ರಯೋಗಿಸಿದೆ. ಇತ್ತೀಚೆಗಷ್ಟೇ ಭಾರತದ ಮೇಲೆ ಶೇ. 25ರಷ್ಟು ಪ್ರತಿ ತೆರಿಗೆಯನ್ನು ಹೇರಿದ್ದ ಅಮೆರಿಕ ಇದೀಗ ದಂಡ ರೂಪದಲ್ಲಿ ಹೆಚ್ಚುವರಿ ಶೇ. 25ರಷ್ಟು ತೆರಿಗೆಯನ್ನು ಹೇರುವುದಾಗಿ ಘೋಷಿಸಿದೆ. ಯುದ್ಧಗಳನ್ನು ಮಾಡದಂತೆ ಅಣ್ವಸ್ತ್ರಗಳು ಕೈಗಳನ್ನು ಕಟ್ಟಿ ಹಾಕಿರುವಾಗ, ಇನ್ನೊಂದು ದೇಶದ ಮೇಲೆ ನಿಯಂತ್ರಣಗಳನ್ನು ಹೊಂದಲು ಶ್ರೀಮಂತ ದೇಶಗಳು ಬೇರೆ ಬೇರೆ ದಾರಿಗಳನ್ನು ನೆಚ್ಚಿಕೊಳ್ಳುತ್ತಿವೆ. ವಿಶ್ವ ವ್ಯಾಪಾರ ಒಪ್ಪಂದಗಳನ್ನು ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಗಳ ಮೇಲೆ ಹೇರಿದ ಅಮೆರಿಕವೇ ಇದೀಗ ಆ ಒಪ್ಪಂದಗಳನ್ನು ಉಲ್ಲಂಘಿಸಿ ತನಗೆ ಬೇಕಾದಂತೆ ತೆರಿಗೆಗಳನ್ನು ಹೇರಲು ಹೊರಟಿದೆ. ವಿಶ್ವದ ಯಾವುದೇ ದೇಶಗಳು ವ್ಯಾಪಾರ ಒಪ್ಪಂದಗಳನ್ನು ತಮ್ಮ ದೇಶದ ಆರ್ಥಿಕ ಹಿತಾಸಕ್ತಿಗೆ ಪೂರಕವಾಗಿ ಮಾಡಿಕೊಳ್ಳುತ್ತವೆ. ಆದರೆ ಅಮೆರಿಕವು ಅದನ್ನು ಒಪ್ಪಲು ಸಿದ್ಧವಿಲ್ಲ. ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿಲ್ಲದೇ ಇದ್ದರೆ, ಅಮೆರಿಕ ತನ್ನ ಸುಂಕವನ್ನು ಹೆಚ್ಚಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡುತ್ತಿದೆ. ಇತ್ತೀಚಿನ ಇರಾನ್ ವಿರುದ್ಧ ಸಾರಿದ ಯುದ್ಧದ ಹಿಂದೆ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದುವ ದುರುದ್ದೇಶವನ್ನು ಅಮೆರಿಕ ಹೊಂದಿತ್ತು. ಭಾರತದಂತಹ ದೇಶಗಳು ಇರಾನ್‌ನ ಜೊತೆಗೆ ತೈಲ ಒಪ್ಪಂದಕ್ಕೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿರುವುದು, ಅಮೆರಿಕದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿದೆ. ಆದುದರಿಂದಲೇ, ಮತ್ತೆ ಮಧ್ಯ ಏಶ್ಯ ಉರಿಯುವಂತೆ ಮಾಡಿ, ಅದರಲ್ಲಿ ತನ್ನ ಸಿಗಾರ್ ಹೊತ್ತಿಸುವುದಕ್ಕೆ ಟ್ರಂಪ್ ಮುಂದಾದರು. ಚೀನಾ, ರಶ್ಯ, ಭಾರತದಂತಹ ದೇಶಗಳು ಇರಾನ್ ಜೊತೆಗೆ ವ್ಯಾಪಾರ ಒಪ್ಪಂದಗಳನ್ನು ಸಂಪೂರ್ಣ ಕಡಿದುಕೊಳ್ಳಬೇಕು ಎನ್ನುವುದು ಅಮೆರಿಕದ ಇಂಗಿತ. ಭಾರತ ರಶ್ಯದಿಂದ ತೈಲ, ರಕ್ಷಣಾ ಸಾಮಗ್ರಿಗಳನ್ನು ಖರೀದಿ ಮಾಡುತ್ತಿರುವುದು ಅಮೆರಿಕಕ್ಕೆ ಸಹಿಸಲಾಗುತ್ತಿಲ್ಲ. ಸದ್ಯಕ್ಕೆ ಚೀನಾ ವಿಶ್ವದಲ್ಲಿ ಅಮೆರಿಕಕ್ಕೆ ಪರ್ಯಾಯವಾದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇದು ಅಮೆರಿಕವನ್ನು ಕಳವಳಕ್ಕೆ, ಹತಾಶೆಗೆ ತಳ್ಳಿದೆ. ಆದುದರಿಂದಲೇ ಭಾರತದಂತಹ ದೇಶವನ್ನು ಸುಂಕ ಹೆಚ್ಚಳದ ಬೆದರಿಕೆಯನ್ನು ಒಡ್ಡಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದೆ.

ಅಮೆರಿಕವನ್ನು ತನ್ನ ‘ಮಸೀಹ’ವನ್ನಾಗಿಸಿ, ಭಾರತವನ್ನು ಇನ್ನೊಂದು ‘ಇಸ್ರೇಲ್’ ಮಾಡುವ ಭ್ರಮೆಯಲ್ಲಿದ್ದ ಮೋದಿ ನೇತೃತ್ವದ ಸರಕಾರಕ್ಕೆ ಸುಂಕ ಏರಿಕೆಯಿಂದ ಭಾರೀ ಆಘಾತವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅಮೆರಿಕದ ಸ್ನೇಹಕ್ಕಾಗಿ ಭಾರತವನ್ನು ಅತ್ಯಂತ ದಯನೀಯ ಸ್ಥಿತಿಗೆ ತಳ್ಳಿದ ಮೋದಿಯವರು ಇದೀಗ ಅಮೆರಿಕದ ದುಂಡಾವರ್ತಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದಾರೆ. ‘ನಮಸ್ತೆ ಟ್ರಂಪ್’ ಸಮಾವೇಶವನ್ನು ಹಮ್ಮಿಕೊಂಡು ಕೊರೋನ ವೈರಸ್‌ಗೆ ಭಾರತದ ಹೆಬ್ಬಾಗಿಲನ್ನು ತೆರೆದುಕೊಟ್ಟು, ಅಮೆರಿಕದಲ್ಲಿ ‘ಅಬ್ ಕೀ ಬಾರ್ ಟ್ರಂಪ್ ಸರಕಾರ್’ ಎಂದು ಚುನಾವಣಾ ಪ್ರಚಾರಕ್ಕಿಳಿದು ಪ್ರಧಾನಿ ಹುದ್ದೆಯ ಘನತೆಯನ್ನೇ ಟ್ರಂಪ್‌ಗಾಗಿ ಬಲಿಕೊಟ್ಟವರು ಮೋದಿ. ಆದರೆ ಇಂದು ಅದೇ ಟ್ರಂಪ್ ಭಾರತದ ನಿರಾಕರಣೆಯ ಬಳಿಕವೂ ಪದೇ ಪದೇ ‘ಆಪರೇಷನ್ ಸಿಂಧೂರ ಸ್ಥಗಿತವಾಗಲು ನನ್ನ ಮಧ್ಯಸ್ಥಿಕೆ ಕಾರಣ’ ಎಂದು ಹೇಳಿಕೆ ನೀಡಿ ಮೋದಿಯನ್ನು ಅಣಕಿಸುತ್ತಿದ್ದಾರೆ. ಅವರ ಹೇಳಿಕೆಗಳೆಲ್ಲವೂ ಪಾಕಿಸ್ತಾನಕ್ಕೆ ಪೂರಕವಾಗಿದೆ. ಅಷ್ಟೇ ಅಲ್ಲ, ಇರಾನ್ ದಾಳಿಯ ಸಂದರ್ಭದಲ್ಲಿ, ಪಾಕಿಸ್ತಾನದ ಸೇನಾ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಿ, ಭಾರತವನ್ನು ತೀವ್ರ ಮುಜುಗರಕ್ಕೆ ತಳ್ಳಿದರು. ಹಾಗಾದರೆ, ಕಳೆದ ಒಂದು ದಶಕದಿಂದ ಅಮೆರಿಕದ ಓಲೈಕೆಗಾಗಿ ತನ್ನ ವಿದೇಶಾಂಗ ನೀತಿಗಳಿಗೆ ಎಳ್ಳು ನೀರು ಬಿಟ್ಟು ಭಾರತ ಗಳಿಸಿಕೊಂಡದ್ದಾದರೂ ಏನು? ಮಿತ್ರನಾಗಿದ್ದ ರಶ್ಯದ ನಂಬಿಕೆಯನ್ನು ಕಳೆದುಕೊಂಡಿತು. ನೆರೆಯ ಚೀನಾದ ಜೊತೆಗೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಗಲ್ವಾನ್ ಘರ್ಷಣೆಯ ಬಳಿಕ ಚೀನಾದ ಜೊತೆಗಿನ ಸಂಬಂಧ ಸಂಪೂರ್ಣ ಹದಗೆಟ್ಟಿತು. ಇಸ್ರೇಲನ್ನು ಮಿತ್ರನನ್ನಾಗಿಸುವ ಭರದಲ್ಲಿ ಅತ್ತ ಫೆಲೆಸ್ತೀನ್ ವಿರುದ್ಧ ಮತ ಚಲಾಯಿಸಿ ಇರಾನ್ ಜೊತೆಗೂ ಸಂಬಂಧ ಹದಗೆಟ್ಟಿತು. ಒಟ್ಟಿನಲ್ಲಿ ಕಳೆದ ಒಂದು ದಶಕದ ವಿಫಲ ವಿದೇಶಾಂಗ ನೀತಿಗೆ ಭಾರತ ಬೆಲೆ ತೆತ್ತಿದೆ. ಪರಿಣಾಮವಾಗಿ ಇಂದು ಅಮೆರಿಕದ ಸವಾಲನ್ನು ಒಂಟಿಯಾಗಿ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಭಾರತ ಸ್ವತಂತ್ರ ಗೊಂಡಾಗ ಅದು ಅಮೆರಿಕದ ಕಡೆಗೆ ನೋಡದೆ, ರಶ್ಯವನ್ನು ಮಿತ್ರನನ್ನಾಗಿಸಿಕೊಂಡಿತು. ಇದಕ್ಕೆ ಕಾರಣ ನೆಹರೂ ಅವರ ದೂರದೃಷ್ಟಿ. ಅಸಮಾನತೆಯ ಉತ್ತುಂಗದಲ್ಲಿದ ಭಾರತವನ್ನು ಮೇಲೆತ್ತಲು ರಶ್ಯದ ಸಮಾಜವಾದದ ಸಾಮೀಪ್ಯ ಅತ್ಯಗತ್ಯ ಎನ್ನುವುದನ್ನು ಅವರು ಕಂಡುಕೊಂಡಿದ್ದರು. ಇದೇ ಸಂದರ್ಭದಲ್ಲಿ ಅಮೆರಿಕವನ್ನು ಮಿತ್ರನನ್ನಾಗಿಸಿಕೊಂಡ ಪಾಕಿಸ್ತಾನದ ಇಂದಿನ ಸ್ಥಿತಿ ಹೇಗಿದೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ನೆಹರೂ ಅವರ ದೂರದೃಷ್ಟಿಯ, ಮುತ್ಸದ್ದಿತನದ ವಿದೇಶಾಂಗನೀತಿಗಳನ್ನೆಲ್ಲ ಗಾಳಿಗೆ ತೂರಿ, ಅವರನ್ನು ಟೀಕಿಸುತ್ತಾ ಅಮೆರಿಕದ ಮೈತ್ರಿಯ ಮೂಲಕ ಹೊಸ ಭಾರತವನ್ನು ಕಟ್ಟುವ ಕನಸು ಕಂಡ ಸಂಘಪರಿವಾರ ಮತ್ತು ಬಿಜೆಪಿ ಇಂದು ಭಾರತವನ್ನು ಅತ್ಯಂತ ಇಕ್ಕಟ್ಟಿನ ಸ್ಥಿತಿಗೆ ತಳ್ಳಿದೆ. ಸ್ವದೇಶಿ ಆಂದೋಲನದ ಹೆಸರಿನಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರ ಹಿಡಿಯಿತಾದರೂ, ಕಳೆದ ಒಂದು ದಶಕದಲ್ಲಿ ಸಣ್ಣ ಉದ್ದಿಮೆಗಳು ಸಂಪೂರ್ಣ ಸರ್ವನಾಶವಾದವು. ಅದಾನಿ, ಅಂಬಾನಿ ಕೇಂದ್ರಿತವಾದ ಆರ್ಥಿಕತೆಯೊಂದನ್ನು ಕಟ್ಟುವ ಪ್ರಯತ್ನ ನಡೆಯಿತು. ಸ್ವದೇಶಿಯ ಹೆಸರಿನಲ್ಲಿ ರಾಮ್‌ದೇವ್‌ನಂತಹ ನಕಲಿ ಬಾಬಾಗಳು ಸರಕಾರದಿಂದ ಸಕಲ ಸೌಲಭ್ಯಗಳನ್ನು ಪಡೆದುಕೊಂಡರು. ಇದೇ ಸಂದರ್ಭಲ್ಲಿ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.ನ ಕೈಯಲ್ಲಿದ್ದ ರಫೇಲ್ ಒಪ್ಪಂದವನ್ನು ಕಿತ್ತುಕೊಂಡು ರಿಲಯನ್ಸ್ ಕೈಗೆ ಕೊಡಲಾಯಿತು. ಬಾಯಲ್ಲಿ ಸ್ವದೇಶಿ ಮಂತ್ರವನ್ನು ಹೇಳುತ್ತಲೇ, ಇಲ್ಲಿರುವ ಬಹುತೇಕ ಸಾರ್ವಜನಿಕ ಸೊತ್ತುಗಳನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡಲಾಯಿತು. ಮೇಕ್ ಇನ್ ಇಂಡಿಯಾದ ಕತೆ ಏನಾಯಿತು ಎನ್ನುವುದನ್ನು ಸ್ವತಃ ಮೋದಿಯವರೇ ಹೇಳಬೇಕು. ಕಾರ್ಪೊರೇಟ್ ಕೇಂದ್ರಿತ ಆರ್ಥಿಕ ನೀತಿಗಳು ಇಲ್ಲಿರುವ ರೈತರನ್ನು ಬೀದಿಗೆ ತಂದು ನಿಲ್ಲಿಸಿತು. ಬಂಡವಾಳ ಹೂಡಿಕೆಗಾಗಿ ಮೋದಿ ನಡೆಸಿದ ವಿದೇಶ ಪ್ರಯಾಣಗಳೂ ಫಲಕೊಡಲಿಲ್ಲ. ಭಾರತದ ಆರ್ಥಿಕತೆ ಬಿಕ್ಕಟ್ಟಿನಲ್ಲಿರುವಾಗಲೇ ಇದೀಗ ಅಮೆರಿಕ ಸುಂಕ ಏರಿಕೆಯ ಬೆದರಿಕೆ ಒಡ್ಡಿದೆ. ಈ ಮೂಲಕ ಭಾರತ ಯಾರ ಜೊತೆಗೆ ವ್ಯಾಪಾರ ಮಾಡಬೇಕು, ಏನನ್ನು ವ್ಯಾಪಾರ ಮಾಡಬೇಕು, ಯಾರ ಜೊತೆಗೆ ಯುದ್ಧ ಮಾಡಬೇಕು, ಯಾವಾಗ ನಿಲ್ಲಿಸಬೇಕು ಎನ್ನುವುದೆಲ್ಲವೂ ತನ್ನ ನಿಯಂತ್ರಣದಲ್ಲಿರಬೇಕು ಎಂದು ಅಮೆರಿಕ ಬಯಸುತ್ತಿದೆ. ಇದು ಅದರ ಉದ್ಧಟತನದ ಪರಮಾವಧಿಯಾಗಿದೆ.

