×
Ad

ಆ್ಯಶಸ್ ಸರಣಿ |ಮತ್ತೆ ಸ್ನೀಕೊ ಮೀಟರ್ ವಿವಾದ: ಕಳಪೆ ತಂತ್ರಜ್ಞಾನಕ್ಕೆ ಬಲಿಯಾದ ಇಂಗ್ಲೆಂಡ್ ಬ್ಯಾಟರ್!

Update: 2025-12-18 16:34 IST

ಅಲೆಕ್ಸ್ ಕ್ಯಾರಿ | Photo Credit : AP \ PTI

ಅಡಿಲೇಡ್: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಆ್ಯಶಸ್ ಸರಣಿಯಲ್ಲಿ ಸ್ನೀಕೊ ಮೀಟರ್ ವಿವಾದ ಸ್ಫೋಟಗೊಂಡಿದೆ. ಇದು ಪ್ರವಾಸಿ ಇಂಗ್ಲೆಂಡ್ ತಂಡದ ಆಕ್ರೋಶಕ್ಕೆ ಕಾರಣವಾಗಿದೆ.

ಆ್ಯಶಸ್ ಸರಣಿಯ ಮೂರನೆಯ ಟೆಸ್ಟ್ ನ ಮೊದಲ ದಿನದಾಟದಲ್ಲಿ ಸ್ನೀಕೊ ಮೀಟರ್ ಎಡವಟ್ಟಿನಿಂದಾಗಿ ಆಸೀಸ್ ಬ್ಯಾಟರ್ ಅಲೆಕ್ಸ್ ಕ್ಯಾರಿಗೆ ಜೀವದಾನ ದೊರೆತಿತ್ತು. ಬಳಿಕ ಅವರು ಶತಕ ಬಾರಿಸಿದ್ದರು. ಇದರಿಂದ ಇಂಗ್ಲೆಂಡ್ ತಂಡದಲ್ಲಿ ಅಸಮಾಧಾನ ಮನೆ ಮಾಡಿತ್ತು.

ಇದೀಗ ಎರಡನೆ ದಿನದಂದೂ ಸ್ನೀಕೊ ಮೀಟರ್ ತಪ್ಪಿನಿಂದಲೇ ಇಂಗ್ಲೆಂಡ್ ಬ್ಯಾಟರ್ ಜೇಮೀ ಸ್ಮಿತ್ ಔಟ್ ತೀರ್ಪಿಗೆ ಬಲಿಯಾಗಿದ್ದು, ಇದು ಇಂಗ್ಲೆಂಡ್ ತಂಡದ ಆಕ್ರೋಶಕ್ಕೆ ಕಾರಣವಾಗಿದೆ. ಸತತ ಎರಡು ದಿನದಲ್ಲಿ ಸತತ ಎರಡು ಬಾರಿ ಸ್ನೀಕೊಮೀಟರ್ ಕೈಕೊಟ್ಟಿದ್ದು, ಇದರಿಂದಾಗಿ ಅದರ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಯೆದ್ದಿದೆ.

ಜೇಮೀ ಸ್ಮಿತ್ ಗೆ ಪ್ಯಾಟ್ ಕಮಿನ್ಸ್ ಶಾರ್ಟ್ ಬಾಲ್ ಹಾಕಿದಾಗ ಈ ಘಟನೆ ನಡೆಯಿತು. ಆ ಬಾಲನ್ನು ಪುಲ್ ಮಾಡಲು ಜೇಮೀ ಸ್ಮಿತ್ ಪ್ರಯತ್ನಿಸಿದರು. ಆದರೆ, ಬ್ಯಾಟ್ ಅನ್ನು ವಂಚಿಸಿದ ಆ ಬಾಲ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರಿತು. ಮೈದಾನದಲ್ಲಿದ್ದ ಅಂಪೈರ್ ನಿತಿನ್ ಮೆನನ್ ಕ್ಯಾಚ್ ಸಮರ್ಪಕವಾಗಿದೆಯೇ ಎಂದು ಪರಿಶೀಲಿಸಲು ಮೂರನೆಯ ಅಂಪೈರ್ ಗೆ ಮನವಿ ಮಾಡಿದರು. ಈ ವೇಳೆ, ರೀಪ್ಲೇಗಳಲ್ಲಿ ಬ್ಯಾಟ್ ಮತ್ತು ಬಾಲ್ ನಡುವೆ ಅಂತರವಿರುವುದು ಸ್ಪಷ್ಟವಾಗಿ ಕಂಡು ಬಂದಿತು. ಆದರೆ, ಬಾಲ್ ಜೇಮೀ ಸ್ಮಿತ್ ಅವರ ಬ್ಯಾಟ್ ದಾಟುತ್ತಿದ್ದಂತೆಯೇ ಸ್ನೀಕೊ ಮೀಟರ್ ಸ್ಟ್ರೈಕ್ ತೋರಿಸಿತು. ಈ ಸ್ಟ್ರೈಕ್ ಆಧಾರದಲ್ಲಿ ಮೂರನೆಯ ಅಂಪೈರ್ ಕ್ರಿಸ್ ಗಫಾನಿ ಔಟ್ ಎಂದು ತೀರ್ಪು ನೀಡಿದರು.

ಮೂರನೆಯ ಅಂಪೈರ್ ತೀರ್ಪು ಕಂಡ ಕೂಡಲೇ ಜೇಮೀ ಸ್ಮಿತ್ ಅದನ್ನು ನಂಬಲಾಗದೆ ಹತಾಶೆ ವ್ಯಕ್ತಪಡಿಸಿದರು. ನಾಯಕ ಬೆನ್ ಸ್ಟ್ರೋಕ್ ಕೂಡಾ ನಿರಾಶರಾದಂತೆ ಕಂಡು ಬಂದಿತು.

ಈ ನಡುವೆ, ಮೊದಲ ದಿನದಾಟದ ವಿವಾದದ ಬಳಿಕ, ಸ್ನೀಕೊ ಮೀಟರ್ ತಂತ್ರಜ್ಞಾನದ ಪೂರೈಕೆದಾರ ಸಂಸ್ಥೆಯಾದ ಬಿಬಿಜಿ ಸ್ಪೋರ್ಟ್ಸ್, “ಆಪರೇಟರ್ ಒಬ್ಬರು ಆಡಿಯೊ ಸಂಸ್ಕರಣೆಗಾಗಿ ತಪ್ಪಾದ ಸ್ಟಂಪ್ ಮೈಕ್ ಆಯ್ಕೆ ಮಾಡಿಕೊಂಡಿದ್ದಾರೆ” ಎಂದು ತಪ್ಪೊಪ್ಪಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News