ಕೊಲೆ ಪ್ರಕರಣ | ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ಅರ್ಜಿ ತಿರಸ್ಕೃತ
ಸುಶೀಲ್ ಕುಮಾರ್ | Photo Credit : PTI
ಹೊಸದಿಲ್ಲಿ, ಆ.11: ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಅವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಒಲಿಂಪಿಯನ್ ಸುಶೀಲ್ ಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಲು ದಿಲ್ಲಿ ಹೈಕೋರ್ಟ್ ನಿರಾಕರಿಸಿದೆ.
ಆಗಸ್ಟ್ 6ರಂದು ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಅವರು ತಿರಸ್ಕರಿಸಿದರು.
ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುವ ಕಾರಣ ಸುಪ್ರೀಂಕೋರ್ಟ್, ಸುಶೀಲ್ ಕುಮಾರ್ ಅರ್ಜಿಯನ್ನು ಈ ಹಿಂದೆ ತಳ್ಳಿ ಹಾಕಿರುವುದು, ಬಂಧನಕ್ಕೆ ಮೊದಲು ಅವರ ವರ್ತನೆ, ಅಪರಾಧದ ಗಂಭೀರತೆ ಹಾಗೂ ಈಗ ನಡೆಯುತ್ತಿರುವ ವಿಚಾರಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಪರಿಗಣಿಸಿ ನ್ಯಾಯಾಧೀಶರು ಜಾಮೀನು ನಿರಾಕರಿಸುವ ಆದೇಶ ನೀಡಿದರು.
ದಿಲ್ಲಿ ಪೊಲೀಸರು ಹಾಗೂ ದೂರುದಾರ ಧಂಕರ್ ಅವರ ತಂದೆ ಜಾಮೀನು ಅರ್ಜಿಯನ್ನು ವಿರೋಧಿಸಿದ್ದರು.
ಸುಶೀಲ್ ಕುಮಾರ್ ಅವರನ್ನು 2021ರ ಮೇ 23ರಂದು ಬಂಧಿಸಲಾಗಿತ್ತು. 2023ರ ಜುಲೈ 19ರಂದು ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಕುಮಾರ್‌ಗೆ ಸೆಶನ್ಸ್ ನ್ಯಾಯಾಲಯವು ಒಂದು ವಾರ ಮಧ್ಯಂತರ ಜಾಮೀನು ನೀಡಿತ್ತು.
2025ರ ಮಾರ್ಚ್ 4ರಂದು ದಿಲ್ಲಿ ಹೈಕೋರ್ಟ್. ಕುಸ್ತಿಪಟುವಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಹೈಕೋರ್ಟ್ ಆದೇಶ ಬದಿಗಿಟ್ಟ ಸುಪ್ರೀಂಕೋರ್ಟ್, ಆಗಸ್ಟ್ 13ರಂದು ಅವರ ಜಾಮೀನು ರದ್ದುಪಡಿಸಿತ್ತು. ಸಾಕ್ಷಿಗಳ ಮೇಲೆ ಪ್ರಭಾವಬೀರುವ ಅಥವಾ ವಿಚಾರಣಾ ಪ್ರಕ್ರಿಯೆ ವಿಳಂಬಗೊಳಿಸುವ ಸಾಧ್ಯತೆಯಿದೆ ಎಂದು ಸುಪ್ರೀಂಕೋರ್ಟ್ ಆ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತ್ತು.
2021ರ ಮೇ 4ರಂದು ದಿಲ್ಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಸಾಗರ್ ಧಂಕರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮೇ 5ರಂದು ಸಾಗರ್ ಮೃತಪಟ್ಟಿದ್ದರು. ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಹಾಗೂ ಸಹಚರರು ಈ ಪ್ರಕರಣದಲ್ಲಿ ಅರೋಪಿಗಳಾಗಿದ್ದಾರೆ.