×
Ad

ಅರ್ಧಶತಕ ಗಳಿಸಿ ದಾಖಲೆ ನಿರ್ಮಿಸಿದ ಆಕಾಶ್ ದೀಪ್

Update: 2025-08-02 21:27 IST

ಆಕಾಶ್ ದೀಪ್ | PC : PTI

ಲಂಡನ್, ಆ.2: ದ ಓವಲ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ 3ನೇ ದಿನದಾಟವಾದ ಶನಿವಾರ ನೈಟ್ ವಾಚ್‌ಮ್ಯಾನ್ ಆಗಿ ಬ್ಯಾಟಿಂಗ್‌ಗೆ ಇಳಿದಿರುವ ಆಕಾಶ್ ದೀಪ್ ಅವರು ತನ್ನ ಚೊಚ್ಚಲ ಅರ್ಧಶತಕ(66 ರನ್) ಗಳಿಸಿದ್ದಲ್ಲದೆ, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಜೊತೆಗೆ ಶತಕದ ಜೊತೆಯಾಟ ನಡೆಸಿ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು.

ಆಕಾಶ್‌ದೀಪ್ ಹಾಗೂ ಜೈಸ್ವಾಲ್ 3ನೇ ವಿಕೆಟ್‌ ಗೆ 107 ರನ್ ಸೇರಿಸಿದ್ದು, ಬೆಳಗ್ಗಿನ ಅವಧಿಯಲ್ಲಿ ಭಾರತ ತಂಡ 2ನೇ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸುವಲ್ಲಿ ನೆರವಾದರು.

ಆಕಾಶ್-ಯಶಸ್ವಿ ನಡುವಿನ ಜೊತೆಯಾಟವು ಇತಿಹಾಸದ ಪುಟ ಸೇರಿದೆ. ಇದು ಪ್ರಸಕ್ತ ಸರಣಿಯಲ್ಲಿ ಭಾರತದ ಆಟಗಾರರು ಗಳಿಸಿದ 18ನೇ ಶತಕದ ಜೊತೆಯಾಟವಾಗಿದೆ. ಈ ಶತಮಾನದಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ಶತಕದ ಜೊತೆಯಾಟ ದಾಖಲಾಗಿದೆ.

2003-04ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ದಾಖಲಾಗಿದ್ದ ಗರಿಷ್ಠ ಜೊತೆಯಾಟದ(17)ದಾಖಲೆಯು ಪತನವಾಗಿದೆ.

94 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 66 ರನ್ ಗಳಿಸಿದ ಆಕಾಶ್ ಅವರ ಇನಿಂಗ್ಸ್‌ಗೆ ಜೆಮಿ ಓವರ್ಟನ್ 43ನೇ ಓವರ್‌ ನಲ್ಲಿ ಕೊನೆಗೂ ತೆರೆ ಎಳೆದರು. ಆಕಾಶ್ ಔಟಾಗಿದ್ದರೂ ಅವರ ಬ್ಯಾಟಿಂಗ್ ಮಹತ್ವ ಪಡೆದಿದೆ.

ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದ ಆಕಾಶ್ ಅವರು 2011ರ ನಂತರ ಟೆಸ್ಟ್ ಪಂದ್ಯದಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ ಭಾರತದ ಮೊದಲ ನೈಟ್‌ವಾಚ್‌ಮ್ಯಾನ್ ಆಗಿದ್ದಾರೆ. 2011ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧವೇ ಸ್ಪಿನ್ನರ್ ಅಮಿತ್ ಮಿಶ್ರಾ 84 ರನ್ ಗಳಿಸಿದ್ದರು.

ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ ನಲ್ಲಿ ಅರ್ಧಶತಕವನ್ನು ಗಳಿಸಿದ ಆಕಾಶ್ ಭಾರತದ ಪ್ರಮುಖ ಆಟಗಾರರನ್ನು ಮೀರಿಸಿದ್ದಾರೆ. ಶಿಖರ್ ಧವನ್(14 ಇನಿಂಗ್ಸ್‌ಗಳಲ್ಲಿ 0), ರವಿಚಂದ್ರನ್ ಅಶ್ವಿನ್(14 ಇನಿಂಗ್ಸ್‌ಗಳಲ್ಲಿ 0)ಹಾಗೂ ಗೌತಮ್ ಗಂಭೀರ್(10 ಇನಿಂಗ್ಸ್‌ಗಳಲ್ಲಿ 0)ಅವರಿಂತ ಹೆಚ್ಚು 50 ಪ್ಲಸ್ ಸ್ಕೋರ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News