×
Ad

ಸನ್‍ರೈಸರ್ಸ್- ಹೈದರಾಬಾದ್ ಕ್ರಿಕೆಟ್ ಮಂಡಳಿ ನಡುವೆ ಶಾಂತಿ ಒಪ್ಪಂದ!

Update: 2025-04-02 10:30 IST

PC: ndtv

ಹೈದರಾಬಾದ್: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‍ನ ವಿರುದ್ಧ ಕಿರುಕುಳ ಆರೋಪ ಮಾಡಿ, ಎಚ್‍ಸಿಎ ವ್ಯಾಪ್ತಿಯಿಂದ ಹೊರ ನಡೆಯುವುದಾಗಿ ಇಂಡಿಯನ್ ಪ್ರಿಮಿಯರ್ ಲೀಗ್ ಫ್ರಾಂಚೈಸಿ ಸನ್‍ರೈಸರ್ಸ್ ಹೈದ್ರಾಬಾದ್ ತಂಡ ಬೆದರಿಕೆ ಹಾಕಿದ ಬೆನ್ನಲ್ಲೇ, ಎಸ್‍ಆರ್‍ಚ್ ಜತೆ ಎಚ್‍ಸಿಎ ಒಪ್ಪಂದಕ್ಕೆ ಬಂದಿದೆ.

ಟಿಕೆಟ್‍ಗಳು ಮತ್ತು ಪಾಸ್‍ಗಳ ಹಂಚಿಕೆಯಲ್ಲಿ ಬಿಸಿಸಿಐ ನೀಡಿರುವ ನಿಯಮಗಳಿಗೆ ಬದ್ಧ ಎಂದು ಎಚ್‍ಸಿಎ ಹೇಳಿದೆ. ಉಚಿತ ಪಾಸ್‍ಗಳ ವಿಚಾರದಲ್ಲಿ ಬ್ಲ್ಯಾಕ್‍ಮೇಲಿಂಗ್ ತಂತ್ರಗಳ ವಿರುದ್ಧ ಬಿಸಿಸಿಐ ಮತ್ತು ಐಪಿಎಲ್ ಮಂಡಳಿ ಮಧ್ಯಪ್ರವೇಶಿಸಬೇಕು ಎಂದು ಎಸ್‍ಆರ್‍ಎಚ್ ಆಗ್ರಹಿಸಿತ್ತು. "ಎಚ್‍ಸಿಎ ಜತೆಗೆ ಮತ್ತು ಸನ್‍ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ಬಗ್ಗೆ ನಡೆಯುತ್ತಿರುವ ಬ್ಲ್ಯಾಕ್‍ಮೇಲಿಂಗ್ ತಂತ್ರಗಳಿಗೆ ಸಂಬಂಧಿಸಿದಂತೆ ತೀವ್ರ ಕಳಕಳಿಯಿಂದ ಈ ಪತ್ರ ಬರೆಯುತ್ತಿದ್ದೇವೆ" ಎಂದು ಎಸ್‍ಆರ್ ಎಚ್ ಉನ್ನತ ಅಧಿಕಾರಿಯೊಬ್ಬರು ಇ-ಮೇಲ್ ಸಂದೇಶ ಕಳುಹಿಸಿದ್ದರು.

"ಈ ಸಮಸ್ಯೆಗಳು ಪುನರಾವರ್ತನೆಯಾಗುತ್ತಿವೆ ಹಾಗೂ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಈ ಬಗ್ಗೆ ತಕ್ಷಣ ಗಮನ ಹರಿಸುವ ಅಗತ್ಯವಿದೆ" ಎಂದು ವಿವರಿಸಿದ್ದರು. ಇದೀಗ ಎಸ್‍ಆರ್‍ಎಚ್ ಹಾಗೂ ಎಚ್‍ಸಿಎ ಜಂಟಿ ಹೇಳಿಕೆ ನೀಡಿ ಒಪ್ಪಂದಕ್ಕೆ ಬಂದಿರುವ ವಿಚಾರವನ್ನು ದೃಢಪಡಿಸಿವೆ.

"ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಎಸ್‍ಆರ್‍ಎಚ್ ಮತ್ತು ಎಚ್‍ಸಿಎ ನಡುವೆ ವಿವಾದಗಳು ಇವೆ ಎಂಬ ವರದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಎಚ್‍ಸಿಎ ಕಾರ್ಯದರ್ಶಿ ಆರ್.ದೇವರಾಜ್ ಅವರು ಎಸ್‍ಆರ್‍ಎಚ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಕಿರಣ್, ಸರವಣನ್ ಮತ್ತು ರೋಹಿತ್ ಸುರೇಶ್ ಎಚ್‍ಆರ್‍ಎಚ್ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು" ಎಂದು ಪ್ರಕಟಣೆ ಹೇಳಿದೆ.

ಈ ಮಾತುಕತೆ ವೇಳೆ ಹಾಲಿ ಇರುವ ಬಿಸಿಸಿಐ, ಎಸ್‍ಆರ್‍ಎಚ್ ಮತ್ತು ಎಚ್‍ಸಿಎ ತ್ರಿಪಕ್ಷೀಯ ಒಪ್ಪಂದವನ್ನು ಯಥಾವತ್ತಾಗಿ ಅನುಸರಿಸುವಂತೆ ಎಸ್‍ಆರ್‍ಎಚ್ ಪಟ್ಟು ಹಿಡಿದಿದೆ. ಈ ಮೂಲಕ ಲಭ್ಯವಿರುವ ಸ್ಟೇಡಿಯಂ ಸಾಮಥ್ರ್ಯದ ಪೈಕಿ ಶೇಕಡ 10ನ್ನು ಹಂಚಿಕೆ ಮಾಡುವಂತೆ ಆಗ್ರಹಿಸಿದೆ ಎಂದು ವಿವರಿಸಲಾಗಿದೆ.

ಪ್ರತಿ ವರ್ಗದಲ್ಲಿ ಲಭ್ಯವಿರುವ ಪಾಸ್‍ಗಳನ್ನು ಹಾಲಿ ಇರುವ ಹಂಚಿಕೆ ವಿಧಾನದಲ್ಲೇ ಮುಂದುವರಿಸಲು ಎಚ್‍ಸಿಎ ನಿರ್ಧರಿಸಿದೆ. ಹಲವು ವರ್ಷಗಳಿಂದ ನಡೆದು ಬಂದಿರುವ ಪದ್ಧತಿ ಮುಂಧುವರಿಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News