×
Ad

ಏಕದಿನ ಕ್ರಿಕೆಟ್ ದಾಖಲೆಯಲ್ಲೇ ಪ್ರಥಮ : ವಿಶ್ವದಾಖಲೆ ಸೃಷ್ಟಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್‌

Update: 2025-09-05 07:45 IST

PC | ndtv

ಆಡಿದ ಎಲ್ಲ ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅರ್ಧಶತಕಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ ಮನ್ ಮ್ಯಾಥ್ಯೂ ಬ್ರೀಟ್ಸ್ ಹೊಸ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಇದುವರೆಗೆ ಐದು ಏಕದಿನ ಪಂದ್ಯಗಳನ್ನು ಆಡಿರುವ ಬ್ರೀಟ್ಸ್ ಎಲ್ಲ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಲಾಡ್ರ್ಸ್ ನಲ್ಲಿ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಈ ದಾಖಲೆಗೆ ಪಾತ್ರರಾದರು.

ಈ ಪಂದ್ಯದಲ್ಲಿ ಬ್ರೀಟ್ಸ್ 77 ಎಸೆತಗಳಲ್ಲಿ 110 ಸ್ಟ್ರೈಕ್‍ರೇಟ್‍ನಲ್ಲಿ 85 ರನ್ ಗಳಿಸಿದರು. ಆದರೆ ಜೋಫ್ರಾ ಆರ್ಚರ್ ಅವರ ಅದ್ಭುತ ಎಸೆತ ಅವರನ್ನು ಎರಡನೇ ಏಕದಿನ ಶತಕಗಳಿಸುವ ಅವಕಾಶದಿಂದ ವಂಚಿಸಿತು. ಆದರೆ ಇದು ದಕ್ಷಿಣ ಆಫ್ರಿಕಾ ಆಟಗಾರ ಲಾಡ್ರ್ಸ್ ನಲ್ಲಿ ಗಳಿಸಿದ ಗರಿಷ್ಠ ಸ್ಕೋರ್ ಎಂದು ದಾಖಲೆಗೆ ಸೇರಿತು. ಇದಕ್ಕೂ ಮುನ್ನ ಹರ್ಷೆಲ್ ಗಿಬ್ಸ್ 2008ರಲ್ಲಿ 74 ರನ್ ಗಳಿಸಿದ್ದು, ಇದುವರೆಗಿನ ಗರಿಷ್ಠ ರನ್ ಆಗಿತ್ತು.

ದಕ್ಷಿಣ ಆಫ್ರಿಕಾ ಪರ ಅತಿಹೆಚ್ಚು ಅರ್ಧಶತಕಗಳನ್ನು ಗಳಿಸಿದ ಜಾಂಟಿ ರೋಡ್ಸ್, ಕ್ವಿಂಟನ್ ಡಿಕಾಕ್, ಹೆನ್ರಿಚ್ ಕ್ಲಾಸನ್ ಅವರ ವಿಶೇಷ ಕ್ಲಬ್‍ಗೆ ಕೂಡಾ ಬ್ರೀಟ್ಸ್ ಸೇರ್ಪಡೆಯಾದರು. ಐದು ಏಕದಿನ ಪಂದ್ಯಗಳಿಂದ ಅವರು 92.60 ಸರಾಸರಿಯಲ್ಲಿ 463 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕ ಸೇರಿದ್ದು, 150 ರನ್ ಇವರ ಶ್ರೇಷ್ಠ ಸಾಧನೆಯಾಗಿದೆ.

ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ನಿಗದಿತ 50 ಓವರ್ ಗಳಲ್ಲಿ 330 ರನ್ ಕಲೆಹಾಕಿದರೆ, ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮೊದಲ ಪಂದ್ಯವನ್ನೂ ಸೋತಿರುವ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಉಳಿದಿರುವಂತೆ 0-2 ಅಂತರದಿಂದ ಸೋತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News