‘ನನ್ನ ಬಗ್ಗೆ ಚಿಂತಿಸದೆ, ಭಾರತಕ್ಕಾಗಿ ಉತ್ತಮವಾಗಿ ಆಡು’ ಎಂದಿದ್ದ ಆಕಾಶ್ ದೀಪ್ ಸಹೋದರಿ ಜ್ಯೋತಿ ಸಿಂಗ್
ಆಕಾಶ್ ದೀಪ್, ಸಹೋದರಿ ಜ್ಯೋತಿ ಸಿಂಗ್ | Courtesy: India Today OR X \ @Cricketadd75277
ಹೊಸದಿಲ್ಲಿ: ಎಜ್ ಬಾಸ್ಟನ್ ನಲ್ಲಿ ತನ್ನ ಸಹೋದರನ ವೀರೋಚಿತ ಪ್ರದರ್ಶನಕ್ಕೆ ಭಾರತದ ವೇಗದ ಬೌಲರ್ ಆಕಾಶ್ ದೀಪ್ ಅವರ ಸಹೋದರಿ ಅಖಂಡ ಜ್ಯೋತಿ ಸಿಂಗ್ ಅವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು. ಇಂಗ್ಲೆಂಡ್ ವಿರುದ್ಧ ತನ್ನ ಅಮೋಘ ಪ್ರದರ್ಶನವನ್ನು ಆಕಾಶ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವ ತನ್ನ ಸಹೋದರಿಗೆ ಸಮರ್ಪಿಸಿದ್ದಾರೆ.
‘ಆಜ್‌ತಕ್’ ಟವಿ ವಾಹಿನಿಯೊಂದಿಗೆ ಮಾತನಾಡಿದ ಜ್ಯೋತಿ, ‘‘ಆಕಾಶ್ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮೊದಲು ಅವನೊಂದಿಗೆ ನಾನು ಮಾತನಾಡಿದ್ದು, ನನ್ನ ಆರೋಗ್ಯದ ಬಗ್ಗೆ ಚಿಂತಿಸದೆ, ದೇಶಕ್ಕಾಗಿ ಅಡುವತ್ತ ಹೆಚ್ಚು ಗಮನ ನೀಡು ಎಂದು ಹೇಳಿದ್ದೆ. ಆಕಾಶ್ ಪ್ರದರ್ಶನದಿಂದ ನನಗೆ ತುಂಬಾ ಖುಷಿಯಾಗಿದೆ. ಇಂತಹ ಕಠಿಣ ಸಮಯದಲ್ಲಿ ಆತನ ಪ್ರದರ್ಶನವು ಇಡೀ ಕುಟುಂಬಕ್ಕೆ ಸಂತಸವನ್ನು ತಂದಿದೆ’’ ಎಂದರು.
‘‘ಆಕಾಶ್ 10 ವಿಕೆಟ್‌ಗಳನ್ನು ಪಡೆದಿರುವುದು ಭಾರತಕ್ಕೆ ಹೆಮ್ಮೆಯ ವಿಚಾರ. ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಮೊದಲು ಆಕಾಶ್ ನನ್ನು ಏರ್‌ಪೋರ್ಟ್ ನಲ್ಲಿ ಭೇಟಿಯಾಗಲು ಬಯಸಿದ್ದೆ. ನಾನು ಚೆನ್ನಾಗಿದ್ದೇನೆ.ನನಗೆ ಬಗ್ಗೆ ಚಿಂತಿಸಬೇಡ, ದೇಶಕ್ಕಾಗಿ ಉತ್ತಮವಾಗಿ ಪ್ರದರ್ಶನ ನೀಡು ಎಂದು ಕಿವಿಮಾತು ಹೇಳಿದ್ದೆ. ನಾನು ಕಾನ್ಸರ್ ನ 3ನೇ ಹಂತದಲ್ಲಿದ್ದೇನೆ. ಇನ್ನೂ 6 ತಿಂಗಳು ಚಿಕಿತ್ಸೆ ಮುಂದುವರಿಯಲಿದೆ ಎಂದು ವೈದ್ಯರು ಹೇಳಿದ್ದಾರೆ’’ಎಂದು ಜ್ಯೋತಿ ಹೇಳಿದರು.
‘‘ಆಕಾಶ್ ವಿಕೆಟ್ ಪಡೆದಾಗಲೆಲ್ಲಾ ನಾನು ತುಂಬಾ ಖುಷಿಪಡುತ್ತಿದ್ದೆ. ಆತ ವಿಕೆಟ್ ಪಡೆದಾಗಲೆಲ್ಲಾ ನಾವೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದೆವು. ಕಾಲನಿಯ ನೆರೆಮನೆಯವರು ಏನಾಯಿತು ಎಂದು ನಮ್ಮನ್ನು ಕೇಳಿದ್ದರು’’ ಎಂದು ಜ್ಯೋತಿ ಹೇಳಿದರು.
