×
Ad

ಸೆಮಿಫೈನಲ್ ನಲ್ಲಿ ಅಫ್ಘಾನ್ ನ ಕಳಪೆ ಪ್ರದರ್ಶನಕ್ಕೆ ಭಾರತ ಕಾರಣ : ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಆರೋಪ

Update: 2024-06-27 22:17 IST

PC : X 

ಲಂಡನ್ : ಹಾಲಿ ಟಿ20 ವಿಶ್ವಕಪ್‌ ನಲ್ಲಿ ಅಸಾಧಾರಣ ಪ್ರದರ್ಶನ ನೀಡುತ್ತಾ ಸೆಮಿಫೈನಲ್ ತಲುಪಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಸೆಮಿಫೈನಲ್ ನಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಅದು ಕೇವಲ 56 ರನ್ ಗಳನ್ನು ಗಳಿಸಿತು.

ಇದು ಟಿ20 ವಿಶ್ವಕಪ್ ಸೆಮಿಫೈನಲ್‌ ಗಳ ಅತ್ಯಂತ ಕನಿಷ್ಠ ಮೊತ್ತವಾಗಿ ದಾಖಲಾಯಿತು. ಅದೂ ಅಲ್ಲದೆ, ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅಫ್ಘಾನಿಸ್ತಾನದ ಕನಿಷ್ಠ ಮೊತ್ತವೂ ಆಯಿತು.

ಅಫ್ಘಾನಿಸ್ತಾನದ ಈ ಕಳಪೆ ನಿರ್ವಹಣೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಭಾರತವನ್ನು ದೂರಿದ್ದಾರೆ.

ಟಿ20 ವಿಶ್ವಕಪ್ ಸೆಮಿಫೈನಲ್‌ ಗಳ ವೇಳಾಪಟ್ಟಿಯು ಟ್ರಿನಿಡಾಡ್ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯಕ್ಕೆ ಸಜ್ಜುಗಳ್ಳಲು ಅಫ್ಘಾನಿಸ್ತಾನಕ್ಕೆ ಸಮಯಾವಕಾಶವನ್ನೇ ನೀಡಲಿಲ್ಲ ಎಂಬುದಾಗಿ ಎಕ್ಸ್ ನಲ್ಲಿ ಹಾಕಿದ ಸರಣಿ ಸಂದೇಶಗಳಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

‘‘ಸೋಮವಾರ ರಾತ್ರಿ ಸೇಂಟ್ ವಿನ್ಸೆಂಟ್ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಅಫ್ಘಾನಿಸ್ತಾನವು ಸೆಮಿಫೈನಲ್ ಗೆ ಅರ್ಹತೆ ಪಡೆಯಿತು. ಮಂಗಳವಾರ ನಾಲ್ಕು ಗಂಟೆಗಳ ವಿಮಾನ ವಿಳಂಬದಿಂದಾಗಿ ಟ್ರಿನಿಡಾಡ್ ಪ್ರಯಾಣ ವಿಳಂಬವಾಯಿತು. ಹಾಗಾಗಿ, ಅಭ್ಯಾಸ ನಡೆಸಲು ಅಥವಾ ಹೊಸ ಅಂಗಳಕ್ಕೆ ಹೊಂದಿಕೊಳ್ಳಲು ಅವರಿಗೆ ಸಮಯವೇ ಸಿಗಲಿಲ್ಲ. ಇದು ಆಟಗಾರರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ರೀತಿ ಎಂದು ನನಗನಿಸುತ್ತದೆ’’ ಎಂದು ಅವರು ಹೇಳಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ಆಡುವ ಮುನ್ನ ಸಿದ್ಧತೆ ನಡೆಸಲು ಕನಿಷ್ಠ ಒಂದು ದಿನವಾದರೂ ಬೇಕು ಎಂದು ಅವರು ಅಭಿಪ್ರಾಯಪಟ್ಟ್ದಿದ್ದಾರೆ.

ಮೊದಲ ಸೆಮಿಫೈನಲನ್ನು ಗಯಾನದಲ್ಲಿ ಆಡಬೇಕಾಗಿತ್ತು. ಆದರೆ, ಭಾರತಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಯಿತು ಎಂದೂ ಅವರು ಹೇಳಿದರು.

‘‘ಖಂಡಿತವಾಗಿಯೂ ಈ ಸೆಮಿಫೈನಲನ್ನು ಗಯಾನದಲ್ಲಿ ಆಡಬೇಕಾಗಿತ್ತು. ಆದರೆ, ಇಡೀ ಪಂದ್ಯಾವಳಿಯನ್ನು ಭಾರತವನ್ನು ಗಮನದಲ್ಲಿಟ್ಟುಕೊಂಡು ಯೋಜಿಸಲಾಗಿರುವುದರಿಂದ, ಇತರ ತಂಡಗಳಿಗೆ ತುಂಬಾ ಅನಾನುಕೂಲವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News