ಸಿಂಕ್‌ಫೀಲ್ಡ್ ಕಪ್ | ಜವೊಖಿರ್ ಸಿಂಡರೋವ್‌ರನ್ನು ಸೋಲಿಸಿದ ಪ್ರಜ್ಞಾನಂದ

Update: 2026-08-12 21:07 IST

ಪ್ರಜ್ಞಾನಂದ | Photo Credit : PTI 

ಸೇಂಟ್ ಲೂಯಿಸ್ (ಅಮೆರಿಕ), ಆ. 12: ಅಮೆರಿಕದ ಸೇಂಟ್ ಲೂಯಿಸ್‌ನಲ್ಲಿ ನಡೆಯುತ್ತಿರುವ ಸಿಂಕ್‌ಫೀಲ್ಡ್ ಕಪ್ 2026 ಚೆಸ್ ಪಂದ್ಯಾವಳಿಯಲ್ಲಿ, ಭಾರತದ ಗ್ರಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ತನ್ನ ಪ್ರಭಾವಶಾಲಿ ಆಟವನ್ನು ಮುಂದುವರಿಸಿದ್ದಾರೆ. ಅವರು ಎರಡನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧಿ ಜವೊಖಿರ್ ಸಿಂಡರೋವ್ ಅವರನ್ನು ಸೋಲಿಸಿ ಅಂಕಪಟ್ಟಿಯಲ್ಲಿ ಜಂಟಿ ಮುನ್ನಡೆ ಸಾಧಿಸಿದ್ದಾರೆ.

ಹೆಚ್ಚಿನ ಅವಧಿಯಲ್ಲಿ ಸಮಬಲವನ್ನು ಕಂಡ ಸುದೀರ್ಘ ಸ್ಪರ್ಧೆಯಲ್ಲಿ, ಅಂತಿಮವಾಗಿ ಪ್ರಜ್ಞಾನಂದ ಜಯಗಳಿಸಿದರು. 82ನೇ ನಡೆಯಲ್ಲಿ ಸಿಂಡರೋವ್ ಮಾಡಿದ ಗಂಭೀರ ತಪ್ಪಿನ ಪ್ರಯೋಜನವನ್ನು ಪಡೆದುಕೊಂಡ ಪ್ರಜ್ಞಾನಂದ ಸರಣಿ ನಿಖರ ನಡೆಗಳನ್ನು ದಾಖಲಿಸಿದರು. ಹಾಗಾಗಿ, 13 ನಡೆಗಳ ನಂತರ ಉಜ್ಬೇಕಿಸ್ತಾನ್ ಆಟಗಾರ ಸೋಲೊಪ್ಪಿಕೊಳ್ಳಬೇಕಾಯಿತು.

ಈ ಗೆಲುವಿನೊಂದಿಗೆ, ಪ್ರಜ್ಞಾನಂದ ಎರಡು ಸುತ್ತುಗಳಿಂದ 1.5 ಅಂಕಗಳನ್ನು ಕಲೆಹಾಕಿದ್ದಾರೆ ಹಾಗೂ ಫ್ಯಾಬಿಯಾನೊ ಕರುವಾನಾ, ವೆಸ್ಲಿ ಸೋ, ಲೇವನ್ ಅರೋನಿಯನ್ ಮತ್ತು ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್ ಅವರೊಂದಿಗೆ ಅಂಕಪಟ್ಟಿಯ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ಅದೇ ವೇಳೆ, ಕೇರ್ನ್ಸ್ ಕಪ್‌ನ ಎರಡನೇ ಸುತ್ತಿನಲ್ಲಿ ಭಾರತದ ಆಟಗಾರರು ಕಠಿಣ ಸವಾಲು ಎದುರಿಸಿದರು. ಆರ್ ವೈಶಾಲಿ, ದಿವ್ಯಾ ದೇಶ್‌ಮುಖ್ ಮತ್ತು ಕೊನೇರು ಹಂಪಿ ಮೂವರೂ ಸೇರಿ ಕೇವಲ ಅರ್ಧ (0.5) ಅಂಕವನ್ನು ಗಳಿಸಿದರು.

ವೈಶಾಲಿ ಬಿಬಿಸಾರಾ ಅಸೌಬಾಯೇವಾ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡರೆ, ದಿವ್ಯಾ ಅಲಿಸ್ ಲೀ ವಿರುದ್ಧ ಸೋಲನುಭವಿಸಿದರು. ಹಂಪಿ ಟ್ಯಾನ್ ಝೋಂಗಿ ವಿರುದ್ಧ ಪರಾಭವಗೊಂಡರು.

ಎರಡು ಸುತ್ತುಗಳ ನಂತರ ವೈಶಾಲಿ ಮತ್ತು ಹಂಪಿ ತಲಾ 0.5 ಅಂಕಗಳನ್ನು ಹೊಂದಿದ್ದರೆ, ದಿವ್ಯಾ 1 ಅಂಕ ಹೊಂದಿದ್ದಾರೆ. ಝೋಂಗಿ ಮತ್ತು ಲೀ ಎರಡೂ ಸುತ್ತುಗಳಲ್ಲಿ ಗೆದ್ದು ಅಗ್ರಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News