‘‘ನಾನು ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಚಾರವನ್ನು ಸಾರ್ವಜನಿಕವಾಗಿ ಚರ್ಚಿಸಲು ನನಗೆ ಇಷ್ಟವಿರಲಿಲ್ಲ. ಆಕಾಶ್ ಈಗಾಗಲೇ ಗ್ಲೋಬಲ್ ಟಿವಿಯಲ್ಲಿ ಈ ಮಾಹಿತಿ ನೀಡಿದ್ದು ನನಗೆ ಗೊತ್ತಿಲ್ಲ. ಪಂದ್ಯದ ನಂತರ ಸಂದರ್ಶನದಲ್ಲಿ ಭಾವುಕರಾದ ಆಕಾಶ್ ತನ್ನ 10 ವಿಕೆಟ್ ಗೊಂಚಲನ್ನು ನನಗೆ ಅರ್ಪಿಸಿದ್ದಾನೆ. ಇದು ಆತ ಕುಟುಂಬವನ್ನು ಎಷ್ಟೊಂದು ಪ್ರೀತಿಸುತ್ತಿದ್ದಾನೆ ಎಂಬುದರ ದ್ಯೋತಕವಾಗಿದೆ. ಮನೆಯಲ್ಲಿನ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಆತ ಶ್ರೇಷ್ಠ ಪ್ರದರ್ಶನ ನೀಡಿ ವಿಕೆಟ್ ಪಡೆದಿದ್ದಾನೆ’’, ಎಂದು ಜ್ಯೋತಿ ಹೇಳಿದರು.
‘‘ರವಿವಾರ 2ನೇ ಟೆಸ್ಟ್ ಪಂದ್ಯ ಗೆದ್ದ ನಂತರ ಆಕಾಶ್ ಎರಡು ಬಾರಿ ವೀಡಿಯೊ ಕಾಲ್ ಮಾಡಿದ್ದು, ಚಿಂತಿಸಬೇಡ, ಇಡೀ ದೇಶವೇ ನಮ್ಮೊಂದಿಗೆ ಇದೆ ಎಂದಿದ್ದ. ಆತ ನನಗೆ ಹೇಳದೆ ಏನೂ ಮಾಡುವುದಿಲ್ಲ, ಆತ ಕುಟುಂಬದೊಂದಿಗೆ ಎಲ್ಲವನ್ನು ಹಂಚಿಕೊಳ್ಳುತ್ತಾನೆ. ನಮ್ಮ ತಂದೆ ಹಾಗೂ ಹಿರಿಯ ಸಹೋದರ ಮೃತಪಟ್ಟ ನಂತರ ಇಡೀ ಕುಟುಂಬನ್ನು ಕಿರಿಯ ಮಗನಾದ ಆತನೇ ನೋಡಿಕೊಳ್ಳುತ್ತಿದ್ದಾನೆ’’ ಎಂದು ಜ್ಯೋತಿ ಹೇಳಿದರು.
ಬಿಹಾರ ಮೂಲದ ಆಕಾಶ್‌ದೀಪ್ ಕ್ರಿಕೆಟ್ ಬದುಕನ್ನು ಕಟ್ಟಿಕೊಂಡಿದ್ದು ಕೋಲ್ಕತಾದಲ್ಲಿ. ಉತ್ತಮ ಲೆಂಗ್ತ್ ನಲ್ಲಿ ಚೆಂಡನ್ನು ವೇಗವಾಗಿ ಹಾಗೂ ಸ್ವಿಂಗ್‌ನೊಂದಿಗೆ ಎಸೆಯುವ ಆಕಾಶ್ ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ನಿಧಾನವಾಗಿ ಪ್ರಮುಖ ಬೌಲರ್ ಆಗಿ ಬೆಳೆಯುತ್ತಿದ್ದಾರೆ. ಈ ತನಕ 8 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಕಾಶ್ 3.80ರ ಇಕಾನಮಿ ರೇಟ್‌ನಲ್ಲಿ ಒಟ್ಟು 25 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ ಲಕ್ನೊ ತಂಡದ ಪರ 6 ಪಂದ್ಯಗಳನ್ನು ಆಡಿದ್ದ ಆಕಾಶ್ ಕೇವಲ 3 ವಿಕೆಟ್‌ಗಳನ್ನು ಪಡೆದಿದ್ದರು. ಐಪಿಎಲ್ ನಡೆಯುತ್ತಿದ್ದಾಗಲೇ ಅವರ ಸಹೋದರಿ ಜ್ಯೋತಿ ಕ್ಯಾನ್ಸರ್‌ಗೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದರು.