ಚಾಂಪಿಯನ್ಸ್ ಲೀಗ್ ಫೈನಲ್ | ಸಂಭ್ರಮಾಚರಣೆಯ ವೇಳೆ ಇಬ್ಬರು ಮೃತ್ಯು
Photo : PTI
ಪ್ಯಾರಿಸ್: ಫ್ರಾನ್ಸ್ ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಿದ ಬಳಿಕ ಫ್ರಾನ್ಸ್ ನಲ್ಲಿ ನಡೆದ ಸಂಭ್ರಮಾಚರಣೆಯ ವೇಳೆ ಇಬ್ಬರು ಮೃತಪಟ್ಟಿದ್ದಾರೆ ಮತ್ತು 192 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು 500ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.
ಫೈನಲ್ ನಲ್ಲಿ ಇಂಟರ್ ಮಿಲಾನ್ ತಂಡವನ್ನು ಸೋಲಿಸಿ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡವು ಮೊದಲ ಬಾರಿಗೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದ ಬಳಿಕ, ಶನಿವಾರ ರಾತ್ರಿ ಫ್ಯಾನ್ಸ್ ನಾದ್ಯಂತ ಅಬ್ಬರದ ವಿಜಯೋತ್ಸವ ಭುಗಿಲೆದ್ದಿತು.
ಆದರೆ, ವಿಜಯೋತ್ಸವ ನಿಧಾನವಾಗಿ ಹಿಂಸಾತ್ಮಕ ತಿರುವು ಪಡೆಯಿತು. ವಿಜಯೋತ್ಸವದಲ್ಲಿ ಪಾಲ್ಗೊಂಡ ಕೆಲವರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು. ಪ್ಯಾರಿಸ್ ನ ಚಾಂಪ್ಸ್ ಎಲೈಸೀಸ್ ರಸ್ತೆಯಲ್ಲಿರುವ ಬಸ್ ನಿಲ್ದಾಣಗಳನ್ನು ಉದ್ರಿಕ್ತರು ಧ್ವಂಸಗೊಳಿಸಿದರು ಹಾಗೂ ಅವರು ಪೊಲೀಸರತ್ತ ಕೈಗೆ ಸಿಕ್ಕ ವಸ್ತುಗಳನ್ನು ತೂರಿದರು.
ಈ ಹಂತದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಜನರನ್ನು ಹಿಮ್ಮೆಟ್ಟಿಸಲು ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಸಿಡಿಸಿದರು ಮತ್ತು ಜಲಫಿರಂಗಿ ಧಾರೆಯನ್ನು ಹರಿಸಿದರು.
ವಿಜಯೋತ್ಸವದ ವೇಳೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್ ಆಂತರಿಕ ಸಚಿವಾಲಯ ರವಿವಾರ ತಿಳಿಸಿದೆ. 559 ಮಂದಿಯನ್ನು ಬಂಧಿಸಲಾಗಿದೆ.
200ಕ್ಕೂ ಅಧಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. 22 ಪೊಲೀಸರು ಮತ್ತು ಏಳು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ.