×
Ad

ಬಿಜೆಪಿ ಸಚಿವರಿಂದ ದ್ವೇಷದ ʼಜೀನ್ಸ್ ಜಿಹಾದ್!ʼ

Update: 2025-08-01 19:18 IST

ಹೇಗೆ ಮತ್ತು ಯಾವ ಮಟ್ಟದವರೆಗೂ ಮುಸ್ಲಿಮರ ವಿರುದ್ದ ಬಿಜೆಪಿಯ ಮಂದಿ ದ್ವೇಷ ಕಾರಬಲ್ಲರು ಎಂಬುದಕ್ಕೆ, ದಿಲ್ಲಿಯಲ್ಲಿನ ಜೀನ್ಸ್ ಫ್ಯಾಕ್ಟರಿಗಳನ್ನು ಮುಚ್ಚಿಸಿರುವುದು ಮತ್ತೊಂದು ನಿದರ್ಶನ. ದಿಲ್ಲಿ ಕೈಗಾರಿಕಾ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಬಹುತೇಕ ಮುಸ್ಲಿಮರೇ ನಡೆಸುತ್ತಿದ್ದ ಜೀನ್ಸ್ ಹಬ್ ಗಳನ್ನು ಮುಚ್ಚಿಸಿ, ಕಾರ್ಮಿಕರನ್ನು ಓಡಿಸಲು ತಮ್ಮ ಅಧಿಕಾರ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Full View

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ, ಪಶ್ಚಿಮ ದಿಲ್ಲಿಯ ಖ್ಯಾಲಾ ನಗರದಲ್ಲಿರುವ ಜೀನ್ಸ್ ಹೊಲಿಗೆ ಕೇಂದ್ರ ಉತ್ತರ ಪ್ರದೇಶದ ನೂರಾರು ಮುಸ್ಲಿಂ ದರ್ಜಿಗಳನ್ನು ಆಕರ್ಷಿಸಿತ್ತು. ವ್ಯವಹಾರ ಬೆಳೆದಂತೆ, 2021 ರಲ್ಲಿ ಖ್ಯಾಲಾವನ್ನು ಕೈಗಾರಿಕಾ ಪ್ರದೇಶವೆಂದು ಗುರುತಿಸುವಂತಾಗಿತ್ತು. ಕ್ರಮೇಣ, ದಿಲ್ಲಿಯಲ್ಲೇ ಅತಿದೊಡ್ಡ ಜೀನ್ಸ್ ಮಾರುಕಟ್ಟೆಗಳಲ್ಲಿ ಒಂದಾದ ಸಗಟು ಜೀನ್ಸ್ ಮಾರುಕಟ್ಟೆ ಖ್ಯಾಲಾ ಪಕ್ಕದ ನೆರೆಹೊರೆಗಳಲ್ಲಿ ಹುಟ್ಟಿಕೊಂಡಿತು.

ಮುಸ್ಲಿಮರು ಪ್ರಾಬಲ್ಯ ಸಾಧಿಸಿದ್ದ ಈ ಉದ್ಯಮದಲ್ಲಿ, ಹಿಂದೂಗಳು ಮತ್ತು ಸಿಖ್ಖರು ಸಹ ತೊಡಗಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಈ ಬೇಸಿಗೆಯಲ್ಲಿ ಮುಸ್ಲಿಮರು ಜೀನ್ಸ್ ಜಿಹಾದ್ ನಡೆಸುತ್ತಿದ್ದಾರೆ ಎಂಬ ಆರೋಪಗಳು ಶುರುವಾದವು ಎಂದು ವರದಿಗಳು ಹೇಳುತ್ತವೆ.

