ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಗೊಂಚಲು | ಅಕ್ಷರ್ ಪಟೇಲ್, ಬುಮ್ರಾ ದಾಖಲೆ ಮುರಿದ ಕುಲದೀಪ್ ಯಾದವ್
ಕುಲದೀಪ್ ಯಾದವ್ |Photo : PTI
ಧರ್ಮಶಾಲಾ: ತಾನು 2017ರಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಧರ್ಮಶಾಲಾ ಮೈದಾನದಲ್ಲಿ ಭಾರತದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕೈಚಳಕ ತೋರಿ ಎದುರಾಳಿ ಇಂಗ್ಲೆಂಡ್ ನ 5 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಈ ಮೂಲಕ ಅಕ್ಷರ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರಾ ಅವರ ದಾಖಲೆಯನ್ನು ಮುರಿದಿದ್ದಾರೆ.
2017ರಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯ ವಿರುದ್ಧ ಕುಲದೀಪ್ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಆಗ 4 ವಿಕೆಟ್ ಗಳನ್ನು ಕಬಳಿಸಿದ್ದ ಅವರು ಆಸ್ಟ್ರೇಲಿಯ ವಿರುದ್ಧ 8 ವಿಕೆಟ್ ಗಳಿಂದ ಜಯ ಸಾಧಿಸುವಲ್ಲಿ ನೆರವಾಗಿದ್ದರು. ಇದೀಗ 7 ವರ್ಷಗಳ ನಂತರ ಧರ್ಮಶಾಲಾ ಮೈದಾನದಲ್ಲಿ ಆಸ್ಟ್ರೇಲಿಯದ ಹಳೆ ಎದುರಾಳಿ ಇಂಗ್ಲೆಂಡ್ ವಿರುದ್ಧ ಸ್ಪಿನ್ ಮೋಡಿ ಮಾಡಿದ್ದಾರೆ.
ಇನಿಂಗ್ಸ್ ನ 18ನೇ ಓವರ್ನಲ್ಲಿ ಇಂಗ್ಲೆಂಡ್ ನ ಆರಂಭಿಕ ಬ್ಯಾಟರ್ ಬೆನ್ ಡಕೆಟ್(27 ರನ್)ವಿಕೆಟ್ ಉರುಳಿಸಿದ ಕುಲದೀಪ್ ಈಗಾಗಲೆ ಸರಣಿ ವಶಪಡಿಸಿಕೊಂಡಿರುವ ಭಾರತಕ್ಕೆ ಮೇಲುಗೈ ಒದಗಿಸಿದರು. ಒಲಿ ಪೋಪ್ ಗೆ(27 ರನ್)ಪೆವಿಲಿಯನ್ ಹಾದಿ ತೋರಿಸಿದ ಕುಲದೀಪ್ ಇಂಗ್ಲೆಂಡ್ ಪರ ಗರಿಷ್ಠ ಸ್ಕೋರ್ ಗಳಿಸಿದ ಇನ್ನೋರ್ವ ಆರಂಭಿಕ ಬ್ಯಾಟರ್ ಝಾಕ್ ಕ್ರಾವ್ಲೆ(79 ರನ್)ಅವರನ್ನು ಕ್ಲೀನ್ಬೌಲ್ಡ್ ಮಾಡಿದರು. 100ನೇ ಪಂದ್ಯ ಆಡಿದ ಜಾನಿ ಬೈರ್ಸ್ಟೋವ್(29 ರನ್)ಹಾಗೂ ನಾಯಕ ಬೆನ್ ಸ್ಟೋಕ್ಸ್(0)ವಿಕೆಟ್ ಗಳನ್ನು ಉರುಳಿಸಿದ ಕುಲದೀಪ್ ವೃತ್ತಿಜೀವನದಲ್ಲಿ ನಾಲ್ಕನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು.
ಈ ಸಾಧನೆಯ ಮೂಲಕ ಕುಲದೀಪ್ ಅವರು ಕಡಿಮೆ ಎಸೆತದಲ್ಲಿ ಭಾರತದ ಪರ 50 ವಿಕೆಟ್ ಗಳನ್ನು ಉರುಳಿಸಿದ್ದ ಅಕ್ಷರ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರಾ ಅವರ ದಾಖಲೆಯನ್ನು ಮುರಿದರು.
ಕುಲದೀಪ್ 1,871 ಎಸೆತಗಳಲ್ಲಿ 50 ವಿಕೆಟ್ ಗಳನ್ನು ಪೂರೈಸಿದರೆ, ಅಕ್ಷರ್ 2,205 ಹಾಗೂ ಬುಮ್ರಾ 2,520 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.
ದಕ್ಷಿಣ ಆಫ್ರಿಕಾದ ಪೌಲ್ ಆಡಮ್ಸ್(134)ಹಾಗೂ ಇಂಗ್ಲೆಂಡ್ ನ ಜಾನಿ ವಾರ್ಡ್ಲೆ(102)ನಂತರ 50 ಪ್ಲಸ್ ಟೆಸ್ಟ್ ಕ್ರಿಕೆಟ್ ಗಳನ್ನು ಪಡೆದ ವಿಶ್ವದ ಮೂರನೇ ಎಡಗೈ ಸ್ಪಿನ್ನರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.