ಗುಜರಾತ್ ಟೈಟನ್ಸ್ ನತ್ತ ಮತ್ತೆ ಹಾರ್ದಿಕ್ ಪಾಂಡ್ಯ ಚಿತ್ತ!

ತಂಡ ಸೇರ್ಪಡೆಗೆ ನಾಯಕತ್ವದ ಷರತ್ತು ಅಡ್ಡಿ: ವರದಿ

Update: 2026-08-12 15:26 IST

ಹಾರ್ದಿಕ್ ಪಾಂಡ್ಯ | Photo Credit : BCCI/PTI

ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತೆ ತಮ್ಮ ಹಿಂದಿನ ತಂಡ ಗುಜರಾತ್ ಟೈಟನ್ಸ್ ಗೆ ಮರಳುತ್ತಾರೆ ಎಂಬ ಊಹಾಪೋಹ ಕೇಳಿ ಬಂದಿದೆ. ಆದರೆ, ತನ್ನನ್ನು ಮತ್ತೆ ಗುಜರಾತ್ ಟೈಟನ್ಸ್ ತಂಡದ ನಾಯಕನನ್ನಾಗಿ ಮರು ನೇಮಕ ಮಾಡಬೇಕು ಎಂಬ ಅವರ ಷರತ್ತು ಅವರನ್ನು ಮತ್ತೆ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ತೊಡಕುಂಟು ಮಾಡಿದೆ ಎಂದು ವರದಿಯಾಗಿದೆ.

The Indian Express ಸುದ್ದಿ ಸಂಸ್ಥೆಯ ಪ್ರಕಾರ, ಹಾರ್ದಿಕ್ ಪಾಂಡ್ಯರನ್ನು ಮತ್ತೆ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಗುಜರಾತ್ ಟೈಟನ್ಸ್ ಫ್ರಾಂಚೈಸಿ ಮುಕ್ತವಾಗಿದ್ದು, ಈ ಕುರಿತು ಹಾಲಿ ನಾಯಕ ಶುಭಮನ್ ಗಿಲ್ ರೊಂದಿಗೂ ಚರ್ಚೆ ನಡೆಸಿದೆ ಎನ್ನಲಾಗಿದೆ. ಹಾರ್ದಿಕ್ ಪಾಂಡ್ಯರನ್ನು ಮತ್ತೆ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಒಲವು ಹೊಂದಿರುವ ಗುಜರಾತ್ ಟೈಟನ್ಸ್, ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಲು ಸಮ್ಮತಿ ಸೂಚಿಸಿದೆ ಎನ್ನಲಾಗಿದೆ. ಆದರೆ, ಅವರ ನಾಯಕತ್ವದ ಬೇಡಿಕೆ ಕಗ್ಗಂಟಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳುವುದರ ಕುರಿತು ಗುಜರಾತ್ ಟೈಟನ್ಸ್ ಗೆ ಯಾವುದೇ ಆಕ್ಷೇಪವಿಲ್ಲ. ಈ ಕುರಿತು ಹಾಲಿ ನಾಯಕ ಶುಭಮನ್ ಗಿಲ್ ರೊಂದಿಗೂ ಗುಜರಾತ್ ಟೈಟನ್ಸ್ ಫ್ರಾಂಚೈಸಿ ಚರ್ಚೆ ನಡೆಸಿದ್ದು, ಅವರೂ ಕೂಡಾ ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆದರೆ, ನಾಯಕತ್ವದ ಷರತ್ತನ್ನು ಮುಂದಿಟ್ಟಾಗ, ಎಲ್ಲರೂ ಅದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಮೂಲವೊಂದು ತಿಳಿಸಿದೆ ಎಂದು ವರದಿಯಾಗಿದೆ.

ಗುಜರಾತ್ ಟೈಟನ್ಸ್ ನ ಚೊಚ್ಚಲ ಐಪಿಎಲ್ ಋತುವಾದ 2022ರಲ್ಲಿ ತಂಡವನ್ನು ಸೇರ್ಪಡೆಯಾಗಿದ್ದ ಹಾರ್ದಿಕ್ ಪಾಂಡ್ಯರನ್ನು ತಕ್ಷಣವೇ ತಂಡದ ನಾಯಕರನ್ನಾಗಿಯೂ ನೇಮಕ ಮಾಡಲಾಗಿತ್ತು. ಅವರ ನಾಯಕತ್ವ ಹಾಗೂ ಮುಖ್ಯ ಕೋಚ್ ಆಗಿದ್ದ ಆಶಿಶ್ ನೆಹ್ರಾ ನೇತೃತ್ವದಲ್ಲಿ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಅಭಿಯಾನದಲ್ಲೇ ಐಪಿಎಲ್ ಟ್ರೋಫಿ ಜಯಿಸಿತ್ತು. ಆದರೆ, 2023ರಲ್ಲಿ ಹಾರ್ದಿಕ್ ಪಾಂಡ್ಯ ದಿಢೀರನೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದಾಗಲೂ, ನಂತರದ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡ ಫೈನಲ್ ಪ್ರವೇಶಿಸಿತ್ತು.

ರೋಹಿತ್ ಶರ್ಮ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ, ಗುಜರಾತ್ ತಂಡಕ್ಕೆ ತಂದುಕೊಟ್ಟ ಯಶಸ್ಸನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ತಂದುಕೊಡುವಲ್ಲಿ ವಿಫಲರಾದರು. ಅವರ ನಾಯಕತ್ವದಲ್ಲಿ ಕಳೆದ ಮೂರು ಋತುವಿನಲ್ಲಿ ಕೇವಲ ಒಂದು ಬಾರಿ ಮಾತ್ರ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ಹಂತ ತಲುಪಿದ್ದರೆ, ಹಾರ್ದಿಕ್ ಪಾಂಡ್ಯ ಕೂಡಾ ಕಳಪೆ ಫಾರ್ಮ್ ಪ್ರದರ್ಶಿಸಿದ್ದರು. ಈ ಮೂರೂ ಋತುವಿನಲ್ಲಿ 25ಕ್ಕಿಂತ ಕಡಿಮೆ ರನ್ ಸರಾಸರಿಯಲ್ಲಿ 225 ರನ್ ಮಾತ್ರ ಕಲೆ ಹಾಕಿದ್ದರು. ಆದರೆ, ಅವರ ಸ್ಟ್ರೈಕ್ ರೇಟ್ ಮಾತ್ರ 150ರ ಆಸುಪಾಸಿನಲ್ಲಿತ್ತು ಹಾಗೂ ಅವರು 29 ವಿಕೆಟ್ ಗಳನ್ನು ಕಿತ್ತಿದ್ದರು.

ಒಂದು ವೇಳೆ ಹಾರ್ದಿಕ್ ಪಾಂಡ್ಯರೇನಾದರೂ ಗುಜರಾತ್ ಟೈಟನ್ಸ್ ತಂಡ ಸೇರ್ಪಡೆಯಾದರೆ, ಗುಜರಾತ್ ಟೈಟನ್ಸ್ ನ ಮೊದಲ ಎರಡು ಋತುವಿನಲ್ಲಿ ಅವರಡಿ ಆಡಿದ್ದ ಶುಭಮನ್ ಗಿಲ್ ಹಾಗೂ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಸೇರಿದಂತೆ ಹಲವು ಚಿರಪರಿಚಿತ ಮುಖಗಳು ಮತ್ತೆ ಒಂದುಗೂಡಿದಂತಾಗಲಿದೆ. ಆದರೆ, ಶುಭಮನ್ ಗಿಲ್ ಈಗ ಭಾರತ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕರಾಗಿರುವುದರಿಂದ, ಹಾರ್ದಿಕ್ ಪಾಂಡ್ಯರ ನಾಯಕತ್ವದ ಷರತ್ತನ್ನು ಒಪ್ಪಿಕೊಳ್ಳುವುದು ಗುಜರಾತ್ ಟೈಟನ್ಸ್ ಪಾಲಿಗೆ ಕಠಿಣವಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News