ಎಸ್ಪೋರ್ಟ್ಸ್ ವರ್ಲ್ಡ್‌ಕಪ್ ಗೆ ಅರ್ಹತೆ ಪಡೆದ ಭಾರತದ ಮೊದಲ ಚೆಸ್ ಆಟಗಾರ ಅರವಿಂದ್ ಚಿದಂಬರಂ
ಅರವಿಂದ್ ಚಿದಂಬರಂ | Photo Credit : S8UL \ indianexpress.com
ಹೊಸದಿಲ್ಲಿ, ಮೇ 18: ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಅರವಿಂದ್ ಚಿದಂಬರಂ ಡ್ರೀಮ್‌ಹ್ಯಾಕ್ ಅಟ್ಲಾಂಟದಲ್ಲಿ ರೋಡ್ ಟು ಇಡಬ್ಲ್ಯುಸಿ ಕ್ವಾಲಿಫೈಯರ್ ಟೂರ್ನಿಯನ್ನು ಗೆದ್ದ ನಂತರ ಚೆಸ್‌ನ ಪ್ರಮುಖ ಸ್ಪರ್ಧೆಯಾಗಿರುವ ಎಸ್ಪೋರ್ಟ್ಸ್ ವರ್ಲ್ಡ್ ಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಮೊದಲ ಭಾರತೀಯ ಚೆಸ್ ಆಟಗಾರ ಎನಿಸಿಕೊಂಡಿದ್ದಾರೆ.
ಅತ್ಯಂತ ಒತ್ತಡದ ರ್ಯಾಪಿಡ್ ಮಾದರಿಯ ಚೆಸ್‌ನಲ್ಲಿ 26ರ ವಯಸ್ಸಿನ ಅರವಿಂದ್ ಅತ್ಯುತ್ತಮ ಪ್ರದರ್ಶನ ನೀಡಿದರು. ರ್ಯಾಪಿಡ್ ಮಾದರಿಯಲ್ಲಿ ಎರಡು 10 ನಿಮಿಷಗಳ ಗೇಮ್‌ಗಳು ಇರುತ್ತವೆ. ಆ ನಂತರ ಅಗತ್ಯವಿದ್ದರೆ ಟೈ-ಬ್ರೇಕರ್‌ಗಳು ಇರುತ್ತವೆ. ಪಂದ್ಯಾವಳಿಯಲ್ಲಿ ಎರಡು ಡಬಲ್-ಎಲಿಮಿನೇಶನ್ ಗುಂಪುಗಳು ಇರುತ್ತವೆ. ಪ್ರತೀ ಗುಂಪಿನ ಅಗ್ರ ನಾಲ್ವರು ಆಟಗಾರರು ಪ್ಲೇ ಆಫ್‌ಗೆ ತೇರ್ಗಡೆಯಾಗಲಿದ್ದಾರೆ.
ಅರವಿಂದ್ ಅವರು ಕೈಲರ್ ರೈನ್ಸ್, ಜಸ್ಟಿನ್ ಲಿಯಾಂಗ್, ಒಲೆಕ್ಸಾಂಡರ್ ಬೊರ್ಟ್ನಿಕ್ ಹಾಗೂ ಕ್ರಿಸ್ಟೋಫರ್ ವೂ ಅವರನ್ನು ಮಣಿಸಿದ ನಂತರ ‘ಬಿ’ ಗುಂಪಿನಿಂದ ಮುಂದಿನ ಸುತ್ತಿಗೇರಿದರು. ಸೆಮಿ ಫೈನಲ್‌ನಲ್ಲಿ ವೂ ವಿರುದ್ಧ 2-1 ಅಂತರದಿಂದ ಜಯಶಾಲಿಯಾದ ಅರವಿಂದ್, ಎರಡು ಬಾರಿ ಡ್ರಾ ಸಾಧಿಸಿದ ನಂತರ ಸ್ಪರ್ಧೆಯಲ್ಲಿ ಜಯಶಾಲಿಯಾದರು.
ಅಪ್ಪರ್ ಬ್ರಾಕೆಟ್ ಫೈನಲ್‌ನಲ್ಲಿ ಅಲೆಕ್ಸಿ ಸರಾನರನ್ನು 2-1 ಅಂತರದಿಂದ ಮಣಿಸಿದ ಅರವಿಂದ್ ಗ್ರ್ಯಾಂಡ್‌ಫೈನಲ್‌ನಲ್ಲಿ ತನ್ನ ಸ್ಥಾನ ಪಡೆದರು.
ಫೈನಲ್ ನಲ್ಲಿ ಆರಂಭಿಕ ಎರಡು ಗೇಮ್‌ಗಳ ಸೋಲಿನಿಂದ ಬೇಗನೆ ಹೊರಬಂದ ಅರವಿಂದ್, ಒತ್ತಡದಲ್ಲೂ ಪ್ರತಿರೋಧ ವ್ಯಕ್ತಪಡಿಸಿ, ಆರ್ಮಗೆಡನ್ ಪಂದ್ಯವನ್ನು ಗೆದ್ದುಕೊಂಡರು.
ಈ ಗೆಲುವಿನ ಮೂಲಕ ಅರವಿಂದ್ 15,000 ಯುಎಸ್‌ಡಿ (ಸುಮಾರು 14 ಲಕ್ಷ ರೂ.) ಬಹುಮಾನ ಹಾಗೂ ಇಡಬ್ಲ್ಯುಸಿ–2026ರ ಚೆಸ್ ಪ್ರಧಾನ ಸ್ಪರ್ಧೆಗೆ ಸ್ಥಾನ ಖಚಿತಪಡಿಸಿದರು. ಈ ಟೂರ್ನಿಯು ಆಗಸ್ಟ್ 11ರಿಂದ 15ರ ತನಕ ನಡೆಯಲಿದೆ.