×
Ad

‘ದಯವಿಟ್ಟು ನಿವೃತ್ತಿಯಾಗಬೇಡಿ, ನಿಮ್ಮ ಅಗತ್ಯ ಟೀಮ್ ಇಂಡಿಯಾಕ್ಕಿದೆ’: ವಿರಾಟ್ ಕೊಹ್ಲಿಗೆ ಅಂಬಟಿ ರಾಯುಡು ವಿನಂತಿ

Update: 2025-05-10 22:19 IST

ವಿರಾಟ್ ಕೊಹ್ಲಿ | PTI

ಹೊಸದಿಲ್ಲಿ: ಟೆಸ್ಟ್ ಕ್ರಿಕೆಟ್‌ ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಅವರು ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಇಚ್ಛೆಯನ್ನು ಕೊಹ್ಲಿ ಅವರು ವ್ಯಕ್ತಪಡಿಸಿದ್ದಾರೆ. ಅವರ ಈ ನಡೆಯಿಂದ ಭಾರತೀಯ ಕ್ರಿಕೆಟ್ ಸಮುದಾಯದಲ್ಲಿ ಸಂಚಲನ ಮೂಡಿದೆ ಎಂದು ಆಂಗ್ಲಪತ್ರಿಕೆ ವರದಿ ಮಾಡಿದೆ.

‘‘ವಿರಾಟ್ ಕೊಹ್ಲಿ ಅವರೇ ದಯವಿಟ್ಟು ನೀವು ನಿವೃತ್ತಿಯಾಗಬೇಡಿ, ಟೀಮ್‌ ಇಂಡಿಯಾಕ್ಕೆ ನಿಮ್ಮ ಅವಶ್ಯಕತೆ ಎಂದಿಗಿಂತಲೂ ಹೆಚ್ಚು ಇದೆ. ನಿಮ್ಮ ಬಳಿ ಇನ್ನೂ ಹೆಚ್ಚಿನ ಸಾಮರ್ಥ್ಯವಿದೆ. ನೀವು ಟೀಮ್ ಇಂಡಿಯಾದ ಪರ ಹೋರಾಡದೆ ಇದ್ದರೆ ಟೆಸ್ಟ್ ಕ್ರಿಕೆಟ್ ಮೊದಲಿನಂತೆ ಇರುವುದಿಲ್ಲ. ದಯವಿಟ್ಟು ಮತ್ತೊಮ್ಮೆ ಯೋಚಿಸಿ...’’ ಎಂದು ರಾಯುಡು ತಮ್ಮ ಎಕ್ಸ್ ಹ್ಯಾಂಡಲ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೊಹ್ಲಿ ಅವರು 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ದಶಕಕ್ಕೂ ಹೆಚ್ಚು ಸಮಯದಿಂದ ಟೆಸ್ಟ್ ಕ್ರಿಕೆಟಿನಲ್ಲಿ ಭಾರತದ ಸಾಧನೆಗೆ ಪ್ರಮುಖ ಪಾತ್ರವಹಿಸಿದ್ದರು. ತನ್ನ ಆಕ್ರಮಣಕಾರಿ ನಾಯಕತ್ವ, ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಭಾರತ ಕ್ರಿಕೆಟ್ ತಂಡವು ದೇಶ ಹಾಗು ವಿದೇಶಗಳಲ್ಲಿ ಟೆಸ್ಟ್ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಲು ನೆರವಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 9,000ಕ್ಕೂ ಅಧಿಕ ರನ್ ಹಾಗೂ 30 ಶತಕಗಳನ್ನು ಗಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಕುರಿತಂತೆ ವಿರಾಟ್ ಕೊಹ್ಲಿ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಟೆಸ್ಟ್ ಕ್ರಿಕೆಟ್‌ ನಲ್ಲಿ ಮುಂದುವರಿಯುವಂತೆ ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ಕೊಹ್ಲಿ ಅವರಲ್ಲಿ ವಿನಂತಿಸಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬುಧವಾರ ದಿಢೀರನೆ ಟೆಸ್ಟ್ ಕ್ರಿಕೆಟ್‌ ನಿಂದ ನಿವೃತ್ತಿಯಾಗಿದ್ದರು.

ಕಳೆದ ವರ್ಷ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸದ ನಂತರ ರವಿಚಂದ್ರನ್ ಅಶ್ವಿನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News