×
Ad

ಭಾರತ-ಪಾಕಿಸ್ತಾನ ಸೂಪರ್-4 ಪಂದ್ಯಕ್ಕೆ ಮತ್ತೊಮ್ಮೆ ಮ್ಯಾಚ್ ರೆಫರಿಯಾಗಿ ಆಯ್ಕೆಯಾದ ಪೈಕ್ರಾಫ್ಟ್

Update: 2025-09-20 22:06 IST

ಆ್ಯಂಡಿ ಪೈಕ್ರಾಫ್ಟ್‌ | PC : @ICC

ದುಬೈ, ಸೆ.20: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ನಡೆಯಲಿರುವ ಏಶ್ಯ ಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಮ್ಯಾಚ್ ರೆಫರಿಯಾಗಿ ಆ್ಯಂಡಿ ಪೈಕ್ರಾಫ್ಟ್‌ರನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ರವಿವಾರ ನೇಮಕ ಮಾಡಿದೆ.

ಸೆ.14ರಂದು ನಡೆದಿದ್ದ ಭಾರತ ವಿರುದ್ಧದ ಗ್ರೂಪ್ ಪಂದ್ಯದ ವೇಳೆ ಪೈಕ್ರಾಫ್ಟ್ ನಡವಳಿಕೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆರೋಪಿಸಿತ್ತು. ವಿವಾದಕ್ಕೆ ಸಿಲುಕಿರುವ ಹೊರತಾಗಿಯೂ ಪೈಕ್ರಾಫ್ಟ್‌ರನ್ನು ಮತ್ತೊಮ್ಮೆ ಪಂದ್ಯದ ರೆಫರಿಯಾಗಿ ನೇಮಿಸಲಾಗಿದೆ.

ಈ ಹಿಂದಿನ ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ಸಲ್ಮಾನ್ ಅಲಿಗೆ ಹಸ್ತಲಾಘವ ಮಾಡದಂತೆ ಸೂಚನೆ ನೀಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಪೈಕ್ರಾಫ್ಟ್‌ರನ್ನು ಏಶ್ಯ ಕಪ್‌ನಲ್ಲಿ ಮ್ಯಾಚ್ ರೆಫರಿ ಸ್ಥಾನದಿಂದ ತೆಗೆದು ಹಾಕಬೇಕೆಂಬ ಪಿಸಿಬಿ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ.

ಮ್ಯಾಚ್ ರೆಫರಿಯ ವಿಚಾರವನ್ನು ಮುಂದಿಟ್ಟುಕೊಂಡು ಪಿಸಿಬಿ ಪಂದ್ಯಾವಳಿಯಿಂದ ಹೊರಗುಳಿಯುವ ಬೆದರಿಕೆಯನ್ನು ಹಾಕಿತ್ತು. ಯುಎಇ ವಿರುದ್ಧ ನಡೆದ ಏಶ್ಯ ಕಪ್ ಪಂದ್ಯದಲ್ಲಿ ಒಂದು ಗಂಟೆ ತಡವಾಗಿ ಮೈದಾನಕ್ಕೆ ಆಗಮಿಸಿತ್ತು. ಐಸಿಸಿ, ಪಿಸಿಬಿ ಹಾಗೂ ಏಶ್ಯನ್ ಕ್ರಿಕೆಟ್ ಮಂಡಳಿ(ಎಸಿಸಿ)ನಡುವಿನ ಯಶಸ್ವಿ ಮಾತುಕತೆಯ ನಂತರ ಪಾಕ್ ತಂಡವು ಯುಎಇ ವಿರುದ್ಧ ಪಂದ್ಯವನ್ನು ಆಡಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಸೂಪರ್-4 ಹಂತಕ್ಕೇರಿತು.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಹಿಂದೆ ಆಡಿದ್ದ ಮೈದಾನದಲ್ಲೇ ಸೂಪರ್-4 ಪಂದ್ಯ ನಡೆಯಲಿದೆ. ವಿವಾದದಿಂದ ಸುತ್ತುವರಿದಿದ್ದ ಈ ಪಂದ್ಯ ಕೊನೆಗೊಂಡ ನಂತರ ಪಾಕಿಸ್ತಾನಿ ನಾಯಕ ಸಲ್ಮಾನ್ ಅಲಿ ಪತ್ರಿಕಾಗೋಷ್ಠಿಗೆ ಗೈರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News