ಶ್ರೀಲಂಕಾ ತಂಡದ ಕೋಚ್ ಹುದ್ದೆಗೆ ಕ್ರಿಸ್ ಸಿಲ್ವರ್ವುಡ್ ರಾಜೀನಾಮೆ
ಕ್ರಿಸ್ ಸಿಲ್ವರ್ವುಡ್
ಚೆನ್ನೈ : ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಸ್ಥಾನಕ್ಕೆ ಕ್ರಿಸ್ ಸಿಲ್ವರ್ವುಡ್ ರಾಜೀನಾಮೆ ನೀಡಿದ್ದಾರೆ.
ತನ್ನ ಈ ನಿರ್ಧಾರಕ್ಕೆ ಅವರು ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಬಿಡುಗಡೆಗೊಳಿಸಿರುವ ಹೇಳಿಕೆಯೊಂದರಲ್ಲಿ, ಕುಟುಂಬ ಸದಸ್ಯರೊಂದಿಗೆ ಕಳೆಯುವ ಇಚ್ಛೆಯನ್ನು ಸಿಲ್ವರ್ವುಡ್ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡದ ಸಲಹಾಗಾರ ಹುದ್ದೆಯಿಂದ ಮಹೇಲಾ ಜಯವರ್ಧನೆ ಕೆಳಗಿಳಿದ ಕೆಲವೇ ದಿನಗಳಲ್ಲಿ ಇಂಗ್ಲೆಂಡ್ನ ಸಿಲ್ವರ್ವುಡ್ರ ನಿರ್ಧಾರ ಹೊರಬಿದ್ದಿದೆ.
‘‘ಅಂತರರ್ರಾಷ್ಟ್ರೀಯ ಕ್ರಿಕೆಟ್ ತಂಡದ ಕೋಚ್ ಆಗುವುದೆಂದರೆ ತುಂಬಾ ಸಮಯ ಕುಟುಂಬದಿಂದ ದೂರವಿರಬೇಕಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದ ಬಳಿಕ, ಮನೆಗೆ ಮರಳಲು ಇದು ಸಮಯ ಎಂಬ ನಿರ್ಧಾರಕ್ಕೆ ನಾನು ಭಾರವಾದ ಹೃದಯದಿಂದ ಬಂದಿದ್ದೇನೆ’’ ಎಂದು ಅವರು ಹೇಳಿದ್ದಾರೆ.
ಅವರ ಉಸ್ತುವಾರಿಯಲ್ಲಿ ಶ್ರೀಲಂಕಾವು 2022ರಲ್ಲಿ ಟಿ20 ಏಶ್ಯ ಕಪ್ ಗೆದ್ದಿದೆ ಮತ್ತು 2023ರಲ್ಲಿ ನಡೆದ 50 ಓವರ್ಗಳ ಏಶ್ಯ ಕಪ್ ನಲ್ಲಿ ಫೈನಲ್ ತಲುಪಿದೆ.