ಅಜಿಂಕ್ಯ ರಹಾನೆ ರಾಜೀನಾಮೆ; ಮುಂಬೈ ರಣಜಿ ತಂಡಕ್ಕೆ ಶಾರ್ದೂಲ್ ಠಾಕೂರ್ ನಾಯಕ
ಅಜಿಂಕ್ಯ ರಹಾನೆ | PC : PTI
ಮುಂಬೈ, ಆ.21: ಮುಂಬೈ ಕ್ರಿಕೆಟ್ ತಂಡವು 2025-26ರ ರಣಜಿ ಟ್ರೋಫಿ ಋತುವಿನಲ್ಲಿ ನೂತನ ನಾಯಕನೊಂದಿಗೆ ಆಡಲಿದೆ.
ಭಾರತದ ಹಿರಿಯ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ ಅವರೊಂದಿಗೆ ತನ್ನನ್ನು ಕೂಡ ಮುಂಬರುವ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮವಲಯ ತಂಡದಿಂದ ನಿರ್ಲಕ್ಷಿಸಿದ ಮೂರು ವಾರಗಳ ನಂತರ ಅಜಿಂಕ್ಯ ರಹಾನೆ ಅವರು ಗುರುವಾರ ಮುಂಬೈ ರಣಜಿ ಟ್ರೋಫಿ ನಾಯಕನ ಸ್ಥಾನ ತ್ಯಜಿಸಲು ನಿರ್ಧರಿಸಿದ್ದಾರೆ.
2023-24ರ ಋತುವಿನಲ್ಲಿ ತನ್ನ 42ನೇ ರಣಜಿ ಟ್ರೋಫಿ ಪ್ರಶಸ್ತಿ ಗೆದ್ದಿರುವ ಹಾಗೂ 2024-25ರ ಋತುವಿನಲ್ಲಿ ಸೆಮಿ ಫೈನಲ್ ಗೆ ತಲುಪಿದ್ದ ಮುಂಬೈ ಕ್ರಿಕೆಟ್ ತಂಡದ ನಾಯಕತ್ವವನ್ನು ರಹಾನೆ ವಹಿಸಿದ್ದರು.
ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯದ ನಾಯಕನಾಗಿರುವ, ಭಾರತದ ಟೆಸ್ಟ್ ಆಲ್ ರೌಂಡರ್ ಶಾರ್ದುಲ್ ಠಾಕೂರ್ ಅಜಿಂಕ್ಯ ರಹಾನೆ ರಾಜೀನಾಮೆಯಿಂದ ತೆರವಾಗಿರುವ ಮುಂಬೈ ರಣಜಿ ತಂಡದ ನಾಯಕತ್ವವಹಿಸುವ ನೆಚ್ಚಿನ ಆಟಗಾರನಾಗಿದ್ದಾರೆ.
ಬಿಳಿ ಚೆಂಡಿನ ಪಂದ್ಯಾವಳಿಗಳಾದ-ಸಯ್ಯದ್‌ಮುಷ್ತಾಕ್ ಅಲಿ ಟಿ-20 ಟ್ರೋಫಿ ಹಾಗೂ ವಿಜಯ್ ಹಝಾರೆ ಟ್ರೋಫಿ ಟೂರ್ನಿಗಳಲ್ಲಿ ಮುಂಬೈ ತಂಡದ ನಾಯಕತ್ವವಹಿಸಿದ್ದ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ನಾಯಕತ್ವದ ರೇಸ್ ನಲ್ಲಿದ್ದಾರೆ.
ಶ್ರೇಯಸ್ ಕಳೆದ ಋತುವಿನಲ್ಲಿ ಮುಂಬೈ ತಂಡವು ಸಯ್ಯದ್‌ಮುಷ್ತಾಕ್ ಅಲಿ ಟಿ-20 ಟ್ರೋಫಿ ಗೆಲ್ಲಲು ನಾಯಕತ್ವವಹಿಸಿದ್ದರು. 2025ರ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಫೈನಲ್‌ಗೆ ತಲುಪುವಲ್ಲಿಯೂ ಪ್ರಧಾನ ಪಾತ್ರವಹಿಸಿದ್ದರು. ಕೋಲ್ಕತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ನಾಯಕತ್ವವಹಿಸಿದ್ದರು.
ಗುರುವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸಿದ 37ರ ಹರೆಯದ ರಹಾನೆ, ‘‘ಮುಂಬೈ ತಂಡದ ನಾಯಕತ್ವವಹಿಸಿಕೊಳ್ಳುವುದು ಹಾಗೂ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವುದು ಗೌರವದ ಸಂಗತಿ.ಹೊಸ ದೇಶೀಯ ಋತುವಿನೊಂದಿಗೆ ಹೊಸ ನಾಯಕನನ್ನು ನೇಮಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ, ಹೀಗಾಗಿ ನಾನು ನಾಯಕನಾಗಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ’’ಎಂದು ಬರೆದಿದ್ದಾರೆ.
ಹಿರಿಯ ಬ್ಯಾಟರ್ ರಹಾನೆ ಅವರು ಮುಂಬೈ ಕ್ರಿಕೆಟ್ ತಂಡದಲ್ಲಿ ಆಟಗಾರನಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ.
2024-25 ಋತುವಿನಲ್ಲಿ ಮುಂಬೈ ತಂಡವನ್ನು ನಾಯಕನಾಗಿ ಸೆಮಿ ಫೈನಲ್‌ಗೆ ತಲುಪಿಸಿದ್ದ ರಹಾನೆ 9 ಪಂದ್ಯಗಳಲ್ಲಿ 35.92ರ ಸರಾಸರಿಯಲ್ಲಿ 1 ಶತಕ ಹಾಗೂ 1 ಅರ್ಧಶತಕ ಸಹಿತ 467 ರನ್ ಗಳಿಸಿದ್ದರು.
2023-24ರ ಋತುವಿನಲ್ಲಿ ಮುಂಬೈ ತಂಡವು 7 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವಲ್ಲಿ ನಾಯಕತ್ವವಹಿಸಿದ್ದ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇರಾನಿ ಕಪ್ ಪ್ರಶಸ್ತಿ ಜಯಿಸಲು ನೆರವಾದ ಹೊರತಾಗಿಯೂ ರಹಾನೆ 8 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ ಕೇವಲ 214 ರನ್ ಗಳಿಸಿ ಸ್ವತಃ ಕಳಪೆ ಫಾರ್ಮ್ ನಲ್ಲಿದ್ದರು.