×
Ad

ಸೂರ್ಯವಂಶಿಗೆ ಸಿಗದ 'ಸೂಪರ್' ಅವಕಾಶ: ಅಭಿಮಾನಿಗಳ ಆಕ್ರೋಶ

Update: 2025-11-22 08:38 IST

ದೋಹಾ: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್-2025 ಟೂರ್ನಿಯ ಸೆಮಿಫೈನಲ್ ಪಂದ್ಯದ ಫಲಿತಾಂಶ ನಿರ್ಧರಿಸಲು ಆಡಿದ 'ಸೂಪರ್ ಓವರ್'ನಲ್ಲಿ ಭಾರತದ ಭರವಸೆಯ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿಯವರಿಗೆ ಬ್ಯಾಟಿಂಗ್ ಅವಕಾಶ ಸಿಗದ ಬಗ್ಗೆ ಜಾಲತಾಣಗಳಲ್ಲಿ ಅಭಿಮಾನಿಗಳು ತೀವ್ರ ನಿರಾಶೆ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಪರ್ ಓವರ್ ನಲ್ಲಿ ಸೋಲು ಅನುಭವಿಸುವ ಮೂಲಕ ಭಾರತ ಎ ತಂಡ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಬಾಂಗ್ಲಾದೇಶ ಎ ತಂಡ ಸೂಪರ್ ಓವರ್ ನಲ್ಲಿ ಗೆಲ್ಲಲು ಒಂದು ರನ್ ನ ಗುರಿ ಪಡೆದಿತ್ತು.

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಎ ತಂಡ ಎದುರಾಳಿಗಳಿಗೆ 195 ರನ್ ಗುರಿ ನೀಡಿದರೆ, ಭಾರತ ಎ ತಂಡ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿ ಟೈ ಮಾಡಿಕೊಂಡಿತು. ಸೂಪರ್ ಓವರ್ ನಲ್ಲಿ ಅಚ್ಚರಿ ಎಂಬಂತೆ ನಾಯಕ ಜಿತೇಶ್ ಶರ್ಮಾ ಅವರು ರಮಣದೀಪ್ ಸಿಂಗ್ ಅವರೊಂದಿಗೆ ಕ್ರೀಸ್ಗೆ ಬಂದರು. ದಿಟ್ಟ ಹೊಡೆತಗಳಿಗೆ ಹೆಸರಾದ ಸೂರ್ಯವಂಶಿಯವರನ್ನು ಹೊರಗಿಟ್ಟದ್ದು ಅಚ್ಚರಿ ಮೂಡಿಸಿತ್ತು.

ಜಿತೇಶ್ ಮೊದಲ ಎಸೆತದಲ್ಲೇ ಔಟ್ ಆದಾಗಲೂ ಸೂರ್ಯವಂಶಿ ಬದಲಾಗಿ ಮೂರನೇ ಕ್ರಮಾಂಕದಲ್ಲಿ ಅಶುತೋಷ್ ಶರ್ಮಾ ಆಗಮಿಸಿದರು. ಎದುರಿಸಿದ ಮೊದಲ ಎಸೆತದಲ್ಲೇ ಔಟ್ ಆಗುವ ಮೂಲಕ ಭಾರತ ಎ ತಂಡ ಶೂನ್ಯಕ್ಕೆ ಆಲೌಟ್ ಆದಂತಾಯಿತು. ಬಾಂಗ್ಲಾದೇಶ ಫೈನಲ್ ತಲುಪಲು ಸೂಪರ್ ಓವರ್ ನಲ್ಲಿ ಕೇವಲ ಒಂದು ರನ್ ಗಳಿಸುವ ಗುರಿ ಪಡೆಯಿತು. ಸೂರ್ಯವಂಶಿಗೆ ಅವಕಾಶ ನೀಡದಿದ್ದುದೇ ಭಾರತದ ಸೋಲಿಗೆ ಕಾರಣ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ವೈಭವ್ ಅವರನ್ನು ಸೂಪರ್ ಓವರ್ ನಲ್ಲಿ ಕ್ರೀಸ್ಗೆ ಇಳಿಸದೇ ಇದ್ದುದು ತಂಡದ ವ್ಯವಸ್ಥಾಪಕರ ಕೆಟ್ಟ ಆಯ್ಕೆಯನ್ನು ಸೂಚಿಸುತ್ತದೆ. ಅವರು ಟೂರ್ನಿಯ ಅತ್ಯುತ್ತಮ ಬ್ಯಾಟ್ಸ್ಮನ್. ಆದರೆ ಇಡೀ ತಂಡ ಅವರನ್ನು ಹೊರಗಿರಿಸಿತು" ಎಂದು ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂರ್ಯವಂಶಿ ಇದ್ದರೂ ತಾವು ಸೂಪರ್ ಓವರ್ ನಲ್ಲಿ ಬ್ಯಾಟ್ ಮಾಡುವ ಮೂಲಕ ಜಿತೇಶ್ ಶರ್ಮಾ 6 ಎಸೆತದಲ್ಲಿ 30 ರನ್ ಗಳಿಸಬಹುದು ಎಂಬ ಯೋಚನೆಯಲ್ಲಿದ್ದರು ಎಂದು ಮತ್ತೊಬ್ಬ ಅಭಿಮಾನಿ ಅಣಕಿಸಿದ್ದಾರೆ. ನಾಯಕ ಮತ್ತು ಆಯ್ಕೆಗಾರರನ್ನು ತಕ್ಷಣ ಬದಲಿಸಬೇಕು ಎಂದು ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News