ಮುಸ್ಲಿಮರು ಜೀನ್ಸ್ ಉದ್ಯಮ ಬಳಸಿಕೊಂಡು ಸಿಖ್ಖರು ಮತ್ತು ಹಿಂದೂಗಳನ್ನು ಬಲವಂತವಾಗಿ ಹೊರಹಾಕುವ ಮೂಲಕ ಈ ಪ್ರದೇಶದಲ್ಲಿ ಪ್ರಬಲರಾಗುತ್ತಿದ್ದಾರೆ, ಅವರ ಜನಸಂಖ್ಯೆ ಇಲ್ಲಿ ಬೆಳೆಯುತ್ತಿದೆ ಎಂದು ಆರೋಪಿಸಲಾಯಿತು. ಇಲ್ಲಿ ಜೀನ್ಸ್ ಉದ್ಯಮ ಅವ್ಯವಸ್ಥಿತ ರೀತಿಯಲ್ಲಿ ವಿಸ್ತರಣೆಯಾಗಿದೆ ಎಂಬ ಸ್ಥಳೀಯ ನಿವಾಸಿಗಳ ದೂರುಗಳನ್ನು ದಿಲ್ಲಿಯ ಕೈಗಾರಿಕಾ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರು ಕೋಮು ಸ್ವರೂಪದಲ್ಲಿ ಬಳಸಿಕೊಂಡು ಮುಸ್ಲಿಂ ಕಾರ್ಮಿಕರ ಮೇಲೆ ದಾಳಿ ಮಾಡಿದರು ಎಂದು ಆರೋಪಿಸಲಾಗಿದೆ.

ಜೀನ್ಸ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶದ ಮುಸ್ಲಿಮರು ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರಾಗಿದ್ದಾರೆ ಎಂದು ಸಿರ್ಸಾ ಪದೇ ಪದೇ ಹೇಳತೊಡಗಿದ್ದರು. ಅಷ್ಟೇ ಅಲ್ಲ, ಜೀನ್ಸ್ ಕಾರ್ಖಾನೆಗಳನ್ನು ಮುಚ್ಚಲು ಮತ್ತು ಕಾರ್ಮಿಕರನ್ನು ಇಲ್ಲಿಂದ ಓಡಿಸಲು ಸಚಿವರು ತಮ್ಮ ಅಧಿಕಾರ ಬಳಸಿದ್ದಾರೆ ಎಂದು ಕುಶಲಕರ್ಮಿಗಳು ಆರೋಪಿಸಿದ್ದಾರೆ.

ಎಷ್ಟೊ ಮಂದಿಯ ಹೊಟ್ಟೆಪಾಡನ್ನು ತೂಗಿಸುತ್ತಿದ್ದ ಜೀನ್ಸ್ ಫ್ಯಾಕ್ಟರಿಗಳು ನಿಲ್ಲುವಂತಾದಾಗ, ಹೆಚ್ಚಿನ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಮರಳಬೇಕಾಯಿತು. ಖ್ಯಾಲಾ ಜೀನ್ಸ್ ಕೇಂದ್ರವನ್ನು ತಾನೇ ಮುಚ್ಚಿಸಿದ್ದೇನೆ ಎಂದು ಸ್ವತಃ ಸಿರ್ಸಾ ಹೇಳಿಕೊಂಡಿದ್ದಾರೆ. ಜೀನ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕರನ್ನು ನಾನು ಓಡಿಸಿದೆ. ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ನಿಂದ ಬಂದ ಅಕ್ರಮ ವಲಸಿಗರು ಅವರಾಗಿದ್ದರು ಎಂದು ಅವರು ಹೇಳಿದ್ದರು.

ಆದರೆ ತಮ್ಮ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳನ್ನು ಸಿರ್ಸಾ ನೀಡಿಲ್ಲ ಎನ್ನುತ್ತವೆ ವರದಿಗಳು. ಖ್ಯಾಲಾದಲ್ಲಿ ಕೆಲಸ ಮಾಡುತ್ತಿರುವವರು ವಿದೇಶಿ ವಲಸಿಗರೆಂದು ದೃಢಪಡಿಲಾಗಿಲ್ಲ ಎಂದೇ ವರದಿಗಳು ಹೇಳುತ್ತಿವೆ. ಖ್ಯಾಲಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಈ ಪ್ರದೇಶದಲ್ಲಿ ಯಾವುದೇ ವಿದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವುದಾಗಿ scroll.in ವರದಿ ಮಾಡಿದೆ.

