×
Ad

ಶುಭಮನ್ ಗಿಲ್ ಗಿಂತ ರವೀಂದ್ರ ಜಡೇಜ ಹೆಚ್ಚು ಸ್ಥಿರ ಪ್ರದರ್ಶನ ನೀಡಿದ್ದಾರೆ: ಅಜಯ್ ಜಡೇಜ

Update: 2025-08-08 22:08 IST

ರವೀಂದ್ರ ಜಡೇಜ | PC : PTI  

ಹೊಸದಿಲ್ಲಿ, ಆ.8: ಇತ್ತೀಚೆಗೆ ಕೊನೆಗೊಂಡಿರುವ ಇಂಗ್ಲೆಂಡ್ ತಂಡದ ವಿರುದ್ಧ 516 ರನ್ ಹಾಗೂ 7 ವಿಕೆಟ್ ಗಳನ್ನು ಕಬಳಿಸುವ ಮೂಲಕ ಅಮೋಘ ಆಲ್ರೌಂಡ್ ಪ್ರದರ್ಶನದಿಂದ ಗಮನ ಸೆಳೆದಿದ್ದ ರವೀಂದ್ರ ಜಡೇಜರನ್ನು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜ ಶ್ಲಾಘಿಸಿದ್ದಾರೆ.

754 ರನ್ ಗಳಿಸಿ ಐದು ಪಂದ್ಯಗಳ ಸರಣಿಯನ್ನು 2-2ರಿಂದ ಡ್ರಾಗೊಳಿಸುವಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದ ನಾಯಕ ಶುಭಮನ್ ಗಿಲ್ ಗಿಂತ ಜಡೇಜ ಅವರು ಹೆಚ್ಚು ಸ್ಥಿರ ಪ್ರದರ್ಶನ ನೀಡಿದ್ದಾರೆ ಎಂದು ಜಡೇಜ ಬೆಟ್ಟು ಮಾಡಿದ್ದಾರೆ.

ನಾಯಕನಾಗಿ ಶುಭಮನ್ ಗಿಲ್ ಇಂಗ್ಲೆಂಡ್ ನಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದಾರೆ. ಭಾರತ ತಂಡವು ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳಲ್ಲಿ ಜಯ ಸಾಧಿಸುವಲ್ಲಿ ಭಾರತ ತಂಡದ ನೇತೃತ್ವವಹಿಸಿದ್ದ ಗಿಲ್ ಒಟ್ಟು 754 ರನ್ ಗಳಿಸಿ ‘ಸರಣಿಶ್ರೇಷ್ಠ’ಪ್ರಶಸ್ತಿಯನ್ನು ಇಂಗ್ಲೆಂಡ್ ನ ಹ್ಯಾರಿ ಬ್ರೂಕ್ಸ್ ರೊಂದಿಗೆ ಹಂಚಿಕೊಂಡಿದ್ದರು.

ಇಂಗ್ಲೆಂಡ್ ತಂಡದ ಪಿಚ್ ಸ್ಪಿನ್ನರ್ ಗಳ ಸ್ನೇಹಿಯಾಗಿರದೆ ಇದ್ದರೂ ಜಡೇಜ ಅವರು ಬ್ಯಾಟ್ ಹಾಗೂ ಬಾಲ್ ನಲ್ಲಿ ಕೊಡುಗೆ ನೀಡುವಲ್ಲಿ ಶಕ್ತರಾಗಿದ್ದರು. 516 ರನ್ ಹಾಗೂ 7 ವಿಕೆಟ್ ಗಳನ್ನು ಪಡೆದು ಸರಣಿಯಲ್ಲಿ ಎರಡನೇ ಗರಿಷ್ಠ ವಿಕೆಟ್ ಪಡೆದ ಸ್ಪಿನ್ನರ್ ಎನಿಸಿಕೊಂಡಿದ್ದರು.

‘‘ಜಡೇಜ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಶುಭಮನ್ ಗಿಲ್ 754 ರನ್ ಗಳಿಸಿದ್ದಾರೆ. ರವೀಂದ್ರ ಜಡೇಜ ಕೂಡ ಸುಮಾರು 550 ರನ್ ಗಳಿಸಿದ್ದಾರೆ. ಜಡೇಜ ಅವರು ಗಿಲ್ ಗಿಂತ ಹೆಚ್ಚು ಸ್ಥಿರ ಪ್ರದರ್ಶನ ನೀಡಿದ್ದಾರೆ. ಇಡೀ ಸರಣಿಯಲ್ಲಿ ಎರಡು ಇನಿಂಗ್ಸ್ ಗಳಲ್ಲಿ ಮಾತ್ರ ಜಡೇಜ ಬೇಗನೆ ಔಟಾಗಿದ್ದರು’’ ಎಂದು ‘ಸೋನಿ ಸ್ಪೋರ್ಟ್ಸ್’ಗೆ ಅಜಯ್ ತಿಳಿಸಿದ್ದಾರೆ.

‘‘ಸಾಂಪ್ರದಾಯಿಕವಾಗಿ ಇಂಗ್ಲೆಂಡ್ ನ ಪಿಚ್ಗಳು ವೇಗದ ಬೌಲರ್ ಗಳು ಹಾಗೂ ಬ್ಯಾಟರ್ ಗಳ ಸ್ನೇಹಿಯಾಗಿರುತ್ತದೆ. ಜಡೇಜ ಬಹುತೇಕ ಪಂದ್ಯಗಳಲ್ಲಿ ರನ್ ಗಳಿಸುವ ಜೊತೆಗೆ ಬೌಲಿಂಗ್ ನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಒತ್ತಡದ ಪರಿಸ್ಥಿತಿಯಲ್ಲಿ ರನ್ ಗಳಿಸಿದ್ದಾರೆ. ಇದು ತಂಡಕ್ಕೆ ಅವರ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ’’ಎಂದು ಅಜಯ್ ಅಭಿಪ್ರಾಯಪಟ್ಟರು.

ಭಾರತ-ಇಂಗ್ಲೆಂಡ್ ತಂಡಗಳ ನಡುವಿನ ಸರಣಿಯು 2-2ರಿಂದ ಸಮಬಲಗೊಂಡಿದ್ದು, ಶುಭಮನ್ ಗಿಲ್ ಹಾಗೂ ರವೀಂದ್ರ ಜಡೇಜ ಅವರು ಭಾರತದ ಯಶಸ್ವಿ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News