ಏಕದಿನ ವಿಶ್ವಕಪ್ 2027 | ಅರ್ಹತೆ ಪಡೆದ ತಂಡಗಳ ಸಂಪೂರ್ಣ ಪಟ್ಟಿ

Update: 2026-08-11 20:04 IST

Photo Credit : X

ಹೊಸದಿಲ್ಲಿ, ಆ.11: ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಈ ತನಕ 10 ತಂಡಗಳು ಸ್ಥಾನ ಗಿಟ್ಟಿಸಿಕೊಂಡಿದ್ದು, ಇನ್ನೆರಡು ಸ್ಥಾನ ಖಾಲಿ ಇದೆ.

ಅಫ್ಘಾನಿಸ್ತಾನ ತಂಡವು ಸೋಮವಾರ ಮೂರನೇ ಏಕದಿನ ಪಂದ್ಯದಲ್ಲಿ ಐರ್‌ಲ್ಯಾಂಡ್ ತಂಡವನ್ನು ಮೂರು ವಿಕೆಟ್‌ಗಳ ಅಂತರದಿಂದ ಮಣಿಸಿ ಸೂಪರ್-12ಕ್ಕೆ ಅರ್ಹತೆ ಪಡೆದುಕೊಂಡಿದೆ.

ಹೊಸ ರಚನೆಯ ಪ್ರಕಾರ, ಆತಿಥೇಯ ದೇಶಗಳನ್ನು ಹೊರತುಪಡಿಸಿ ಅಗ್ರ ಎಂಟು ತಂಡಗಳು 2026ರ ಸೆಪ್ಟಂಬರ್ 30ರ ರ್ಯಾಂಕಿಂಗ್‌ನ ಅಗ್ರ 8 ತಂಡಗಳು ಸೂಪರ್-12 ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುತ್ತವೆ.

ಹತ್ತು ತಂಡಗಳ ಅರ್ಹತಾ ಟೂರ್ನಮೆಂಟ್ ಹಾಗೂ ಮೂರು ತಂಡಗಳ ಸೂಪರ್ ಸಿರೀಸ್‌ನ ವಿಜೇತ ತಂಡವು ಉಳಿದೆರಡು ಸ್ಥಾನಗಳನ್ನು ಪಡೆಯಲಿವೆ.

2027ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳು

ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಝಿಲ್ಯಾಂಡ್, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಝಿಂಬಾಬ್ವೆ.

ನೇರ ಅರ್ಹತೆ ಪಡೆಯುವ ಅವಕಾಶ ವಂಚಿತವಾದ ವೆಸ್ಟ್‌ಇಂಡೀಸ್

ಅಫ್ಘಾನಿಸ್ತಾನ ತಂಡವು ಸೋಮವಾರ ಐರ್‌ಲ್ಯಾಂಡ್ ತಂಡದ ವಿರುದ್ಧ ಮೂರು ವಿಕೆಟ್‌ಗಳ ಅಂತರದಿಂದ ಜಯಶಾಲಿಯಾದ ನಂತರ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ಕಾರಣ ವೆಸ್ಟ್‌ಇಂಡೀಸ್ ತಂಡವು 2027ರ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೇರ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತವಾಗಿದೆ.

ಅಫ್ಘಾನಿಸ್ತಾನ ತಂಡವು ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಟೂರ್ನಮೆಂಟ್‌ಗೆ ಅರ್ಹತೆ ಪಡೆದ 10ನೇ ಹಾಗೂ ಕೊನೆಯ ತಂಡವಾಗಿದೆ. ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯದ ಆತಿಥ್ಯದಲ್ಲಿ ಟೂರ್ನಿಯು ನಡೆಯಲಿದೆ.

ವೆಸ್ಟ್‌ಇಂಡೀಸ್ ತಂಡವು 2027ರ ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವಕಪ್ ಕ್ವಾಲಿಫೈಯರ್ಸ್‌ನಲ್ಲಿ ಆಡಲಿದೆ. ಈ ಟೂರ್ನಿಯ ಆತಿಥೇಯ ದೇಶವನ್ನು ಇನ್ನೂ ನಿರ್ಧರಿಸಲಾಗಿಲ್ಲ.

ಕೆರಿಬಿಯನ್ ತಂಡವು ಕ್ವಾಲಿಫೈಯರ್ಸ್‌ನಲ್ಲಿ ಐದನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ 2023ರ ಆವೃತ್ತಿಯ ಏಕದಿನ ವಿಶ್ವಕಪ್ ಆಡುವುದರಿಂದ ವಂಚಿತವಾಗಿತ್ತು. ಮೊದಲ ಬಾರಿ ವಿಶ್ವಕಪ್ ಟೂರ್ನಿಗೆ ಅನರ್ಹವಾಗಿತ್ತು.

ವೆಸ್ಟ್‌ಇಂಡೀಸ್ ತಂಡವು ಕಟ್ ಆಫ್ ಡೇಟ್: ಸೆಪ್ಟಂಬರ್, 2026ಕ್ಕಿಂತ ಮೊದಲು ಇನ್ನೂ ಎರಡು ಏಕದಿನ ಪಂದ್ಯಗಳನ್ನು ಆಡಲಿದೆ. ಆದರೆ ಭಾರತ ತಂಡದ ವಿರುದ್ಧ ಎರಡೂ ಪಂದ್ಯಗಳನ್ನು ಜಯಿಸಿದರೂ ಅಫ್ಘಾನಿಸ್ತಾನವನ್ನು ಹಿಂದಿಕ್ಕಲು ಸಾಧ್ಯವಿಲ್ಲ.

10 ತಂಡಗಳು ಭಾಗವಹಿಸಲಿರುವ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಪೂರ್ಣ ಸದಸ್ಯ ರಾಷ್ಟ್ರದ(ಆತಿಥೇಯೇತರ) ಎರಡು ಕೆಳ ರ್ಯಾಂಕಿನ ತಂಡ, ವಿಶ್ವಕಪ್ ಲೀಗ್-2ರ ಅಗ್ರ ನಾಲ್ಕು ತಂಡಗಳು ಹಾಗೂ ಕ್ವಾಲಿಫೈಯರ್ ಪ್ಲೇ ಆಫ್‌ನ ನಾಲ್ಕು ತಂಡಗಳು ಭಾಗವಹಿಸಲಿವೆ.

ಅಗ್ರ ನಾಲ್ಕು ತಂಡಗಳು ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ. ಅಗ್ರ ರ್ಯಾಂಕಿನ ತಂಡ ಎರಡನೇ ಸುತ್ತನ್ನು ನೇರವಾಗಿ ಆಡಲಿದೆ. ಉಳಿದ ಮೂರು ತಂಡಗಳು ಸೂಪರ್ ಸಿರೀಸ್ ಅನ್ನು ಆಡಲಿದ್ದು, ಇದರಲ್ಲಿ ಕೇವಲ ಒಂದು ತಂಡ ಅರ್ಹತೆ ಪಡೆಯಲಿದೆ. 2027ರ ವಿಶ್ವಕಪ್‌ನಲ್ಲಿ ಐಸಿಸಿ ಜಾರಿಗೆ ಬಂದಿರುವ ಈ ಹೊಸ ನಿಯಮವನ್ನು ಐರ್‌ಲ್ಯಾಂಡ್ ಹಾಗೂ ನೆದರ್‌ಲ್ಯಾಂಡ್ಸ್ ಸಹಿತ ಅಸೋಸಿಯೇಟ್ ದೇಶಗಳು ಟೀಕಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News