ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 22,000 ರನ್ | ತೆಂಡುಲ್ಕರ್, ಪಾಂಟಿಂಗ್, ಕೊಹ್ಲಿ ಅವರಿದ್ದ ವಿಶೇಷ ಪಟ್ಟಿಗೆ ಜೋ ರೂಟ್ ಸೇರ್ಪಡೆ
ಜೋ ರೂಟ್ | Photo Credit : AP \ PTI
ಮೆಲ್ಬರ್ನ್, ಡಿ.28: ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 22,000 ರನ್ ಗಳಿಸಿದ ಒಂಭತ್ತನೇ ಬ್ಯಾಟರ್ ಎನಿಸಿಕೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಕ್ರಿಕೆಟ್ ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯ ವಿರುದ್ಧ ನಾಲ್ಕನೇ ಆ್ಯಶಸ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 15 ರನ್ ಗಳಿಸಿದ ನಂತರ ರೂಟ್ ಈ ಸಾಧನೆ ಮಾಡಿದ್ದಾರೆ.
ರೂಟ್ ಇದೀಗ 380 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 49.21ರ ಸರಾಸರಿಯಲ್ಲಿ 22,000 ರನ್ ಗಳಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಅಂತರರಾಷ್ಟ್ರೀಯ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೂಟ್‌ಗಿಂತ ಮೊದಲು ಸಚಿನ್ ತೆಂಡುಲ್ಕರ್, ಕುಮಾರ ಸಂಗಕ್ಕರ, ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್, ಮಹೇಲ ಜಯವರ್ಧನೆ, ಜಾಕಸ್ ಕಾಲಿಸ್, ರಾಹುಲ್ ದ್ರಾವಿಡ್ ಹಾಗೂ ಬ್ರಿಯಾನ್ ಲಾರಾ ಅವರಿದ್ದಾರೆ.
ರೂಟ್ ಆಸ್ಟ್ರೇಲಿಯದ ಮಣ್ಣಿನಲ್ಲಿ ಶತಕ ಗಳಿಸಿರಲಿಲ್ಲ. ಬ್ರಿಸ್ಬೇನ್ ನಲ್ಲಿ ನಡೆದ 2025-26ರ ಆ್ಯಶಸ್ ಸರಣಿಯ 2ನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 138 ರನ್ ಗಳಿಸಿ ಶತಕದ ಕೊರತೆಯಿಂದ ಕೊನೆಗೂ ಹೊರಬಂದಿದ್ದರು. ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಹೊರತಾಗಿಯೂ ರೂಟ್ ಅವರು ನಾಲ್ಕು ಆ್ಯಶಸ್ ಟೆಸ್ಟ್ ಪಂದ್ಯಗಳಲ್ಲಿ 234 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇತ್ತೀಚೆಗೆ ಇಂಗ್ಲೆಂಡ್ ತಂಡವು ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದ್ದರೂ ಆಸ್ಟ್ರೇಲಿಯ ತಂಡದ ವಿರುದ್ಧ ಸರಣಿಯನ್ನು ಸೋತಿದೆ.