×
Ad

ಹನುಮ ವಿಹಾರಿಗೆ ಶೋಕಾಸ್ ನೋಟಿಸ್ ನೀಡಿದ ಆಂಧ್ರ ಕ್ರಿಕೆಟ್ ಅಸೋಸಿಯೇಶನ್

Update: 2024-03-28 21:27 IST

ಹನುಮ ವಿಹಾರಿ | Photo: X 

ಬೆಂಗಳೂರು : ಆಂಧ್ರ ಕ್ರಿಕೆಟ್ ಅಸೋಸಿಯೇಶನ್ ನನ್ನನ್ನು ಅಗೌರವಯುತವಾಗಿ ನಾಯಕತ್ವದಿಂದ ತೆಗೆದಿದೆ ಹಾಗೂ ಆ ರಾಜ್ಯದ ಪರವಾಗಿ ನಾನು ಇನ್ನು ಆಡುವುದಿಲ್ಲ ಎಂಬ ಹೇಳಿಕೆ ನೀಡಿದ ಒಂದು ತಿಂಗಳ ಬಳಿಕ, ಕ್ರಿಕೆಟಿಗ ಹನುಮ ವಿಹಾರಿಗೆ ಅಸೋಸಿಯೇಶನ್ ಶೋಕಾಸ್ ನೋಟಿಸ್ ನೀಡಿದೆ.

ಕೆಲವು ದಿನಗಳ ಹಿಂದೆ ನಡೆದ ಅಸೋಸಿಯೇಶನ್ನ ಆಡಳಿತ ಮಂಡಳಿ ಸಭೆಯ ಬಳಿಕ, ಶೋಕಾಸ್ ನೋಟಿಸ್ ನೀಡಲಾಗಿದೆ. ಆದರೆ ಕ್ರಿಕೆಟಿಗ ಅದಕ್ಕೆ ಈವರೆಗೆ ಉತ್ತರ ನೀಡಿಲ್ಲ.

‘‘ಹೌದು, ನಾವು ಅವರಿಗೆ ಶೋಕಾಸ್ ನೋಟಿಸೊಂದನ್ನು ಜಾರಿಗೊಳಿಸಿದ್ದೇವೆ. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ’’ ಎಂದು ಅಸೋಸಿಯೇಶನ್ನ ಅಧಿಕಾರಿಯೊಬ್ಬರು ತಿಳಿಸಿದರು.

ಆದರೆ, ಈ ವಿಷಯವನ್ನು ಮುಂದುವರಿಸಲು ಅಸೋಸಿಯೇಶನ್ ಬಯಸುವುದಿಲ್ಲ ಎಂಬುದಾಗಿಯೂ ಅವರು ಹೇಳಿದರು.

‘‘ಅವರು ಕಳೆದ ತಿಂಗಳು ಹಾಗೆ ವರ್ತಿಸಲು ಏನು ಕಾರಣ ಎನ್ನುವುದನ್ನು ತಿಳಿಯುವುದಕ್ಕಾಗಿ ಮಾತ್ರ ಈ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರು ನಮ್ಮೊಂದಿಗೆ ಮಾತನಾಡಿಲ್ಲ. ಹಾಗಾಗಿ, ಅವರ ಅಸಮಾಧಾನವನ್ನು ತೋಡಿಕೊಳ್ಳಲು ಇದೊಂದು ಅವರಿಗೆ ಅವಕಾಶವಾಗಿದೆ’’ ಎಂದರು.

‘‘ಏನಿದ್ದರೂ, ನಾವು ವಿಹಾರಿಗೆ ಗೌರವ ನೀಡುತ್ತೇವೆ. ರಾಜ್ಯದ ಕ್ರಿಕೆಟ್ನ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಯನ್ನು ಗುರುತಿಸುತ್ತೇವೆ. ದೇಶಿ ಕ್ರಿಕೆಟ್ನಲ್ಲಿ ಆಂಧ್ರ ಮೇಲೇರುವಲ್ಲಿ ಅವರು ದೊಡ್ಡ ಪಾತ್ರ ನಿಭಾಯಿಸಿದ್ದಾರೆ’’ ಎಂದರು.

ಈ ವರ್ಷದ ರಣಜಿ ಟ್ರೋಫಿ ಪಂದ್ಯಾವಳಿಯ ಕ್ವಾರ್ಟರ್ಫೈನಲ್ನಲ್ಲಿ ಮಧ್ಯಪ್ರದೇಶದ ವಿರುದ್ಧ ಆಂಧ್ರ ಸೋತ ಬಳಿಕ ಅನಪೇಕ್ಷಿತ ಘಟನೆಗಳು ಒಂದರ ನಂತರ ಒಂದರಂತೆ ನಡೆದವು.

ಆಂಧ್ರದ ಋತುವಿನ ಮೊದಲ ಪಂದ್ಯ ಬಂಗಾಳದ ವಿರುದ್ಧ ನಡೆದಿತ್ತು. ಆ ಪಂದ್ಯ ಮುಗಿದ ಕೂಡಲೇ ಆಂಧ್ರ ಕ್ರಿಕೆಟ್ ಮಂಡಳಿಯು ನನ್ನಿಂದ ನಾಯಕತ್ವವನ್ನು ಕಿತ್ತುಕೊಂಡಿತು ಎಂದು 30 ವರ್ಷದ ಆಟಗಾರ ಆರೋಪಿಸಿದರು.

ಆದರೆ, ರಾಜೀನಾಮೆಯಲ್ಲಿ ‘‘ವೈಯಕ್ತಿಕ ಕಾರಣಗಳಿಗಾಗಿ’’ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಬಳಿಕ, ಸ್ಥಳೀಯ ರಾಜಕಾರಣಿಯೊಬ್ಬನ ಒತ್ತಡಕ್ಕೆ ಒಳಗಾಗಿ ಅಸೋಸಿಯೇಶನ್ ನನ್ನ ವಿರುದ್ಧ ಕ್ರಮ ತೆಗೆದುಕೊಂಡಿದೆ ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಆರೋಪಿಸಿದ್ದರು. ಹುನುಮ ವಿಹಾರಿ ನನಗೆ ಕೆಟ್ಟ ಮಾತುಗಳಿಂದ ಬೈದರು ಎಂಬುದಾಗಿ ಆ ರಾಜಕಾರಣಿಯ ಮಗ ಹಾಗೂ ತಂಡದ 17ನೇ ಕ್ರಮಾಂಕದ ಆಟಗಾರನೊಬ್ಬ ದೂರಿದ ಬಳಿಕ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News