ಏರ್ ಇಂಡಿಯಾ ವಿಮಾನ ಪತನ | ತೋಳಿಗೆ ಕಪ್ಪುಪಟ್ಟಿ ಧರಿಸಿ ಗೌರವ ಸಲ್ಲಿಸಿದ ಭಾರತ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರರು
PC | X/@BCCI
ಹೊಸದಿಲ್ಲಿ: ಬೆಕೆನ್ ಹ್ಯಾಮ್ ನಲ್ಲಿ ಶುಕ್ರವಾರ ಇಂಟರ್‌ಸ್ಕ್ವಾ ಡ್ ಪ್ರಾಕ್ಟೀಸ್ ಪಂದ್ಯಕ್ಕಿಂತ ಮೊದಲು ಭಾರತೀಯ ಕ್ರಿಕೆಟ್ ಆಟಗಾರರು ಹಾಗೂ ಸಿಬ್ಬಂದಿ ವರ್ಗ ಏರ್ ಇಂಡಿಯಾ ವಿಮಾನ ಪತನದಿಂದ ಮೃತಪಟ್ಟವರಿಗೆ ಗೌರವ ಸಲ್ಲಿಸಲು ತೋಳಿಗೆ ಕಪ್ಪುಪಟ್ಟಿ ಧರಿಸಿ, ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿದರು.
ಗುರುವಾರ ಮಧ್ಯಾಹ್ನ ಅಹ್ಮದಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಅಹ್ಮದಾಬಾದ್ ಏರ್ ಪೋರ್ಟ್ ನಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳ ನಂತರ ಪತನಗೊಂಡಿದ್ದು, 242 ಪ್ರಯಾಣಿಕರು ಹಾಗೂ ಸಿಬ್ಬಂದಿ ವರ್ಗ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ ಕೇವಲ ಓರ್ವ ವ್ಯಕ್ತಿ ಬದುಕುಳಿದಿದ್ದು, ವೈದ್ಯಕೀಯ ಕಾಲೇಜಿನ ಹಾಸ್ಟೇಲ್ ಸಂಕೀರ್ಣದ ಮೇಲೆ ವಿಮಾನ ಬಿದ್ದ ಪರಿಣಾಮ ಮೃತಪಟ್ಟವರ ಸಂಖ್ಯೆ ಏರಿಕೆಯಾಗಿದೆ.
ವಿಮಾನ ಅಪಘಾತದಿಂದ ಮೃತಪಟ್ಟವರಿಗೆ ಕ್ರಿಕೆಟಿಗರು ಮಾತ್ರವಲ್ಲ, ಹಾಕಿ ಹಾಗೂ ದೇಶೀಯ ಲೀಗ್ ತಂಡಗಳು ಸಹಿತ ವಿಶ್ವ ಕ್ರೀಡಾಪಟುಗಳು ಗೌರವ ಸಲ್ಲಿಸಿದ್ದಾರೆ.
►ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರಿಂದ ಗೌರವ
ಶುಕ್ರವಾರ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೂರನೇ ದಿನದಾಟ ಆರಂಭವಾಗುವ ಮೊದಲೇ ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಿದರು.
ಹಲವು ಜೀವಗಳನ್ನು ಬಲಿ ಪಡೆದ ವಿಮಾನ ಪತನಗೊಂಡಿರುವ ಸುದ್ದಿ ಬಿತ್ತರವಾದ ನಂತರ ಇಡೀ ಕ್ರಿಕೆಟ್ ವಿಶ್ವವೇ ಆಘಾತಗೊಂಡಿದ್ದು, ಉಭಯ ತಂಡಗಳ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು.
ಸದ್ಯ ಇಂಗ್ಲೆಂಡ್‌ನಲ್ಲಿರುವ ಭಾರತೀಯ ಕ್ರಿಕೆಟ್ ತಂಡಗಳು ಬೆಕೆನ್‌ಹ್ಯಾಮ್ ನಲ್ಲಿ ಅಭ್ಯಾಸ ಪಂದ್ಯಕ್ಕಿಂತ ಮೊದಲು ಮೃತಪಟ್ಟವರಿಗೆ ಗೌರವ ಸಲ್ಲಿಸಿವೆ.
ಭಾರತದ ದೇಶೀಯ ಕ್ರಿಕೆಟ್‌ನಲ್ಲೂ ಈ ದುರಂತಕ್ಕೆ ಶೋಕ ವ್ಯಕ್ತವಾಗಿದೆ. ಮುಂಬೈನಲ್ಲಿ ಸೌತ್ ಸೆಂಟ್ರಲ್ ಮರಾಠ ರಾಯಲ್ಸ್ ಹಾಗೂ ಮುಂಬೈ ಫಾಲ್ಕನ್ಸ್ ತಂಡದ ಆಟಗಾರರು ಟಿ-20 ಮುಂಬೈ ಲೀಗ್ ಫೈನಲ್‌ಗಿಂತ ಮೊದಲು ಒಂದು ನಿಮಿಷ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಸಮರ್ಪಿಸಿದರು.
PC | X/@Cricketracker
ಎಫ್‌ಐಎಚ್ ಪ್ರೊ ಲೀಗ್ ಹಣಾಹಣಿಗಿಂತ ಮೊದಲು ಭಾರತ ಹಾಗೂ ಅರ್ಜೆಂಟೀನ ತಂಡದ ಆಟಗಾರರು ಶ್ರದ್ದಾಂಜಲಿ ಸಮರ್ಪಿಸಿದರು.
ಅಂತರ್‌ರಾಷ್ಟ್ರೀಯ ಹಾಕಿ ಸಂಘಟನೆಯು ಸಾಮಾಜಿಕ ಮಾಧ್ಯಮದ ಮೂಲಕ ತನ್ನ ಸಂತಾಪ ವ್ಯಕ್ತಪಡಿಸಿದೆ.
ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಿಂದ ಹಿಡಿದು ಹಾಕಿ ಮೈದಾನಗಳು ಹಾಗೂ ಸ್ಥಳೀಯ ಲೀಗ್‌ಗಳ ತನಕ ಕ್ರೀಡಾ ಸಮುದಾಯವು ವಿಮಾನ ದುರಂತದ ಬಗ್ಗೆ ಮಾನವೀಯತೆ ಹಾಗೂ ಸಹಾನುಭೂತಿ ವ್ಯಕ್ತಪಡಿಸಿವೆ.