ಎಲ್ಲ ಮಾದರಿಗಳ ಕ್ರಿಕೆಟ್ ನಿಂದ ಅಮಿತ್ ಮಿಶ್ರಾ ವಿದಾಯ
ಅಮಿತ್ ಮಿಶ್ರಾ | PTI
ಹೊಸದಿಲ್ಲಿ,ಸೆ.4: ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರ ಅಮಿತ್ ಮಿಶ್ರಾ, ಕ್ರೀಡೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ತನ್ನ ವೃತ್ತಿಪರ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ.
42ರ ವಯಸ್ಸಿನ ಮಿಶ್ರಾ ಅವರು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ 22 ಟೆಸ್ಟ್, 36 ಏಕದಿನ ಹಾಗೂ 10 ಟಿ-20 ಪಂದ್ಯಗಳನ್ನು ಆಡಿದ್ದರು. ಈ ಮೂರು ಪ್ರಕಾರದ ಪಂದ್ಯಗಳಲ್ಲಿ ಕ್ರಮವಾಗಿ 76, 64 ಹಾಗೂ 16 ವಿಕೆಟ್‌ಗಳನ್ನು ಪಡೆದಿದ್ದರು.
ಪದೇ ಪದೇ ಕಾಡುತ್ತಿರುವ ಗಾಯದ ಸಮಸ್ಯೆಗಳಿಂದಾಗಿ ತಾನು ನಿವೃತ್ತಿಯಾಗುತ್ತಿರುವೆ ಎಂದು ಗುರುವಾರ ಪ್ರಕಟಿಸಿರುವ ಮಿಶ್ರಾ ಅವರು, ಹೊಸ ಕ್ರಿಕೆಟಿಗರಿಗೆ ಅವಕಾಶಗಳನ್ನು ಸೃಷ್ಟಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
‘‘ನನ್ನ ಕ್ರಿಕೆಟ್ ಜೀವನದ ಈ 25 ವರ್ಷಗಳು ಸ್ಮರಣೀಯವಾಗಿದ್ದವು. ಇಷ್ಟೊಂದು ವರ್ಷಗಳ ಕಾಲ ನನ್ನೊಂದಿಗಿದ್ದ ಬಿಸಿಸಿಐ, ಆಡಳಿತ ವರ್ಗ, ಹರ್ಯಾಣ ಕ್ರಿಕೆಟ್ ಸಂಸ್ಥೆ, ಸಹಾಯಕ ಸಿಬ್ಬಂದಿ, ನನ್ನ ಸಹೋದ್ಯೋಗಿಗಳು ಹಾಗೂ ನನ್ನ ಕುಟುಂಬ ಸದಸ್ಯರಿಗೆ ನಾನು ಸಂಪೂರ್ಣ ಕೃತಜ್ಞನಾಗಿದ್ದೇನೆ’’ ಎಂದು ಮಿಶ್ರಾ ಹೇಳಿದರು.
‘‘ನಾನು ಆಡಿದ ಎಲ್ಲ ಕಡೆಗಳಲ್ಲೂ ನನ್ನ ಪ್ರಯಾಣವನ್ನು ಸ್ಮರಣೀಯವಾಗಿಸಿದ ಕ್ರಿಕೆಟ್ ಅಭಿಮಾನಿಗಳ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಧನ್ಯವಾದ ಹೇಳಲು ಬಯಸುವೆ. ಕ್ರಿಕೆಟ್ ನನಗೆ ಅಸಂಖ್ಯಾತ ನೆನಪುಗಳನ್ನು ಹಾಗೂ ಅಮೂಲ್ಯವಾದ ಪಾಠಗಳನ್ನು ಕಲಿಸಿದೆ. ಮೈದಾನದಲ್ಲಿನ ಪ್ರತೀ ಕ್ಷಣವೂ ಜೀವನಪರ್ಯಂತ ನೆನಪಿನಲ್ಲಿ ಉಳಿಯಲಿದೆ’’ ಎಂದು ಮಿಶ್ರಾ ಹೇಳಿದರು.
ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯನ್ನು ಆಡುವ ಮೂಲಕ 2003ರಲ್ಲಿ ಮಿಶ್ರಾ ಅವರ ಅಂತರ್‌ರಾಷ್ಟ್ರೀಯ ವೃತ್ತಿಜೀವನ ಆರಂಭವಾಯಿತು. 2008ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ತನ್ನ ಮೊದಲ ಟೆಸ್ಟ್ ಪಂದ್ಯವನ್ನಾಡಿದರು. ಆ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದರು.
2013ರಲ್ಲಿ ಝಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 18 ವಿಕೆಟ್ ಗಳನ್ನು ಪಡೆದಿದ್ದ ಮಿಶ್ರಾ ಅವರು ಜಾವಗಲ್ ಶ್ರೀನಾಥ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು. 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಟೂರ್ನಿಯಲ್ಲೂ ಭಾಗವಹಿಸಿದ್ದರು. ಅಲ್ಲಿ ಅವರು 10 ವಿಕೆಟ್‌ಗಳನ್ನು ಪಡೆದಿದ್ದು, ಭಾರತವು 2ನೇ ಸ್ಥಾನ ಪಡೆದಿತ್ತು.
2017ರಲ್ಲಿ ತನ್ನ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ ನಂತರ ಮಿಶ್ರಾ ಅವರು ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಆಡುವುದನ್ನು ಮುಂದುವರಿಸಿದರು. 2024ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಲಕ್ನೊ ಸೂಪರ್ ಜಯಂಟ್ಸ್ ಪರ ಕೊನೆಯ ಪಂದ್ಯ ಆಡಿದ್ದರು.
ಐಪಿಎಲ್ ಟೂರ್ನಿಯಲ್ಲಿ 162 ಪಂದ್ಯಗಳನ್ನು ಆಡಿರುವ ಮಿಶ್ರಾ ಒಟ್ಟು 174 ವಿಕೆಟ್‌ಗಳನ್ನು ಪಡೆದಿದ್ದರು. ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಏಕೈಕ ಬೌಲರ್ ಆಗಿದ್ದಾರೆ.
2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, 2011ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ 2013ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಪರ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಗಳನ್ನು ಪಡೆದಿದ್ದರು.
ಯುವ ಆಟಗಾರರಿಗೆ ತರಬೇತಿ, ಮಾರ್ಗದರ್ಶನ ಹಾಗೂ ವೀಕ್ಷಕ ವಿವರಣೆ ನೀಡುವ ಮೂಲಕ ಕ್ರಿಕೆಟ್‌ನೊಂದಿಗೆ ಸಂಪರ್ಕದಲ್ಲಿರಲು ಮಿಶ್ರಾ ಯೋಜಿಸಿದ್ದಾರೆ.