ಅಭಿಷೇಕ್ ಶರ್ಮಾ, ಸ್ಮೃತಿ ಮಂಧಾನಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ
ಸ್ಮೃತಿ ಮಂಧಾನ , ಅಭಿಷೇಕ್ ಶರ್ಮಾ | Photo Credit : PTI
ದುಬೈ, ಅ.16: ಭಾರತದ ಸ್ಟಾರ್ ಆರಂಭಿಕ ಕ್ರಿಕೆಟಿಗರಾದ ಅಭಿಷೇಕ್ ಶರ್ಮಾ ಹಾಗೂ ಸ್ಮತಿ ಮಂಧಾನ ಗುರುವಾರ ಸೆಪ್ಟಂಬರ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಕ್ರಮವಾಗಿ ಏಶ್ಯ ಕಪ್ ಹಾಗೂ ಆಸ್ಟ್ರೇಲಿಯ ವಿರುದ್ಧ ಮಹಿಳೆಯರ ಏಕದಿನ ಸರಣಿಯಲ್ಲಿ ನೀಡಿರುವ ಅತ್ಯುತ್ತಮ ಪ್ರದರ್ಶನಕ್ಕಾಗಿ ಅಭಿಷೇಕ್ ಹಾಗೂ ಸ್ಮೃತಿ ಈ ಪ್ರಶಸ್ತಿಗೆ ಭಾಜನರಾದರು.
ಅಭಿಷೇಕ್ ಸೆಪ್ಟಂಬರ್ ತಿಂಗಳಲ್ಲಿ 7 ಪಂದ್ಯಗಳಲ್ಲಿ 44.85ರ ಸರಾಸರಿಯಲ್ಲಿ 200ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 314 ರನ್ ಗಳಿಸಿದ್ದಾರೆ.
25ರ ವಯಸ್ಸಿನ ಅಭಿಷೇಕ್ ಅವರು ಏಶ್ಯಕಪ್‌ನಲ್ಲಿ ‘ಸರಣಿಶ್ರೇಷ್ಠ’ ಪ್ರಶಸ್ತಿಗೆ ಪಾತ್ರರಾಗಿದ್ದರು. ಟಿ-20 ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಗರಿಷ್ಠ ರೇಟಿಂಗ್ ಪಾಯಿಂಟ್ಸ್ ಪಡೆದಿದ್ದರು.
ಸಹ ಆಟಗಾರ ಕುಲದೀಪ ಯಾದವ್ ಹಾಗೂ ಝಿಂಬಾಬ್ವೆಯ ಬ್ರಿಯಾನ್ ಬೆನ್ನೆಟ್ ರನ್ನು ಹಿಂದಿಕ್ಕಿದ ಅಭಿಷೇಕ್ ಈ ಪ್ರಶಸ್ತಿಯನ್ನು ಜಯಿಸಿದರು.
ಮತ್ತೊಂದೆಡೆ ಮಂಧಾನ ಅವರು ಸ್ವದೇಶದಲ್ಲಿ ನಡೆದಿದ್ದ ಆಸ್ಟ್ರೇಲಿಯ ತಂಡ ವಿರುದ್ಧದ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ 58, 117 ಹಾಗೂ 125 ರನ್ ಗಳಿಸಿದ್ದರು.
ಭಾರತೀಯ ಮಹಿಳೆಯರ ತಂಡದ ಉಪ ನಾಯಕಿ ಮಂಧಾನ ಸೆಪ್ಟಂಬರ್ ತಿಂಗಳಲ್ಲಿ 4 ಏಕದಿನ ಪಂದ್ಯಗಳಲ್ಲಿ 77ರ ಸರಾಸರಿಯಲ್ಲಿ, 135.58ರ ಸ್ಟ್ರೈಕ್‌ರೇಟ್ ನಲ್ಲಿ ಒಟ್ಟು 308 ರನ್ ಗಳಿಸಿದ್ದಾರೆ.
ಈಗ ನಡೆಯುತ್ತಿರುವ 2025ರ ಆವೃತ್ತಿಯ ಐಸಿಸಿ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತದ ಅಭಿಯಾನದಲ್ಲಿ ಭಾಗಿಯಾಗಿರುವ ಮಂಧಾನ, ಆಸ್ಟ್ರೇಲಿಯದ ವಿರುದ್ಧ ಪಂದ್ಯದಲ್ಲಿ ವೇಗದ ಶತಕ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು. 3ನೇ ಪಂದ್ಯದಲ್ಲಿ ಮಂಧಾನ ಕೇವಲ 50 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ದಕ್ಷಿಣ ಆಫ್ರಿಕಾದ ಟಝ್ಮಿನ್ ಬ್ರಿಟ್ಸ್ ಹಾಗೂ ಪಾಕಿಸ್ತಾನದ ಸಿದ್ರಾ ಅಮಿನ್ ಪ್ರಶಸ್ತಿಯ ರೇಸ್‌ನಲ್ಲಿದ್ದ ಇನ್ನಿಬ್ಬರು ಆಟಗಾರ್ತಿಯರಾಗಿದ್ದರು.