ಸಿರ್ಸಾ ಮಾತ್ರ, ಅವರೆಲ್ಲ ಓಡಿಹೋಗಿದ್ದರೆ ಒಳ್ಳೆಯದೇ ಆಯಿತು, ಈಗ ದಿಲ್ಲಿ ಸುರಕ್ಷಿತವಾಗಿರುತ್ತದೆ ಎನ್ನುತ್ತಿದ್ದಾರೆ. ಕಾನೂನುಬಾಹಿರ ವ್ಯವಹಾರಗಳ ಕುರಿತು ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶ ಪಾಲಿಸುತ್ತಿರುವುದಾಗಿ ಸಿರ್ಸಾ ಹೇಳಿಕೊಳ್ಳುತ್ತಿದ್ದಾರೆ. ಅಕ್ರಮ ಕಾರ್ಖಾನೆಗಳ ಸಮಸ್ಯೆ ಬಹಳ ಹಿಂದಿನಿಂದಲೂ ಇದೆ. ನಾವು ಈಗ ಅದನ್ನು ಬಗೆಹರಿಸುತ್ತಿದ್ದೇವೆ ಎನ್ನುತ್ತಾರೆ.

ಖ್ಯಾಲಾ ಜೀನ್ಸ್ ಉದ್ಯಮದಲ್ಲಿ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳು ಇದ್ದಾರೆಂದು ಸಿರ್ಸಾ ಹೇಳಿಕೊಂಡಿರುವುದು ಇದೇ ಮೊದಲ ಬಾರಿಯಲ್ಲ. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಳಲ್ಲೂ ಅವರ ಆರೋಪಗಳನ್ನು ಕಾಣಬಹುದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಆರಂಭದಲ್ಲಿ ಸಿರ್ಸಾ ತಮ್ಮ ಕ್ಷೇತ್ರದ ವಸತಿ ಭಾಗಗಳಿಗೆ ವಿಸ್ತರಿಸಿದ ಕಾರ್ಖಾನೆಗಳ ವಿರುದ್ಧ ಮಾತ್ರ ಮಾತನಾಡಿದ್ದರು. ಮೇ ಅಂತ್ಯದ ವೇಳೆಗೆ ಸಿರ್ಸಾ, ವ್ಯಾಪಾರಿಗಳು ಈ ಪ್ರದೇಶವನ್ನು ವಾಸಕ್ಕೆ ಯೋಗ್ಯವಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿದರು ಮತ್ತು ಕ್ರಮ ತೆಗೆದುಕೊಳ್ಳುವ ಬೆದರಿಕೆ ಹಾಕಿದರು.ಜೂನ್‌ ನಲ್ಲಿ ಸರ್ಕಾರಿ ಅಧಿಕಾರಿಗಳು ಅಕ್ರಮ ಕಾರ್ಖಾನೆಗಳ ಬಾಗಿಲು ಮುಚ್ಚಿಸುವ ಅಭಿಯಾನ ಶುರು ಮಾಡಿದರು.

ಕೆಲ ಹಿಂದಿ ಮಾಧ್ಯಮಗಳು ಇದನ್ನು ಜೀನ್ಸ್ ಜಿಹಾದ್ ಪ್ರಕರಣ ಎಂದು ಹಣೆಪಟ್ಟಿ ಕಟ್ಟಿದವು. ಮುಸ್ಲಿಂ ಪ್ರಾಬಲ್ಯದ ಜೀನ್ಸ್ ಉದ್ಯಮ ಹಿಂದೂ ಮತ್ತು ಸಿಖ್ ನಿವಾಸಿಗಳು ಈ ಪ್ರದೇಶವನ್ನು ಖಾಲಿ ಮಾಡಬೇಕಾದ ಪರಿಸ್ಥಿತಿಯನ್ನು ತಂದಿಟ್ಟಿದೆ ಎಂದು ದೊಡ್ಡದಾಗಿ ಆರೋಪಿಸುವುದು ಜೋರಾಯಿತು. ಜೀನ್ಸ್ ಜಿಹಾದ್ ಎಂಬ ಆರೋಪಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸಿರ್ಸಾ ಹೇಳುತ್ತಿದ್ದರೂ, ಹಿಂದೂ ಮತ್ತು ಸಿಖ್ ಕುಟುಂಬಗಳ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸುತ್ತಾರೆ. ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳು ಇಲ್ಲಿಗೆ ಬಂದರೆ ಹಿಂದೂಗಳು ಮತ್ತು ಸಿಖ್ಖರೇ ಅಪಾಯಕ್ಕೆ ಸಿಲುಕಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.

