ನಾಳೆ 3ನೇ, ಕೊನೆಯ ಏಕದಿನ ಪಂದ್ಯ | ಭಾರತ ವಿರುದ್ಧ ಸರಣಿ ಕ್ಲೀನ್‌ಸ್ವೀಪ್‌ನತ್ತ ಆಸ್ಟ್ರೇಲಿಯ ಚಿತ್ತ
Photo Credit : PTI
ಸಿಡ್ನಿ, ಅ.24: ಅಡಿಲೇಡ್‌ನಲ್ಲಿ 2 ವಿಕೆಟ್ ಅಂತರದಿಂದ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿರುವ ಆತಿಥೇಯ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಶನಿವಾರ ನಡೆಯಲಿರುವ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿ ಭಾರತ ವಿರುದ್ಧ ಸರಣಿ ಕ್ಲೀನ್‌ಸ್ವೀಪ್ ಸಾಧಿಸಿ ಇತಿಹಾಸ ನಿರ್ಮಿಸುವ ಗುರಿ ಇಟ್ಟುಕೊಂಡಿದೆ.
ಪರ್ತ್‌ನಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ ಸೋತಿದ್ದ ಭಾರತ ತಂಡವು 2ನೇ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿತ್ತು. ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬೇಗನೆ ಔಟಾದ ನಂತರ ಚೇತರಿಸಿಕೊಳ್ಳುವಲ್ಲಿ ವಿಫಲವಾಯಿತು. ಕೊಹ್ಲಿ ತನ್ನ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಮೊದಲ ಬಾರಿ ಸತತ 2 ಬಾರಿ ಶೂನ್ಯಕ್ಕೆ ಔಟಾಗಿದ್ದರು.
ಜೋಶ್ ಹೇಝಲ್‌ವುಡ್ ಭಾರತದ ಅಗ್ರ ಸರದಿಯನ್ನು ಕಾಡಿದರು. ರೋಹಿತ್ ಅಡಿಲೇಡ್‌ನಲ್ಲಿ 73 ರನ್ ಗಳಿಸಿ ಮಿಂಚಿದ್ದಾರೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಭಾರತ ತಂಡದಲ್ಲಿ ಅಸಮತೋಲನ ಕಂಡುಬಂದಿದೆ. ಮೊದಲೆರಡು ಪಂದ್ಯದಲ್ಲಿ ಭಾರತವು ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಏಕದಿನ ನಾಯಕತ್ವವಹಿಸಿರುವ ಗಿಲ್ ಮೊದಲೆರಡು ಪಂದ್ಯಗಳಲ್ಲಿ ಕೇವಲ 10 ಹಾಗೂ 9 ರನ್ ಗಳಿಸಿ ನಿರಾಸೆಗೊಳಿಸಿದ್ದಾರೆ.
ಅಡಿಲೇಡ್‌ನಲ್ಲಿ ಆಸ್ಟ್ರೇಲಿಯದ ಯಶಸ್ವಿ ರನ್ ಚೇಸ್‌ಗೆ ಮ್ಯಾಟ್ ಶಾರ್ಟ್, ಕೂಪರ್ ಕೊನೊಲ್ಲಿ, ಮಿಚೆಲ್ ಓವನ್ ಹಾಗೂ ಮ್ಯಾಥ್ಯೂ ರೆನ್‌ಶಾ ಅಮೂಲ್ಯ ಕೊಡುಗೆ ನೀಡಿದ್ದರು.
ಆಸ್ಟ್ರೇಲಿಯ ತಂಡ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಭಾರತ ವಿರುದ್ಧ ಈ ತನಕ ಕ್ಲೀನ್‌ಸ್ವೀಪ್ ಸಾಧಿಸಿಲ್ಲ. ಸಿಡ್ನಿಯಲ್ಲಿ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸದಲ್ಲಿದೆ.
ಆಸ್ಟ್ರೇಲಿಯ ತಂಡವು ಹೇಝಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಮಿಂಚಿದ್ದ ನಾಥನ್ ಎಲ್ಲಿಸ್ ಮತ್ತೊಂದು ಅವಕಾಶ ಪಡೆಯಬಹುದು.
ಭಾರತ ಪಾಳಯದಲ್ಲಿ ಆಡುವ 11ರ ಬಳಗದಲ್ಲಿ ಬದಲಾವಣೆಯಾಗುವುದು ಬಹುತೇಕ ಖಚಿತ. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್‌ಗೆ ಅವಕಾಶ ನೀಡಬೇಕೆಂಬ ಚರ್ಚೆ ಜೋರಾಗಿದೆ. ಆಲ್‌ರೌಂಡರ್ ಸುಂದರ್ ಸರಣಿಯಲ್ಲಿ 3 ವಿಕೆಟ್ ಪಡೆದಿದ್ದರೂ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. ಸರಣಿಯಲ್ಲಿ ಮಿಂಚುವಲ್ಲಿ ವಿಫಲರಾದ ಹರ್ಷಿತ್ ರಾಣಾ ಬದಲಿಗೆ ವೇಗಿ ಪ್ರಸಿದ್ಧ ಕೃಷ್ಣ ಅವಕಾಶ ಪಡೆಯಬಹುದು.
