×
Ad

ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಶೀಘ್ರವೇ ಭಾರತ ಕ್ರಿಕೆಟ್ ತಂಡ ಪ್ರಕಟ

Update: 2025-09-21 23:28 IST

Courtesy : BCCI

ಹೊಸದಿಲ್ಲಿ, ಸೆ.21: ವೆಸ್ಟ್ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಿದೆ.

“ವೆಸ್ಟ್ಇಂಡೀಸ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗಾಗಿ ಭಾರತೀಯ ಟೆಸ್ಟ್ ತಂಡವನ್ನು ಸೆ.23 ಅಥವಾ 24ರಂದು ಆಯ್ಕೆ ಮಾಡಲಾಗುವುದು. ಆಯ್ಕೆ ಸಮಿತಿಯ ಸಭೆಯು ಆನ್‌ಲೈನ್‌ನಲ್ಲಿ ನಡೆಯಲಿದೆ’’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ರವಿವಾರ ಹೇಳಿದ್ದಾರೆ.

ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಏಶ್ಯ ಕಪ್ ಟೂರ್ನಿಗಾಗಿ ಸದ್ಯ ಯುಎಇನಲ್ಲಿದ್ದಾರೆ. ಹೀಗಾಗಿ ಸಭೆಯು ಆನ್‌ಲೈನ್‌ನಲ್ಲಿ ನಡೆಯಲಿದೆ. ಎಸ್. ಶರತ್ ಹಾಗೂ ಸುಬ್ರೊತೊ ಬ್ಯಾನರ್ಜಿ ಅವರನ್ನೊಳಗೊಂಡ ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಇಬ್ಬರು ಕೊನೆಯ ಬಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸೆ.28ರಂದು ನಡೆಯಲಿರುವ ಬಿಸಿಸಿಐನ ಎಜಿಎಂನಲ್ಲಿ ಶರತ್ ಹಾಗೂ ಬ್ಯಾನರ್ಜಿ ಬದಲಿಗೆ ಪ್ರಗ್ಯಾನ್ ಓಜಾ(ದಕ್ಷಿಣ ವಲಯ)ಹಾಗೂ ಆರ್.ಪಿ. ಸಿಂಗ್(ಕೇಂದ್ರ ವಲಯ)ಸೇರ್ಪಡೆಯಾಗಲಿದ್ದಾರೆ.

ವೆಸ್ಟ್ಇಂಡೀಸ್ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 2ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಆ ನಂತರ 2ನೇ ಟೆಸ್ಟ್ ಪಂದ್ಯವು ಅ.10ರಂದು ಹೊಸದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ತಂಡವು ಹೊಸ ಟೆಸ್ಟ್ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ಮೊದಲ ಬಾರಿ ಸ್ವದೇಶದಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಗಿಲ್ ನಾಯಕತ್ವದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2-2ರಿಂದ ಡ್ರಾಗೊಳಿಸಿತ್ತು.

ವೆಸ್ಟ್ಇಂಡೀಸ್ ತಂಡವು ಸೆ.24ರಂದು ಅಹ್ಮದಾಬಾದ್‌ಗೆ ಆಗಮಿಸಲಿದ್ದು, ಮೊದಲ ಟೆಸ್ಟ್ ಆರಂಭವಾಗುವ ತನಕ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.

ಜೂನ್-ಜುಲೈನಲ್ಲಿ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ಸರಣಿಯನ್ನಾಡಿದ ನಂತರ ರೋಸ್ಟನ್ ಚೇಸ್ ನೇತೃತ್ವದ ವಿಂಡೀಸ್ ತಂಡವು 2025-2027ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವೃತ್ತದಲ್ಲಿ 2ನೇ ಸರಣಿಯನ್ನಾಡಲಿದೆ. ಎಡಗೈ ಸ್ಪಿನ್ನರ್ ಖಾರಿ ಪೀಯರ್ ಅವರು ಇದೇ ಮೊದಲ ಬಾರಿ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ವೆಸ್ಟ್ಇಂಡೀಸ್ ಬ್ಯಾಟಿಂಗ್ ಲೆಜೆಂಡ್ ಶಿವನಾರಾಯಣ್ ಚಂದರ್ಪಾಲ್ ಅವರ ಪುತ್ರ ಟಗೆನಾರಾಯಣ್ ಚಂದರ್ಪಾಲ್ ಕೂಡ ವಿಂಡೀಸ್ ಟೆಸ್ಟ್ ತಂಡದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News