ಆದರೆ, ಹೀಗೆ ಭಯ ಹುಟ್ಟಿಸುವುದು ಆಧಾರರಹಿತ. ಹಾಗೆಂದೂ ಆಗಿಲ್ಲ ಎಂದು ನಿವಾಸಿಗಳು ಹೇಳುತ್ತಾರೆ. ಸಿಖ್ ನಿವಾಸಿಗಳು ಖ್ಯಾಲಾ ಮತ್ತು ವಿಷ್ಣು ಗಾರ್ಡನ್‌ ನಲ್ಲಿರುವ ತಮ್ಮ ಮುಸ್ಲಿಂ ನೆರೆಹೊರೆಯವರ ಬಗ್ಗೆ ಈ ಹಿಂದೆ ಎಂದಿಗೂ ದೂರು ನೀಡಿಲ್ಲ ಎಂದು ಸ್ಥಳೀಯರು ಹೇಳಿರುವುದನ್ನು ವರದಿ ಉಲ್ಲೇಖಿಸುತ್ತದೆ. ಬೇಕಾದರೆ, ಪೊಲೀಸ್ ದಾಖಲೆಗಳನ್ನು ಕೂಡ ನೋಡಬಹುದು. ಕಳೆದ 20 ವರ್ಷಗಳಿಂದಲೂ ಅಂಥ ಪ್ರಕರಣಗಳಿಲ್ಲ ಎನ್ನುತ್ತಾರೆ.

ಇಲ್ಲಿ ಎರಡು ಸಮುದಾಯಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. ಹೊರಗಿನವರು ಮಾತ್ರ ಇದನ್ನು ತರುತ್ತಿದ್ದಾರೆ ಎಂಬುದು ಅವರ ಆರೋಪ. ಜೀನ್ಸ್ ಉದ್ಯಮದಿಂದಾಗಿ ಈ ಪ್ರದೇಶದಲ್ಲಿ ಹೆಚ್ಚಿನ ಅಪರಾಧಗಳು ನಡೆಯುತ್ತಿವೆ ಎಂಬುದು ಸುಳ್ಳು ಎಂದು ಪಶ್ಚಿಮ ದಿಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ scroll.in ವರದಿ ಉಲ್ಲೇಖಿಸುತ್ತದೆ.

ಆದರೆ ಸಿರ್ಸಾ ಮಾತ್ರ, ಜೀನ್ಸ್ ಉದ್ಯಮದಲ್ಲಿ ಬಾಂಗ್ಲಾದೇಶಿ ರೋಹಿಂಗ್ಯಾಗಳೇ ಇದ್ದಾರೆಂದು ಹೇಳುವುದನ್ನು ನಿಲ್ಲಿಸುವುದಿಲ್ಲ. ಅವರ ಇಂಥ ಆರೋಪಗಳು, ತಮ್ಮ ಜೀವನೋಪಾಯಕ್ಕಾಗಿ ಜೀನ್ಸ್ ಉದ್ಯಮವನ್ನು ನಂಬಿಕೊಂಡಿರುವವರ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಬಡವರು, ದಿನಗೂಲಿ ಮಾಡುವವರು ಹೆಚ್ಚು ತೊಂದರೆ ಅನುಭವಿಸಬೇಕಾಗಿದೆ. ಅಧಿಕಾರದಲ್ಲಿರುವವರ ಸುಳ್ಳು, ಅಪಪ್ರಚಾರ ಮತ್ತು ದ್ವೇಷ ಅದೆಷ್ಟೋ ಅಮಾಯಕರ, ಬಡವರ ಬದುಕನ್ನು ಮತ್ತು ಅನ್ನವನ್ನು ಕಸಿದುಕೊಳ್ಳುತ್ತಲೇ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!