ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅಮಿತಾ ಶರ್ಮಾ ನೇಮಕ
ರಾಷ್ಟ್ರೀಯ ಆಯ್ಕೆ ಸಮಿತಿಗೆ ಪ್ರಗ್ಯಾನ್ ಓಜಾ, ಆರ್.ಪಿ. ಸಿಂಗ್ ಸೇರ್ಪಡೆ
ಅಮಿತಾ ಶರ್ಮಾ | PC : X
ಮುಂಬೈ, ಸೆ.28: ಭಾರತದ ಮಾಜಿ ಕ್ರಿಕೆಟ್ ಆಟಗಾರ್ತಿ ಅಮಿತಾ ಶರ್ಮಾ ಭಾರತೀಯ ಮಹಿಳೆಯರ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಸಿಸಿಐನ ವಾರ್ಷಿಕ ಮಹಾಸಭೆಯ ವೇಳೆಯ ಈ ಆಯ್ಕೆ ನಡೆದಿದೆ.
ಅಮಿತಾ ಅವರು ಐದು ಟೆಸ್ಟ್ ಹಾಗೂ 116 ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಸಾಕಷ್ಟು ಅನುಭವ ಪಡೆದಿದ್ದಾರೆ.
ಹೊಸತಾಗಿ ರಚಿಸಲ್ಪಟ್ಟಿರುವ ಮಹಿಳೆಯರ ಆಯ್ಕೆ ಸಮಿತಿಗೆ ಅಮಿತಾ ಅವರೊಂದಿಗೆ ಭಾರತದ ಮಾಜಿ ಆಟಗಾರ್ತಿಯರಾದ ಶ್ಯಾಮಾ ಡೇ, ಸುಲಕ್ಷಣ ನಾಯಕ್, ಜಯಾ ಶರ್ಮಾ ಹಾಗೂ ಶ್ರಾವಂತಿ ನಾಯ್ಡು ಸೇರ್ಪಡೆಯಾಗಿದ್ದಾರೆ. ಈ ಎಲ್ಲ ಆಟಗಾರ್ತಿಯರು ಭಾರತೀಯ ಮಹಿಳಾ ಕ್ರಿಕೆಟಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಪ್ರಗ್ಯಾನ್ ಓಜಾ ಹಾಗೂ ಆರ್.ಪಿ. ಸಿಂಗ್ ಹಿರಿಯ ಪುರುಷರ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರುಗಳಾಗಿ ನೇಮಕಗೊಂಡಿದ್ದಾರೆ. ಎಸ್. ಶರತ್ ಹಾಗೂ ಸುಬ್ರತೊ ಬ್ಯಾನರ್ಜಿ ಅವರಿಂದ ತೆರವಾದ ಸ್ಥಾನ ತುಂಬಿದ್ದಾರೆ.
ಪುನರ‌್ರಚಿತ ಪುರುಷರ ಆಯ್ಕೆ ಸಮಿತಿಯಲ್ಲಿ ಇದೀಗ ಅಜಿತ್ ಅಗರ್ಕರ್(ಅಧ್ಯಕ್ಷರು), ಶಿವ ಸುಂದರ್ ದಾಸ್, ಅಜಯ್ ರಾತ್ರಾ, ಆರ್.ಪಿ. ಸಿಂಗ್ ಹಾಗೂ ಪ್ರಗ್ಯಾನ್ ಓಜಾ ಅವರಿದ್ದಾರೆ.
ಎಡಗೈ ವೇಗದ ಬೌಲರ್ ಆರ್.ಪಿ. ಸಿಂಗ್ 14 ಟೆಸ್ಟ್, 58 ಏಕದಿನ ಹಾಗೂ 10 ಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 2007ರಲ್ಲಿ ಭಾರತ ತಂಡವು ಟಿ-20 ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಎಡಗೈ ಸ್ಪಿನ್ನರ್ ಓಜಾ 24 ಟೆಸ್ಟ್, 18 ಏಕದಿನ ಹಾಗೂ 6 ಟಿ-20 ಪಂದ್ಯಗಳಲ್ಲಿ ಆಡಿದ್ದು, ಎಂ.ಎಸ್. ಧೋನಿ ನಾಯಕತ್ವದಲ್ಲಿ ಹಲವು ಸ್ಮರಣೀಯ ಗೆಲುವುಗಳ ಭಾಗವಾಗಿದ್ದರು.
ಇದೇ ವೇಳೆ ಕೇರಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯೇಶ್ ಜಾರ್ಜ್ ಅವರನ್ನು ಮಹಿಳೆಯರ ಪ್ರೀಮಿಯರ್ ಲೀಗ್‌ನ(ಡಬ್ಲ್ಯುಪಿಎಲ್) ಮೊತ್ತ ಮೊದಲ ಅಧ್ಯಕ್ಷರಾಗಿ ನೇಮಿಸಲಾಗಿದೆ.