ಬಿಎಫ್ಐ ಅಧ್ಯಕ್ಷ ಸ್ಥಾನಕ್ಕೆ ಅನುರಾಗ್ ಠಾಕೂರ್ ಮತ್ತೆ ನಾಮನಿರ್ದೇಶನ
ಅನುರಾಗ್ ಠಾಕೂರ್ | PTI
ಹೊಸದಿಲ್ಲಿ, ಆ.5: ಮಾಜಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾರತದ ಬಾಕ್ಸಿಂಗ್ ಫೆಡರೇಶನ್ ನ(ಬಿಎಫ್ಐ)ಅಧ್ಯಕ್ಷರಾಗುವ ಸ್ಪರ್ಧೆಯಲ್ಲಿದ್ದಾರೆ.
ಹಿಮಾಚಲಪ್ರದೇಶ ಬಾಕ್ಸಿಂಗ್ ಅಸೋಸಿಯೇಶನ್(ಎಚ್ಪಿಬಿಎ)ಆಗಸ್ಟ್ 21ರಂದು ನಡೆಯಲಿರುವ ಬಿಎಫ್ಐ ಚುನಾವಣೆಗೆ ಠಾಕೂರ್ ಹಾಗೂ ಅದರ ಅಧ್ಯಕ್ಷ ರಾಜೇಶ್ ಭಂಡಾರಿ ಇಬ್ಬರನ್ನೂ ತನ್ನ ಪ್ರತಿನಿಧಿಗಳಾಗಿ ನಾಮನಿರ್ದೇಶನ ಮಾಡಿದೆ.
ಈ ಮೊದಲು ಮಾರ್ಚ್ 28ರಂದು ನಿಗದಿಯಾಗಿದ್ದ ಚುನಾವಣೆಗೆ ಠಾಕೂರ್ ಕೂಡ ಸ್ಪರ್ಧೆಯಲ್ಲಿದ್ದರು. ಆದರೆ ಆಗಿನ ಬಿಎಫ್ಐ ಅಧ್ಯಕ್ಷ ಅಜಯ್ ಸಿಂಗ್ ಹಾಗೂ ಆಗಿನ ಚುನಾವಣಾ ಅಧಿಕಾರಿ ಅನುಮೋದಿಸಿದ ಎಲೆಕ್ಟೋರಲ್ ಕಾಲೇಜ್ನಿಂದ ಠಾಕೂರ್ ರನ್ನು ಹೊರಗಿಡಲಾಗಿತ್ತು.
‘‘ನಾವು ಅನುರಾಗ್ ಠಾಕೂರ್ ಹಾಗೂ ನನ್ನ ಹೆಸರನ್ನು ಎಚ್ ಪಿ ಬಿ ಎ ಪ್ರತಿನಿಧಿಗಳಾಗಿ ಕಳುಹಿಸಿದ್ದೇವೆ’’ ಎಂದು ಭಂಡಾರಿ ಹೇಳಿದರು.
ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಠಾಕೂರ್ ಅವರನ್ನು ಈ ಹಿಂದೆ ಕೈಬಿಟ್ಟಿರುವುದು ಈಗಾಗಲೇ ಕಾನೂನು ಕ್ರಮಕ್ಕೆ ಕಾರಣವಾಗಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಲಾಗಿದೆ.