ಟೆಸ್ಟ್ ಕ್ರಿಕೆಟಿಗೆ ಅನ್ಶುಲ್ ಕಾಂಬೋಜ್ ಪಾದಾರ್ಪಣೆ?
ಅನ್ಶುಲ್ ಕಾಂಬೋಜ್ | PC : @definitelynot05
ಮ್ಯಾಂಚೆಸ್ಟರ್: ಟೀಮ್ ಇಂಡಿಯಾವನ್ನು ಇಂಗ್ಲೆಂಡ್‌ನಲ್ಲಿ ಶನಿವಾರ ಸೇರಿಕೊಂಡಿರುವ ಬಲಗೈ ವೇಗದ ಬೌಲರ್ ಅನ್ಶುಲ್ ಕಾಂಬೋಜ್ ಅವರು ರವಿವಾರ ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರರೊಂದಿಗೆ ಸ್ವಲ್ಪ ಸಮಯ ಕಳೆದರು. ಸೋಮವಾರ ಸಂಪೂರ್ಣ ಸಾಮರ್ಥ್ಯದೊಂದಿಗೆ ನೆಟ್ ಅಭ್ಯಾಸ ನಡೆಸಿದರು. ಬುಧವಾರ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡುವ ಸಾಧ್ಯತೆಯಿದೆ.
ಭಾರತದ ಪಾಳಯದಲ್ಲಿ ಗಾಯದ ಸಮಸ್ಯೆ ಕಾಡಿದ ಕಾರಣ 24ರ ಹರೆಯದ ಅನ್ಶುಲ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಯುವ ಬೌಲರ್ ನೆಟ್‌ನಲ್ಲಿ ಹೊಸ ಚೆಂಡಿನೊಂದಿಗೆ 45ಕ್ಕೂ ಅಧಿಕ ಓವರ್ ಗಳನ್ನು ಬೌಲಿಂಗ್ ಮಾಡಿದರು. ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ರೊಂದಿಗೆ ಚರ್ಚೆ ನಡೆಸಿದರು. ತನ್ನ ಸಹ ಆಟಗಾರ ಜಸ್‌ಪ್ರಿತ್ ಬುಮ್ರಾ, ಮುಹಮ್ಮದ್ ಸಿರಾಜ್ ಹಾಗೂ ಶಾರ್ದುಲ್ ಠಾಕೂರ್ ಅವರೊಂದಿಗೆ ಮಾತನಾಡಿದರು. ಕೆ.ಎಲ್.ರಾಹುಲ್, ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಗೆ ಬೌಲಿಂಗ್ ಮಾಡುವಾಗ ಉತ್ತಮ ಲಯದಲ್ಲಿದ್ದಂತೆ ಕಂಡುಬಂದರು.
ಭಾರತೀಯ ಕ್ರಿಕೆಟ್ ತಂಡದೊಂದಿಗೆ ತನ್ನ ಮೊದಲ ನೆಟ್ ಪ್ರಾಕ್ಟೀಸ್ ವೇಳೆ ಕಾಂಬೋಜ್ ಭಾರೀ ಬೆವರಿಳಿಸಿದರು.ಆಕಾಶ್ ದೀಪ್ ಇನ್ನಷ್ಟೇ ಗಾಯದಿಂದ ಚೇತರಿಸಿಕೊಳ್ಳಬೇಕಾಗಿದೆ. ಅರ್ಷದೀಪ್ ಸಿಂಗ್ ಈಗಾಗಲೇ ಸರಣಿಯಿಂದ ಹೊರಗುಳಿದಿರುವ ಕಾರಣ ಭಾರತದ ಆಡುವ 11ರ ಬಳಗ ಇನ್ನೂ ಅಂತಿಮವಾಗಿಲ್ಲ.