ಅಮೆರಿಕದ ಸುಂಕ ಏರಿಕೆ ಅದಕ್ಕೆ ತಿರುಗುಬಾಣವಾಗುವಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ, ಭಾರತ ಮೊದಲು ನೆರೆಹೊರೆಯ ಜೊತೆಗೆ ತನ್ನ ಸಂಬಂಧವನ್ನು ಸುಧಾರಿಸಬೇಕು. ಮುಖ್ಯವಾಗಿ ಚೀನಾದ ಜೊತೆಗೆ. ರಶ್ಯ, ಇರಾನ್ ಜೊತೆಗಿನ ವ್ಯಾಪಾರ ಒಪ್ಪಂದಗಳಿಗೆ ಆದ್ಯತೆಯನ್ನು ನೀಡಿ, ಅಮೆರಿಕೇತರವಾದ ಆರ್ಥಿಕತೆಯನ್ನು ರೂಪಿಸುವುದಕ್ಕೆ ಇದು ಒಂದು ಸಂದರ್ಭವಾಗಬೇಕು. ಭಾರತವನ್ನು ಬಲಿಷ್ಠವಾಗಿ ಒಳಗಿನಿಂದ ಕಟ್ಟುವುದಕ್ಕೆ ಅಮೆರಿಕ ಹೇರಿರುವ ಸುಂಕಾಘಾತವನ್ನೇ ಶಕ್ತಿಯಾಗಿ ಬಳಸಿಕೊಳ್ಳಬೇಕು. ಸ್ಪಷ್ಟ ಆರ್ಥಿಕ ನೀತಿಗಳಿಲ್ಲದ, ಅದಾನಿ, ಅಂಬಾನಿಗಳನ್ನೇ ನೆಚ್ಚಿಕೊಂಡ ಭಾರತದ ದೌರ್ಬಲ್ಯದ ಬಗ್ಗೆ ಅರಿವಿರುವುದಕ್ಕೇ ಟ್ರಂಪ್ ಭಾರತದ ಮೇಲೆ ಸವಾರಿ ಮಾಡುವ ದುಸ್ಸಾಹಸ ತೋರಿಸುತ್ತಿದ್ದಾರೆ. ಅವರಿಗೆ ಸರಿಯಾದ ಉತ್ತರವನ್ನು ನೀಡಿ, ಭಾರತದ ರೈತಾಪಿ ಜನರ ಹಿತಾಸಕ್ತಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಪ್ರಧಾನಿ ಮೋದಿಗೆ ಇದು ಸರಿಯಾದ ಸಮಯ. ಬರೇ ಖಂಡನೆ, ಆಘಾತಗಳಿಂದ ಪರಿಸ್ಥಿತಿಯನ್ನು ಸರಿಪಡಿಸಲು ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಪ್ರಧಾನಿ ಒಪ್ಪಿಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News