ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ | ಕಪಿಲ್ ದೇವ್ ದಾಖಲೆ ಸರಿಗಟ್ಟಿದ ರವೀಂದ್ರ ಜಡೇಜ
ರವೀಂದ್ರ ಜಡೇಜ | PC : BCCI
ಲಂಡನ್: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲ್ಯಾಂಡ್, ಆಸ್ಟ್ರೇಲಿಯ(ಎಸ್‌ಇಎನ್‌ಎ)ದೇಶಗಳ ವಿರುದ್ಧ ವಿದೇಶಿ ವಾತಾವರಣದಲ್ಲಿ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ತನ್ನ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ತಂಡದ ವಿರುದ್ಧದ 2ನೇ ಟೆಸ್ಟ್‌ನ ಎರಡನೇ ದಿನವಾದ ಗುರುವಾರ 137 ಎಸೆತಗಳಲ್ಲಿ 89 ರನ್ ಗಳಿಸಿದ ರವೀಂದ್ರ ಜಡೇಜ ಅವರು ಕಪಿಲ್ ದೇವ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಗುರುವಾರ 7 ಹಾಗೂ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲ್ಯಾಂಡ್, ಆಸ್ಟ್ರೇಲಿಯ(ಎಸ್‌ಇಎನ್‌ಎ)ತಂಡಗಳ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 8ನೇ ಬಾರಿ 50 ಪ್ಲಸ್ ಸ್ಕೋರ್ ಗಳಿಸಿದ ಜಡೇಜ ಅವರು ಭಾರತದ ಕ್ರಿಕೆಟ್ ದಂತಕತೆ ಕಪಿಲ್ ದೇವ್ ದಾಖಲೆ ಸರಿಗಟ್ಟಿದರು. ಎಂ.ಎಸ್. ಧೋನಿ ನಂತರ ಈ ಸಾಧನೆ ಮಾಡಿದ 2ನೇ ಆಟಗಾರನಾಗಿದ್ದಾರೆ. ಒಟ್ಟು 10 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಧೋನಿ ಅವರು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಜಡೇಜ ಅವರು ಕೇವಲ 37 ಇನಿಂಗ್ಸ್ ನಲ್ಲಿ ಈ ಮೈಲಿಗಲ್ಲು ತಲುಪಿದರೆ, ಕಪಿಲ್ ದೇವ್ ಅವರು 50 ಇನಿಂಗ್ಸ್ ಹಾಗೂ ಧೋನಿ 52 ಇನಿಂಗ್ಸ್‌ಗಳನ್ನು ಆಡಿದ್ದರು.
203 ರನ್ ಜೊತೆಯಾಟದಲ್ಲಿ ಭಾಗಿಯಾದ ಜಡೇಜ ಹಾಗೂ ಶುಭಮನ್ ಗಿಲ್ ಭಾರತವು ಎಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಬೃಹತ್ ಮೊತ್ತ ಗಳಿಸುವುದನ್ನು ದೃಢಪಡಿಸಿದ್ದಾರೆ.
ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿರುವ ಜಡೇಜ ಅವರು ತನ್ನನ್ನು ಟೀಕಿಸುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ.
ಜಡೇಜ ಈ ಪಂದ್ಯಕ್ಕಿಂತ ಮೊದಲು ಉತ್ತಮ ಫಾರ್ಮ್‌ನಲ್ಲಿರಲಿಲ್ಲ. ಅವರ ಪ್ರದರ್ಶನವು ಟೀಕೆಗೆ ಗುರಿಯಾಗಿತ್ತು. ಈ ಪಂದ್ಯಕ್ಕಿಂತ ಮೊದಲು ಆರು ಇನಿಂಗ್ಸ್‌ಗಳಲ್ಲಿ ಆಲ್‌ರೌಂಡರ್ ಜಡೇಜ 30 ಪ್ಲಸ್ ಸ್ಕೋರ್ ಗಳಿಸುವಲ್ಲಿಯೂ ವಿಫಲರಾಗಿದ್ದರು. ಹೀಗಾಗಿ ತಂಡದಲಿ ಅವರಿಗೆ ಸ್ಥಾನ ನೀಡಿರುವ ಕುರಿತು ಕಳವಳ ವ್ಯಕ್ತವಾಗಿತ್ತು.
ರಿಷಭ್ ಪಂತ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಬೆನ್ನುಬೆನ್ನಿಗೆ ಔಟಾದ ಪರಿಣಾಮ ಭಾರತ ತಂಡವು ಸಂಕಷ್ಟದಲಿತ್ತು. ಆಗ ಕ್ರೀಸಿಗಿಳಿದ ಜಡೇಜ ಅವರು ಮೊದಲ ದಿನದಾಟದಂತ್ಯಕ್ಕೆ 41 ರನ್ ಗಳಿಸಿದ್ದರು.
ತನ್ನ ಮೊದಲಿನ ಲಯಕ್ಕೆ ಮರಳಿದ ಜಡೇಜ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಕೆಲವು ಬೌಂಡರಿ ಗಳಿಸಿದರು. ಗಿಲ್ ಮೊದಲ ಬಾರಿ 150 ರನ್ ಪೂರೈಸಲು ಸಾಥ್ ನೀಡಿದರು. ಸ್ಪಿನ್ನರ್ ಶುಐಬ್ ಬಶೀರ್ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಆಡಿ ಸಿಕ್ಸರ್ ಸಿಡಿಸಿದ ಜಡೇಜ ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ಮತ್ತೊಂದು ಶತಕದ ಭರವಸೆ ಮೂಡಿಸಿದ್ದರು. ಕಳೆದ ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಜಡೇಜ ಶತಕ ಗಳಿಸಿದ್ದರು.
ಭೋಜನ ವಿರಾಮಕ್ಕೆ ಮೊದಲು ಜೋಶ್ ಟಂಗ್ ಅವರ ಬೌನ್ಸರ್ ಕೆಣಕಲು ಹೋದ ಜಡೇಜ 89 ರನ್ ಗಳಿಸಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿದರು. 11 ರನ್‌ನಿಂದ ಇನ್ನೊಂದು ಶತಕ ಗಳಿಸುವ ಅವಕಾಶದಿಂದ ವಂಚಿತರಾದರು.