ಅಮೆರಿಕನ್ ಓಪನ್ | ಮೊದಲ ಸುತ್ತಿನಲ್ಲೇ ಮುಗ್ಗಿರಿಸಿದ ಸುಮಿತ್ ನಾಗಲ್
PC:olympics
ನ್ಯೂಯಾರ್ಕ್ : ಈ ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಅಮೆರಿಕನ್ ಓಪನ್‌ನ ಮೊದಲ ಸುತ್ತಿನಲ್ಲಿ ಸೋತಿರುವ ಭಾರತದ ಸುಮಿತ್ ನಾಗಲ್ ಭಾರೀ ನಿರಾಸೆಗೊಳಿಸಿದ್ದಾರೆ.
ಸೋಮವಾರ ರಾತ್ರಿ ಎರಡು ಗಂಟೆ, 20 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸುಮಿತ್ ಅವರು ನೆದರ್‌ಲ್ಯಾಂಡ್ಸ್‌ನ ಟ್ಯಾಲನ್ ಗ್ರೀಕ್‌ಸ್ಪೂರ್ ವಿರುದ್ಧ 1-6, 3-6, 6-7(8) ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಪಂದ್ಯದುದ್ದಕ್ಕೂ ಸುಮಿತ್ ತನ್ನ ಎದುರಾಳಿಯ ಸರ್ವ್ ಅನ್ನು ಎರಡು ಬಾರಿ ತುಂಡರಿಸಿದರು. ಸುಮಿತ್ ಎರಡನೇ ಸೆಟ್‌ನಲ್ಲಿ 3-5ರಿಂದ ಹಿನ್ನಡೆಯಲ್ಲಿದ್ದಾಗ ತುಂತುರು ಮಳೆ ಪಂದ್ಯಕ್ಕೆ ಅಡ್ಡಿಯಾಯಿತು. ಸುಮಿತ್ ವಿರಾಮದ ನಂತರ ಉತ್ತಮ ಹೋರಾಟವನ್ನು ನೀಡಿದರು.
ಸಿಂಗಲ್ಸ್ ವಿಭಾಗದಲ್ಲೂ ಸೋತಿದ್ದರೂ ಸುಮಿತ್ ಯುಎಸ್ ಓಪನ್‌ನಲ್ಲಿ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ, ಯೂಕಿ ಭಾಂಬ್ರಿ, ಶ್ರೀರಾಮ್ ಬಾಲಾಜಿ ಹಾಗೂ ಸುಮಿತ್ ನಾಗಲ್ ವಿಭಿನ್ನ ಜೊತೆಗಾರರೊಂದಿಗೆ ಆಡಲಿದ್ದಾರೆ.
► ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಶುಭಾರಂಭ
ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ರಾಡು ಅಲ್ಬೊಟ್ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಜಯಶಾಲಿಯಾಗಿರುವ ಹಾಲಿ ಚಾಂಪಿಯನ್ ಸರ್ಬಿಯದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಎರಡು ವಾರಗಳ ಹಿಂದೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನಾಲ್ಕು ಬಾರಿಯ ಚಾಂಪಿಯನ್ ಜೊಕೊಕೊವಿಕ್ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಮೊಲ್ಡೊವನ್‌ನ ಕ್ವಾಲಿಫೈಯರ್ ಅಲ್ಬೊಟ್‌ರನ್ನು 6-2, 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.
ಈ ವರ್ಷ ಆಸ್ಟ್ರೇಲಿಯನ್ ಹಾಗೂ ಫ್ರೆಂಚ್ ಓಪನ್ ಪ್ರಶಸ್ತಿಗಳಿಂದ ವಂಚಿತರಾಗಿದ್ದ 37ರ ಹರೆಯದ ಜೊಕೊವಿಕ್‌ಗೆ 138ನೇ ರ್ಯಾಂಕಿನ ಆಟಗಾರ ಅಲ್ಬೊಟ್ ಹೆಚ್ಚು ಸವಾಲಾಗಲಿಲ್ಲ.
ನಾಲ್ಕನೇ ಶ್ರೇಯಾಂಕದ ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಅವರು ಮ್ಯಾಕ್ಸಿಮಿಲನ್ ಮಾರ್ಟರ್‌ರನ್ನು 6-2, 6-7(5/7), 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದರು.
ಆರನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೆವ್ ಬ್ರೆಝಿಲ್‌ನ ಥಿಯಾಗೊ ಸೆಬೊತ್ ವೈಲ್ಡ್‌ರನ್ನು 6-3, 7-6(7/3), 7-5 ಅಂತರದಿಂದ ಮಣಿಸಿದರೆ, 8ನೇ ಶ್ರೇಯಾಂಕದ ನಾರ್ವೆಯ ಕಾಸ್ಪರ್ ರೂಡ್ ಅವರು ಚೀನಾದ ಯುನ್‌ಚೊಕೆಟ್‌ರನ್ನು 7-6(7/2), 6-2, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು.
ರೂಡ್ ಅವರು ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಹಿರಿಯ ಅಟಗಾರ ಮೊನ್‌ಫಿಲ್ಸ್‌ರನ್ನು ಎದುರಿಸಲಿದ್ದಾರೆ. ಮೊನ್‌ಫಿಲ್ಸ್ ಅವರು ಅರ್ಜೆಂಟೀನದ ಡಿಯಾಗೊ ಸ್ಚೆವರ್ಟ್‌ಮನ್‌ರನ್ನು 6-7(2/7), 6-2, 6-2, 6-1 ಸೆಟ್‌ಗಳ ಅಂತರದಿಂದ ಮಣಿಸಿದರು.
►ಕ್ರೆಜ್ಸಿಕೋವಾ, ಝೆಂಗ್, ಗೌಫ್ ಗೆಲುವಿನಾರಂಭ
ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಆಗಿರುವ ಬಾರ್ಬೊರ ಕ್ರೆಜ್ಸಿಕೋವಾ ಸ್ಪೇನ್‌ನ ಕ್ವಾಲಿಫೈಯರ್ ಮರಿನಾ ಬಸೊಲ್ಸ್‌ರನ್ನು 7-6(7/3), 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಎರಡನೇ ಸುತ್ತಿಗೆ ತೇರ್ಗಡೆಯಾದರು.
ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದ ಚೀನಾದ ಝೆಂಗ್ ಕ್ವಿನ್‌ವೆನ್ ಅವರು ಅಮಂಡಾ ಅನಿಸಿಮೋವಾರನ್ನು 4-6, 6-4, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಅಮೆರಿಕದ ಮೂರನೇ ಶ್ರೇಯಾಂಕದ ಆಟಗಾರ್ತಿ ಕೊಕೊ ಗೌಫ್ ಯುಎಸ್ ಓಪನ್‌ನಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ಕೇವಲ 66 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಗೌಫ್ ಅವರು 66ನೇ ರ್ಯಾಂಕಿನ ವರ್ವರಾ ಗ್ರಚೆವಾರನ್ನು 6-2, 6-0 ಸೆಟ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ತನ್ನಲ್ಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟರು.