ಚೆಸ್: ವಿಶ್ವದ ನಂ.1 ಕಾರ್ಲ್‌ಸನ್ ವಿರುದ್ಧ ಡ್ರಾ ಸಾಧಿಸಿದ ಭಾರತದ ಪೋರ ಆರಿತ್ ಕಪಿಲ್
ಹೊಸದಿಲ್ಲಿ: ಭಾರತದ 9ರ ಹರೆಯದ ಪೋರ ಆರ್ತಿ ಕಪಿಲ್ ಬುಧವಾರ ನಡೆದ ಆನ್‌ಲೈನ್ ಚೆಸ್ ಟೂರ್ನಮೆಂಟ್ ‘ಅರ್ಲಿ ಟೈಟಲ್ಡ್ ಟ್ಯೂಸ್‌ಡೇ’ನಲ್ಲಿ ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಸಾಧಿಸಿ ಮಹತ್ವ ಸಾಧನೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಅಂಡರ್-9 ನ್ಯಾಶನಲ್ ಚಾಂಪಿಯನ್ ಶಿಪ್ ನಲ್ಲಿ ರನ್ನರ್ಸ್ ಅಪ್ ಆಗಿದ್ದ ಆರ್ತಿ ಕಪಿಲ್, ಐದು ಬಾರಿಯ ವಿಶ್ವ ಚಾಂಪಿಯನ್ ಕಾರ್ಲ್‌ಸನ್ ವಿರುದ್ಧ ಪಂದ್ಯದಲ್ಲಿ ಪ್ರಾಬಲ್ಯ ಮೆರೆದರು.
ಸಮಯದ ಒತ್ತಡವು ಭಾರತದ ಕಿರಿಯ ವಯಸ್ಸಿನ ಚೆಸ್ ತಾರೆಗೆ ವಿಶ್ವ ಶ್ರೇಷ್ಠ ಆಟಗಾರನ ವಿರುದ್ಧ ಗೆಲುವು ಸಾಧಿಸಲು ಅಡ್ಡಿಯಾಯಿತು. ಆರ್ತಿ ಕಪಿಲ್ ಅಂತಿಮವಾಗಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಶಾಲಾ ಬಾಲಕನು ಕಾರ್ಲ್‌ಸನ್‌ಗೆ ಸೋಲಿಸುವ ಸನಿಹ ತಲುಪಿದ್ದು ಈಗಲೂ ಈ ಪ್ರದರ್ಶನವು ಚೆಸ್ ಜಗತ್ತಿನಲ್ಲಿ ಆಘಾತದ ಅಲೆ ಎಬ್ಬಿಸಿದೆ.
ದಿಲ್ಲಿಯ ಬಾಲಕ ಜಾರ್ಜಿಯಾದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಂಡರ್-10 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಸಲುವಾಗಿ ಕಪಿಲ್ ಸದ್ಯ ಜಾರ್ಜಿಯಾದ ಹೊಟೇಲ್‌ನಲ್ಲಿ ತಂಗಿದ್ದಾರೆ.
ಭಾರತೀಯ ಆಟಗಾರ ವಿ.ಪ್ರಣವ್ 11ರಲ್ಲಿ 10 ಅಂಕ ಗಳಿಸಿ ‘ಅರ್ಲಿ ಟೈಟಲ್ಡ್ ಟ್ಯೂಸ್‌ಡೇ’ ಟೂರ್ನಮೆಂಟ್ ಗೆದ್ದಿದ್ದಾರೆ.
ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಹಾನ್ಸ್ ಮೋಕ್ ನೀಮನ್ ಹಾಗೂ ಕಾರ್ಲ್‌ಸನ್ 9.5 ಅಂಕದೊಂದಿಗೆ ಟೈ ಸಾಧಿಸಿದರು. ಟೈ ಬ್ರೇಕರ್‌ನಲ್ಲಿ ನೀಮನ್ 2ನೇ ಸ್ಥಾನ ಪಡೆದರು.
ಮ್ಯಾಗ್ನಸ್ ಕಾರ್ಲ್‌ಸನ್ ಅವರು ಇತ್ತೀಚೆಗೆ ಫ್ರೀಸ್ಟೈಲ್ ಚೆಸ್ ನಲ್ಲಿ 2900 ರೇಟಿಂಗ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದರು. ಈ ಮಾದರಿಯಲ್ಲಿ ಈ ಮೈಲಿಗಲ್ಲನ್ನು ಯಾರೂ ಸಾಧಿಸಿಲ್ಲ.
ಸುಮಾರು 15 ವರ್ಷಗಳಿಂದ ವಿಶ್ವದ ನಂ.1 ಸ್ಥಾನವನ್ನು ಕಾಯ್ದುಕೊಂಡಿರುವ ಕಾರ್ಲ್‌ಸನ್ ಈ ಹಿಂದೆ 2024ರ ಮೇನಲ್ಲಿ ಕ್ಲಾಸಿಕಲ್ ಚೆಸ್ ರೇಟಿಂಗ್ ನಲ್ಲಿ 2882 ಅಂಕ ಗಳಿಸಿದ್ದರು.