ಬುಮ್ರಾ, ಸುದರ್ಶನ್ ಗಾಯಗೊಂಡ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ

Update: 2026-08-12 20:53 IST

ಜಸ್‌ಪ್ರೀತ್ ಬುಮ್ರಾ  | Photo Credit : PTI 

ಕೊಲಂಬೊ, ಆ. 12: ಈಗಾಗಲೇ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಇನ್ನೊಂದು ಹೊಡೆತ ಎದುರಾಗಿದೆ. ಗಾಯಾಳುಗಳಾಗಿರುವ ಜಸ್‌ಪ್ರೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ಮುಂಬರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಈಗಾಗಲೇ ಹೊರಬಿದ್ದಿದ್ದರೆ, ವಾಶಿಂಗ್ಟನ್ ಸುಂದರ್ ಕೂಡ ಎರಡನೇ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ವರದಿಯಾಗಿದೆ. ಕಳೆದ ತಿಂಗಳು ಭಾರತದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಕಾಲಿನ ಗಾಯಕ್ಕೆ ಒಳಗಾಗಿದ್ದ ಅವರು ಸಮಯಕ್ಕೆ ಸರಿಯಾಗಿ ಚೇತರಿಸಿಕೊಂಡಿಲ್ಲ. ಹಾಗಾಗಿ, ಈ ಸ್ಪಿನ್-ಬೌಲಿಂಗ್ ಆಲ್-ರೌಂಡರ್ ಈಗಾಗಲೇ ಮೊದಲ ಪಂದ್ಯದಿಂದ ಹೊರಬಿದ್ದಿದ್ದರು. ಎರಡನೇ ಪಂದ್ಯಕ್ಕೆ ಅವರ ಲಭ್ಯತೆಯು ಅವರ ದೈಹಿಕ ಕ್ಷಮತೆಯನ್ನು ಅವಲಂಬಿಸಿತ್ತು.

ತಂಡವು ಅನೇಕ ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಸುಂದರ್ ವಿಚಾರದಲ್ಲಿ ಯಾವುದೇ ಅಪಾಯವನ್ನು ಆಹ್ವಾನಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಯಸುತ್ತಿಲ್ಲ ಎನ್ನಲಾಗಿದೆ.

ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಬಳಲುತ್ತಿರುವ ಸುಂದರ್ ಪ್ರಸ್ತುತ ಭಾರತದಲ್ಲೇ ಇದ್ದು, ಬಿಸಿಸಿಐಯ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ)ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಎರಡನೇ ಟೆಸ್ಟ್‌ಗೂ ಮುನ್ನ ಶ್ರೀಲಂಕಾದಲ್ಲಿ ತಂಡವನ್ನು ಸೇರಿಕೊಳ್ಳುವ ಅವರ ಸಾಧ್ಯತೆಗಳು ಬಹಳ ಕ್ಷೀಣವಾಗಿವೆ ಎಂದು ಮೂಲವೊಂದು ತಿಳಿಸಿದೆ. ಮುಂದಿನ ವಾರ ಅವರ ಗಾಯದ ಸಂಪೂರ್ಣ ಮೌಲ್ಯಮಾಪನ ನಡೆಸಲಾಗುವುದು ಎಂದು ಅದು ಹೇಳಿದೆ.

ಇದಕ್ಕೂ ಮುನ್ನ, ಬಲಗಾಲ ಹೆಬ್ಬೆರಳಿನ ನೋವಿನಿಂದ ಬಳಲುತ್ತಿರುವ ಭಾರತದ ಬ್ಯಾಟರ್ ಸುದರ್ಶನ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಅವರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ವೈದ್ಯಕೀಯ ಉಸ್ತುವಾರಿಯಲ್ಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಅವರ ಬದಲಿಗೆ ಸರ್ಫರಾಜ್ ಖಾನ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ಎಡ ಮೊಣಕಾಲಿಗೆ ಆಗಿರುವ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಹಿರಿಯ ವೇಗಿ ಬುಮ್ರಾ ಕೂಡ ಸರಣಿಯಿಂದ ಹೊರಬಿದ್ದಿದ್ದಾರೆ. ಹಿರಿಯ ವೇಗದ ಬೌಲರ್ ಬದಲಿಗೆ ಅಕಿಬ್ ನಬಿ ಅವರನ್ನು ಬಿಸಿಸಿಐ ಪುರುಷರ ಆಯ್ಕೆ ಸಮಿತಿಯು ತಂಡಕ್ಕೆ ಆಯ್ಕೆ ಮಾಡಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 15ರಂದು ಗಾಲೆಯಲ್ಲಿ ಮತ್ತು ಎರಡನೇ ಪಂದ್ಯವು ಆಗಸ್ಟ್ 23ರಂದು ಕೊಲಂಬೊದಲ್ಲಿ ಆರಂಭಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News