ಅಂಕಿ-ಅಂಶ
ಏಕದಿನ ರನ್ ಪಟ್ಟಿಯಲ್ಲಿ ಕುಮಾರ ಸಂಗಕ್ಕರ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲು ಕೊಹ್ಲಿಗೆ ಇನ್ನೂ 54 ರನ್ ಅಗತ್ಯವಿದೆ.
► ಭಾರತವು 2023ರ ವಿಶ್ವಕಪ್ ಫೈನಲ್ ನಂತರ ಸತತ 17ನೇ ಬಾರಿ ಟಾಸ್ ಸೋತಿದೆ.
► ಭಾರತ ತಂಡವು 2021-22ರ ನಂತರ ಸತತ 3 ಏಕದಿನ ಪಂದ್ಯಗಳನ್ನು ಸೋತಿಲ್ಲ.
► ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯ ತಂಡವು ಭಾರತ ವಿರುದ್ಧ ಆಡಿರುವ 19 ಪಂದ್ಯಗಳ ಪೈಕಿ 16ರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ರಹಿತವಾಗಿದೆ. ಭಾರತ ತಂಡವು 2008 ಹಾಗೂ 2016ರಲ್ಲಿ ಜಯ ದಾಖಲಿಸಿತ್ತು.
ಪಿಚ್ ಸ್ಥಿತಿಗತಿ
ಇತ್ತೀಚೆಗಿನ ದಿನಗಳಲ್ಲಿ ಸಿಡ್ನಿ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಆಸ್ಟ್ರೇಲಿಯದ ಬ್ಯಾಟರ್‌ಗಳು ಇಲ್ಲಿನ ಪರಿಸ್ಥಿತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಸಿಡ್ನಿ ಮೈದಾನದಲ್ಲಿ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯವು ಸತತ 6 ಪಂದ್ಯಗಳನ್ನು ಜಯಿಸಿದ್ದು, ಇದರಲ್ಲಿ ಬ್ಯಾಟರ್‌ಗಳು ಮಹತ್ವದ ಕೊಡುಗೆ ನೀಡಿದ್ದಾರೆ.
ತಂಡಗಳು
ಭಾರತ(ಸಂಭಾವ್ಯ): 1.ಶುಭಮನ್ ಗಿಲ್(ನಾಯಕ), 2.ರೋಹಿತ್ ಶರ್ಮಾ, 3. ವಿರಾಟ್ ಕೊಹ್ಲಿ,4. ಶ್ರೇಯಸ್ ಅಯ್ಯರ್, 5. ಅಕ್ಷರ್ ಪಟೇಲ್, 6. ಕೆ.ಎಲ್.ರಾಹುಲ್(ವಿಕೆಟ್‌ಕೀಪರ್), 7. ಸುಂದರ್/ಕುಲದೀಪ ಯಾದವ್, 8. ನಿತೀಶ್ ರೆಡ್ಡಿ,9. ಹರ್ಷಿತ್ ರಾಣಾ/ಪ್ರಸಿದ್ಧ ಕೃಷ್ಣ, 10. ಅರ್ಷದೀಪ ಸಿಂಗ್, 11. ಮುಹಮ್ಮದ್ ಸಿರಾಜ್.
ಆಸ್ಟ್ರೇಲಿಯ(ಸಂಭಾವ್ಯ): 1.ಮಿಚೆಲ್ ಮಾರ್ಷ್(ನಾಯಕ), 2. ಟ್ರಾವಿಸ್ ಹೆಡ್, 3. ಮ್ಯಾಟ್ ಶಾರ್ಟ್, 4. ಮ್ಯಾಥ್ಯೂ ರೆನ್‌ಶಾ, 5. ಅಲೆಕ್ಸ್ ಕ್ಯಾರಿ(ವಿಕೆಟ್‌ಕೀಪರ್),6. ಕೂಪರ್ ಕೊನೊಲ್ಲಿ, 7. ಮಿಚ್ ಓವನ್, 8. ಕ್ಸೇವಿಯರ್ ಬಾರ್ಟ್ಲೆಟ್, 9. ಮಿಚೆಲ್ ಸ್ಟಾರ್ಕ್/ಜಾಕ್ ಎಡ್ವರ್ಡ್ಸ್, 10. ಆ್ಯಡಮ್ ಝಂಪಾ, 11. ನಾಥನ್ ಎಲ್ಲಿಸ್/ಹೇಝಲ್‌ವುಡ್.
*ಪಂದ್ಯ ಆರಂಭದ ಸಮಯ: ಬೆಳಗ್ಗೆ 9:00